ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಗರಸಭೆ ಅಧ್ಯಕ್ಷ ಗಾದಿಗೆ ದಳ ಮೇಲಾಟ

Srinivasa Murthy VN
Updated On : 30 Aug 2013, 12:39 pm

ಕ.ಪ್ರ.ವಾರ್ತೆ ಕೋಲಾರ ಆ. 29
ಇಲ್ಲಿನ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು ಬಹುಮತ ಹೊಂದಿರುವ ಜೆಡಿಎಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಜೆಡಿಎಸ್‌ನಿಂದ ಗೆದ್ದಿರುವ 17 ಸದಸ್ಯರ ಪೈಕಿ ಹಿರಿಯ ಸದಸ್ಯ ಪಿ.ವಿ. ರವೀಂದ್ರ, ಎಸ್.ಆರ್. ಮುರಳಿಗೌಡ, ಅಪ್ರೋಜ್ ಪಾಷಾ, ಪ್ರಥಮ ಬಾರಿಗೆ ಆಯ್ಕೆಯಾಗಿರುವ ಬಿ.ಎಂ. ಮುಬಾರಕ್ ಹಾಗೂ ಸುಕುಮಾರ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಇವರಲ್ಲದೆ ಜೆಡಿಎಸ್ ಬೆಂಬಲದಿಂದ ಗೆದ್ದಿರುವ 2ನೇ ವಾರ್ಡಿನ ಸಿಪಿಐಎಂ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಅವರೂ ಜೆಡಿಎಸ್ ಮುಖಂಡರ ಬೆಂಬಲ ಸಿಕ್ಕಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇಚ್ಛಿಸಿದ್ದಾರೆ.
ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದು, ಅವಕಾಶ ಸಿಗದಿದ್ದಲ್ಲಿ ಬಿನ್ನಮತ ಸೃಷ್ಟಿಯಾಗಬಹುದು. ಪರಿಶಿಷ್ಟ ಜಾತಿಗೆ ಸೇರಿದ ಗಾಂಧಿನಗರ ನಾರಾಯಣಸ್ವಾಮಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದಲ್ಲಿ ಜೆಡಿಎಸ್‌ಗೆ ಮುಂದಿನ ಚುನಾವಣೆಗಳಲ್ಲಿ ಅನುಕೂಲವಾಗುತ್ತದೆ ಎಂಬ ಸಂದೇಶವನ್ನು ಸಿಪಿಐಎಂ ಮುಖಂಡರು ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ. ಶ್ರೀನಿವಾಸಗೌಡರಿಗೆ ತಲುಪಿಸಲು ಮುಂದಾಗಿರುವುದರಿಂದ ಯಾರಿಗೆ ಅಧ್ಯಕ್ಷ ಪಟ್ಟ ಸಿಗುತ್ತದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿದೆ.
ಇತ್ತೀಚೆಗೆ ಜೆಡಿಎಸ್ ಕೆಲ ಸದಸ್ಯರು ಹಾಗೂ ಸಿಪಿಐಎಂ ಸದಸ್ಯ ಸಭೆ ಸೇರಿ ಒಮ್ಮತದ ಅಭ್ಯರ್ಥಿಯ ಆಯ್ಕೆಯ ಜವಾಬ್ದಾರಿಯನ್ನು ಕೆ. ಶ್ರೀನಿವಾಸಗೌಡರಿಗೆ ವಹಿಸಲು ನಿರ್ಣಯ ಕೈಗೊಂಡಿದ್ದಾರೆ.
