ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೇರಳದತ್ತ ಜೆಡಿಎಸ್, ಬಿಜೆಪಿಯ 16 ಸದಸ್ಯರು

Srinivasa Murthy VN
Updated On : 30 Aug 2013, 12:41 pm

ಕ.ಪ್ರ.ವಾರ್ತೆ ಕೋಲಾರ ಆ.29
ಇಲ್ಲಿನ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆ. 6 ರಂದು ಚುನಾವಣೆ ನಿಗದಿ ಆಗಿರುವ ಹಿನ್ನಲೆಯಲ್ಲಿ ಜೆಡಿಎಸ್‌ನ 13 ಮಂದಿ ಹಾಗೂ ಬಿಜೆಪಿಯ 3 ಬಂಡಾಯ ಸದಸ್ಯರು ಸೇರಿ ಒಟ್ಟು 16 ಸದಸ್ಯರು ಗುರುವಾರ ಸಂಜೆ ತಾಲೂಕಿನ ನರಸಾಪುರ ಸಮೀಪದ ಕಾಮತ್ ಹೊಟೇಲ್‌ನಲ್ಲಿ ಸಭೆ ಸೇರಿ ಒಗ್ಗಟ್ಟು ಕಾಯ್ದುಕೊಳ್ಳುವ ಸಲುವಾಗಿ ಕೇರಳದತ್ತ ಪ್ರವಾಸ ತೆರಳಿದರು.
ಯಾವುದೇ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ತಂತ್ರಗಾರಿಕೆಯ ಮೂಲಕ ಜೆಡಿಎಸ್‌ಗೆ ತಮ್ಮದೇ ಆದ ಶಕ್ತಿ ತುಂಬಿ ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವ ಉಳಿಸುತ್ತಾ ಬಂದಿರುವ ಹೆಸರು ಹೇಳಲಿಚ್ಚಿಸದ ಹಿರಿಯ ಸಹಕಾರಿಯೊಬ್ಬರು ಗುರುವಾರ ಜೆಡಿಎಸ್‌ನ 13 ಹಾಗೂ ಬಿಜೆಪಿಯ ಮೂರು ಸದಸ್ಯರೊಂದಿಗೆ ರಹಸ್ಯ ಸಭೆ ನಡೆಸಿ ಜಿಲ್ಲಾ ಪಂಚಾಯಿತಿಯ ಆಡಳಿತ ಹಿಡಿಯಲು ಎಲ್ಲ 16 ಮಂದಿ ಸದಸ್ಯರು ಒಗ್ಗಟ್ಟಿನ ಪ್ರದರ್ಶನ ಮಾಡಬೇಕೆಂದು ಸಲಹೆ ನೀಡಿ ಈ ಎಲ್ಲ ಸದಸ್ಯರನ್ನು ಕೇರಳ ರಾಜ್ಯಕ್ಕೆ ಪ್ರವಾಸ ಹೋಗುವುದಕ್ಕೆ ವ್ಯವಸ್ಥೆ ಮಾಡಿರುವುದು ಕಾಂಗ್ರೆಸ್ ಮತ್ತು ಶಾಸಕ ವರ್ತೂರ್ ಪ್ರಕಾಶ್ ಬಣದ ಸದಸ್ಯರಲ್ಲಿ ತಳಮಳಕ್ಕೆ ಕಾರಣವಾಗಿದೆ.
ಬಿಜೆಪಿಯ ಬಂಡಾಯ ಸದಸ್ಯರಾದ ಸಿಮೋಲ್ ಮೋಹನ್ ಈ ಹಿಂದೆಯೂ ಜೆಡಿಎಸ್‌ಗೆ ಬೆಂಬಲ ನೀಡಿದ್ದರು. ಹಾಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿಯ ಮುತ್ಯಾಲಮ್ಮ ಹಾಗೂ ಡಿ.ಕೆ. ಹಳ್ಳಿಯ ನಾರಾಯಣಮ್ಮನವರು ಜೆಡಿಎಸ್ ಕ್ಯಾಂಪ್ ಸೇರಿರುವುದು ಬಿಜೆಪಿಯಲ್ಲಿ ಎಲ್ಲವೂ ನೆಟ್ಟಗಿಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ.
ಜೆಡಿಎಸ್‌ನ ಹಿರಿಯ ಜಿ.ಪಂ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲೇಬೇಕೆಂದು ಅನೇಕರು ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರ ಮೇಲೆ ಒತ್ತಡ ತಂದಿದ್ದಾರೆ. ಅದೇ ರೀತಿ ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ವೇಮಗಲ್ ಜಿಪಂ ಸದಸ್ಯೆ ಆಶಾ ಲೋಕೇಶ್ ಪರವಾಗಿ ಲಾಬಿ ಮಾಡುತ್ತಿದ್ದು ಇವರಿಬ್ಬರ ನಡುವೆ ಇರುವ ಪೈಪೋಟಿಯಿಂದ ಕಾಂಗ್ರೆಸ್ ಇಲ್ಲವೇ ಶಾಸಕ ವರ್ತೂರ್ ಪ್ರಕಾಶ್ ಲಾಭ ಮಾಡಿಕೊಳ್ಳಬಹುದೆಂಬ ಅನುಮಾನದಿಂದ ಜೆಡಿಎಸ್‌ನ ಮುಖಂಡರೊಬ್ಬರು ಸದಸ್ಯರನ್ನು ಕಾಮತ್ ಹೊಟೇಲ್‌ನಲ್ಲಿ ಕಲೆಹಾಕಿ ಒಗ್ಗಟ್ಟಿನ ಮಾತ್ರ ಹೇಳಿ ಪ್ರವಾಸಕ್ಕೆ ಕಳುಹಿಸಿದ್ದು  
ಈ ರಾಜಕೀಯ ಬೆಳವಣಿಗೆಯನ್ನು ಕಾಂಗ್ರೆಸ್ ಮುಖಂಡರಾದ ಕೆ.ಹೆಚ್. ಮುನಿಯಪ್ಪ ಹಾಗೂ ಶಾಸಕ ವರ್ತೂರ್ ಪ್ರಕಾಶ್ ಯಾವ ರೀತಿ ಎದುರಿಸುತ್ತಾರೆ, ಜಿಲ್ಲಾ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಜಿ.ಪಂ ಸದಸ್ಯರನ್ನು ಯಾವ ರೀತಿ ಒಲಿಸಿಕೊಳ್ಳುತ್ತಾರೆಂಬುದು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement