ಮಾರ್ವೆ ಮೀನು ಸಾಕಾಣಿಕೆ, ಮಾರಾಟ: ಅಧಿಕಾರಿಗಳ ಜಾಣಕುರುಡು
-ಎನ್.ಬಾಬು
ಚಿಂತಾಮಣಿ: ಸರ್ಕಾರ ಮಾರ್ವೆ(ಆಫ್ರಿಕನ್ ಕ್ಯಾಟ್ ಮೀನು)ಗಳ ಸಾಕಾಣಿಕೆ ಮತ್ತು ಮಾರಾಟ ನಿಷೇಧಿಸಿದ್ದರೂ, ತಾಲೂಕು ಆಡಳಿತ ಯಂತ್ರಾಂಗವು ಮೌನ ವಹಿಸಿರುವ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಚಿನ್ನಸಂದ್ರ ಹಾಗೂ ಕೆಂದನಹಳ್ಳಿ ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿ ಎಗ್ಗಿಲ್ಲದಂತೆ ರಾಜಾರೋಷವಾಗಿ ಮಾರ್ವೆ(ಆಫ್ರಿಕನ್ ಕ್ಯಾಟ್ ಮೀನು) ಮರಿಗಳ ಸಾಕಾಣಿಕೆ ಮತ್ತು ಮಾರಾಟ ನಡೆಯುತ್ತಿದ್ದರೂ ಸ್ಥಳೀಯ ತಾಲೂಕು ದಂಡಾಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸದೇ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಹಲವು ದಿನಗಳಿಂದ ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ತಾಲೂಕು ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಎತ್ತೆಚ್ಚುಕೊಂಡು ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ಮೀನುಗಳನ್ನು ತಂದು ಗುಣಿಯಲ್ಲಿ ಇಟ್ಟು ಇದಕ್ಕೆ ಸತ್ತ ಹುಳು ಹಾಗೂ ನಾಯಿ ಮತ್ತು ಕೋಳಿಯ ಬಿಡಿ ಭಾಗಗಳನ್ನು ಇದಕ್ಕೆ ಹಾಕಿ ಸಾಕಾಣಿಕೆ ಮಾಡುತ್ತಿರುವುದರಿಂದ ದುರ್ವಾಸನೆ ಮತ್ತು ಪರಿಸರದ ಮೇಲೆ ಕೆಟ್ಟ ಗಾಳಿ ಬೀಸಿ ಜನರಿಗೆ ವಿವಿಧ ರೋಗ ರುಜಿನಗಳು ಬರುವ ಆತಂಕದಲ್ಲಿದ್ದಾರೆ.
ಪಟ್ಟಣದ ಸುತ್ತಮುತ್ತಲಿನ ರೇಲ್ವೆ ಸ್ಟೇಷನ್ ಹತ್ತಿರ ತಾಲೂಕಿನ ವ್ಯಾಪ್ತಿಯ ಚಿನ್ನಸಂದ್ರ, ಕೋನಪ್ಪಲ್ಲಿ ಸೇರಿದಂತೆ ಹಲವು ಭಾಗಗಳಲ್ಲಿ ಮಾರ್ವೆ ಮೀನುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಇಲ್ಲಿ ಸಾಕಾಣಿಕೆ ಮಾಡುವ ಮೀನುಗಳನ್ನು ಪಟ್ಟಣದ ಮೀನು ವ್ಯಾಪಾರಿಗಳು ಸಾರ್ವಜನಿಕ ಪ್ರದೇಶಗಳಾದ ಹಳೇ ಸಂತೆ ಮೈದಾನ, ಎನ್.ಎನ್.ಟಿ ವೃತ್ತದ ಹತ್ತಿರ, ಚೇಳೂರು ವೃತ್ತ ಸೇರಿದಂತೆ ಪಟ್ಟಣದ ಹಲವು ಭಾಗಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಎಲ್ಲೆಂದರಲ್ಲಿ ತ್ಯಾಜ್ಯ: ಮಾರ್ವೆ ಮೀನುಗಳನ್ನು ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಮೀನುಗಳನ್ನು ಕತ್ತರಿಸಿ ಅದರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲೇ ಬಿಸಾಡಲಾಗುತ್ತಿದೆ. ಪರಿಣಾಮ ಬೀದಿ ನಾಯಿಗಳು ಇವುಗಳನ್ನು ತಿನ್ನಲು ಗುಂಪು ಗುಂಪು ಕಟ್ಟಿರುತ್ತವೆ. ಇದರಿಂದ ಈ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡುವುದೇ ವಿರಳವಾಗಿದೆ. ಪಟ್ಟಣದ ಮೀನುಗಾರಿಕೆಯ ಇಲಾಖೆಯ ಅಧಿಕಾರಿಗಳು ಈ ಅಕ್ರಮ ಮೀನುಗಾರಿಕೆಯ ಮಾರಾಟ ಮತ್ತು ಸಾಕಾಣಿಕೆಯ ದಂಧೆಯನ್ನು ಕಡಿವಾಣ ಹಾಕಲು ವಿಫಲಗೊಂಡಿದ್ದಾರೆಂಬುದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ಈ ಹಿಂದೆ ಪರರಾಜ್ಯದ ಲಾರಿಯೊಂದನ್ನು ಹೆಸರಿಗೆ ಮಾತ್ರ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದನ್ನು ಬಿಟ್ಟರೆ ತಾಲೂಕು ವ್ಯಾಪ್ತಿಯ ಮಾರ್ವೆ ಮೀನಿನ ಸಾಕಾಣಿಕೆ ಮಾಡುತ್ತಿರುವುದನ್ನು ಅಥವಾ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ತಾಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಗುಣಿಗಳನ್ನು ತೆಗೆದು ಮಾರ್ವೆ ಮೀನುಗಳನ್ನು ಸಾಕಾಣಿಕೆ ಮಾಡುತ್ತಿರುವ ಮತ್ತು ಮಾರಾಟ ಮಾಡುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ತಡೆಗಟ್ಟಬೇಕು. ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಈ ಕ್ರಮಕ್ಕೆ ಎಂದು ಮುಂದಾಗುವರೋ ಕಾದು ನೋಡಬೇಕು.