ನಗರಸಭೆಯ ಒಟ್ಟು 35 ಸದಸ್ಯರಲ್ಲಿ ಜೆಡಿಎಸ್ 17, ಜೆಡಿಎಸ್ ಬೆಂಬಲಿತ ಸಿಪಿಐಎಂ 1, ಕಾಂಗ್ರೆಸ್ 9 ಹಾಗೂ ವರ್ತೂರ್ ಬಣದ 7 ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಒಬ್ಬರಿದ್ದು ಪಕ್ಷೇತರರ ಪೈಕಿ ಈಗಾಗಲೇ ಒಂದಿಬ್ಬರು ಕಾಂಗ್ರೆಸ್ ಹಾಗೂ ಒಂದಿಬ್ಬರು ಶಾಸಕ ವರ್ತೂರ್ ಪ್ರಕಾಶ್ ಜೊತೆ ಗುರುತಿಸಿಕೊಂಡಿದ್ದು, ಅಧ್ಯಕ್ಷರ ಚುನಾವಣೆಗೆ ದಿನ ನಿಗದಿಯಾದ ಮೇಲೆ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಕಳೆದ ಬಾರಿ ವರ್ತೂರ್ ಬಣದಿಂದ ಗೆದ್ದ 23 ಸದಸ್ಯರ ಪೈಕಿ ಕೆಲವರು ಕಾಂಗ್ರೆಸ್ ಜೊತೆ ಹೋಗಿದ್ದರಿಂದ ವರ್ತೂರ್ ಬಣದ ಸಂಖ್ಯೆ ಕಡಿಮೆಯಾಗಿತ್ತು. ಇದರ ಲಾಭ ಪಡೆದ ಕಾಂಗ್ರೆಸ್ ಜೆಡಿಎಸ್ ಬೆಂಬಲದಿಂದ ಅಧಿಕಾರ ನಡೆಸಿತ್ತು. ಈಗ ಜೆಡಿಎಸ್‌ನಲ್ಲಿ ಬಹುಮತವಿದ್ದರೂ ದಳಪತಿಗಳಲ್ಲಿ ಹೊಂದಾಣಿಕೆ ಕೊರತೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸಗೌಡರು ಸೋತ ನಂತರ ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿರುವ ಆಕಾಂಕ್ಷಿಗಳ ಮನವೊಲಿಸುವುದು ಮುಖಂಡರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಹೆಚ್ಚು ಮತಗಳನ್ನು ಗಳಿಸಬೇಕಾದ ಅನಿವಾರ್ಯತೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರಿಗೆ ಇರುವುದರಿಂದ ನಗರಸಭೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಶತ್ರುಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವೆಂಬ ಅಭಿಪ್ರಾಯ ಕೇಳಿ ಬರುತ್ತಿದೆ. ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಬಹುಮತವಿಲ್ಲ, ಹಾಗಾಗಿ ಶಾಸಕ ವರ್ತೂರ್ ಪ್ರಕಾಶ್ ಹಾಗೂ ಜೆಡಿಎಸ್ ಅತೃಪ್ತ ಸದಸ್ಯರ ಬೆಂಬಲಕ್ಕಾಗಿ ಮುನಿಯಪ್ಪ ಯಾವ ರೀತಿಯ ಲೆಕ್ಕಾಚಾರ ಹಾಕುತ್ತಾರೆಂಬುದು ನಿಗೂಢವಾಗಿದೆ.
ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರಿಗೆ ಶಾಸಕ ವರ್ತೂರ್ ಪ್ರಕಾಶ್ ಜೊತೆ ಕೈಜೋಡಿಸುವುದು ಇಷ್ಟವಿಲ್ಲ. ಅಧಿಕಾರ ಸಿಗದಿದ್ದರೂ ಪರವಾಗಿಲ್ಲ, ವರ್ತೂರ್ ಪ್ರಕಾಶ್ ಜೊತೆ ರಾಜಿ ಬೇಡವೆಂದು ನಜೀರ್ ಅಹಮ್ಮದ್ ಹಠ ಹಿಡಿದಲ್ಲಿ ಮುನಿಯಪ್ಪ ಧರ್ಮಸಂಕಟಕ್ಕೆ ಸಿಲುಕುವ ಸಾದ್ಯತೆಗಳಿದ್ದು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮುನಿಯಪ್ಪನವರು ಯಾವ ರೀತಿಯಲ್ಲಿ ತಂತ್ರಗಾರಿಕೆ ರೂಪಿಸುತ್ತಾರೆಂಬುದು ಕಾದು ನೋಡಬೇಕಾಗಿದೆ.
ಉತ್ತಮ ಆಡಳಿತಕ್ಕಾಗಿ ಭ್ರಷ್ಟರಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಜೆಡಿಎಸ್ ಸದಸ್ಯರು ತಮ್ಮ ಮುಖಂಡರ ಮುಂದೆ ವಾದ ಮಂಡಿಸಿದ್ದಾರೆ. 12ನೇ ವಾರ್ಡಿನ ಸದಸ್ಯ ರವೀಂದ್ರ ಹಿರಿಯ ರಾಜಕಾರಣಿ ಪಿ.ವಿ.ವೆಂಕಟಗಿರಿಯಪ್ಪನ ಪುತ್ರರಾಗಿದ್ದು, ಜನಪರ ಕಾಳಜಿ ಇರುವುದರಿಂದ ಅವಕಾಶ ನೀಡುವಂತೆ ಕೆಲ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಬಿ.ಎಂ. ಮುಬಾರಕ್ ಹಾಗೂ ಅಪ್ರೋಜ್‌ಪಾಷ ನಡುವೆ ಪೈಪೋಟಿ ಹೆಚ್ಚಾಗಿದೆ. ಮುರಳಿಗೌಡರು ಪಕ್ಷದ ವರಿಷ್ಟರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧ ಎಂದು ಹೇಳಿದ್ದಾರೆಯಾದರೂ ರವೀಂದ್ರ ಪರವಾಗಿ ಬೆಂಬಲ ಸೂಚಿಸುತ್ತಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮಾಜಿ ಸಚಿವ ಕೆ. ಶ್ರೀನಿವಾಸಗೌಡರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿಯದಂತಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ತಟಸ್ಥರಾಗಿರುವ ಗೌಡರು ಶಾಸಕ ವರ್ತೂರ್ ಪ್ರಕಾಶ್ ಪ್ರಭಾವ ಕಡಿಮೆ ಮಾಡಲು ಅಖಾಡಕ್ಕೆ ಇಳಿಯುವರೇ? ಇಲ್ಲವೆ ತಟಸ್ಥರಾಗಿಯೇ ಉಳಿಯುವರೇ? ಎಂಬುದು ತಿಳಿಯಲು ಇನ್ನು ಸ್ವಲ್ಪ ದಿನ ಕಾಯಬೇಕಾಗಿದೆ.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಏನಾದರೂ ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರ ಮನವೊಲಿಸಿ ಶಾಸಕ ವರ್ತೂರ್ ಪ್ರಕಾಶ್ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದಲ್ಲಿ ಕಾಂಗ್ರೆಸ್ ಮತ್ತು ವರ್ತೂರ್ ಪ್ರಕಾಶ್ ಬಣ ಸೇರಿ ಸಮ್ಮಿಶ್ರ ಆಡಳಿತ ನಡೆಸಬಹುದಾಗಿದ್ದು, ಜೆಡಿಎಸ್ ಒಗ್ಗಟ್ಟು ಪ್ರದರ್ಶಿಸಿದಲ್ಲಿ ಮಾತ್ರ ಪಕ್ಷಾಂತರ ತಡೆಯಬಹುದಾಗಿದೆಯಲ್ಲದೆ ನಗರಸಭೆಯಲ್ಲಿ ಜೆಡಿಎಸ್ ಬಾವುಟ ಹಾರಿಸಲು ಸಾಧ್ಯವಾಗಲಿದ್ದು, ಅನೇಕ ಸದಸ್ಯರು ವಿಧಾನಸಭಾ ಚುನಾವಣೆ ನಂತರ ತಟಸ್ಥರಾಗಿರುವ ಕಿಂಗ್ ಮೇಕರ್ ಎಂದೇ ಕರೆಯಲ್ಪಡುವ ಬ್ಯಾಲಹಳ್ಳಿ ಗೋವಿಂದಗೌಡರ ಮಧ್ಯಸ್ಥಿಕೆಗೆ ಮೊರೆ ಹೋಗಲು ನಿರ್ಧರಿಸಿರುವುದರಿಂದ ನಗರಸಭೆ ಅಧ್ಯಕ್ಷ ಚುನಾವಣೆ ತೀವ್ರ ಕುತೂಹಲಕ್ಕೆ ಎಡೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement