ನೀರಿಗಾಗಿ ಬೀದಿಗಿಳಿದ್ರು ನಗರಸಭಾ ಸದಸ್ಯರು
ಕ.ಪ್ರ. ವಾರ್ತೆಕೋಲಾರಆ.29
ಬಾಕಿ ಹಣ ಪಾವತಿಗಾಗಿ ಒತ್ತಾಯಿಸಿ ಟ್ಯಾಂಕರ್ ಮಾಲೀಕರು ಕಳೆದ ನಾಲ್ಕೈದು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವುದರಿಂದ ನಗರದಲ್ಲಿ ನೀರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ನಗರಸಭೆ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಮತ್ತೊಂದು ಕಡೆ ಬಾಕಿ ಪಾವತಿಯಾಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಟ್ಯಾಂಕರ್ ಮಾಲೀಕರು ಪಟ್ಟು ಹಿಡಿದಿರುವುದರಿಂದ ನಾಗರಿಕರು ಪರದಾಡುವಂತಾಗಿದೆ. ನಗರದ ಕೆಲವು ವಾರ್ಡ್‌ಗಳಲ್ಲಿ ಕೊಳವೆಬಾವಿಗಳು ಬತ್ತಿಹೊಗಿರುವುದರಿಂದ ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಟ್ರ್ಯಾಕ್ಟರ್ ಮಾಲೀಕರು ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವುದರಿಂದ ನಗರದ ಜನತೆಗೆ ನೀರು ಇಲ್ಲದಂತಾಗಿದೆ ಎಂದು ಸದಸ್ಯರು ಆರೋಪಿಸಿದರು. ಗೌರಿ-ಗಣೇಶನ ಹಬ್ಬ ಸಮೀಪಿಸುತ್ತಿದ್ದು ನೀರು ಪೂರೈಕೆ ಮಾಡದಿದ್ದರೆ ಜನತೆ ದಂಧೆ ಎಳುವುದರಿಂದ ಕೂಡಲೇ ಸಮಸ್ಯೆ ನಿವಾರಣೆ ಮಾಡುವಂತೆ ಒತ್ತಾಯಿಸಿದರು. ಟ್ಯಾಂಕರ್ ಮಾಲೀಕರು ಪ್ರತಿಭಟನೆ ಮಾಡುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ನಿವಾರಣೆ ಮಾಡುತ್ತಿಲ್ಲವೆಂದು ಸದಸ್ಯರು ಆರೋಪಿಸಿದರು. ನಮ್ಮನ್ನು ಆರಿಸಿ ಕಳುಹಿಸಿದ ಜನತೆಗೆ ಕನಿಷ್ಠ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡು ಹಿಡಿಯಬೇಕು ಅಥವಾ ಟ್ಯಾಂಕರ್ ಮಾಲೀಕರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯರಾದ ಸೋಮಶೇಖರ್, ಮುರಳಿಗೌಡ, ಕೆ.ಎಂ. ಕಾಶಿವಿಶ್ವನಾಥ್, ನಾರಾಯಣಮ್ಮ, ಶಫೀವುಲ್ಲಾ, ವೆಂಕಟೇಶ್, ಸಾಧಿಕ ಪಾಷ್, ಸುಕುಮಾರ್, ಅಸ್ಲಂ ಪಾಷ್,ಅಪ್ಸರ್ ಪ್ರತಿಭಟನೆಯಲ್ಲಿ ಇದ್ದರು.
ಅಕ್ರಮ ಮರಳು ಅಡ್ಡೆ ಮೇಲೆ ದಾಳಿ
ಮುಳಬಾಗಲು: ತಾಲೂಕಿನ ಅವಣೆ ಹೋಬಳಿ ಗ್ರಾಮಗಳಲ್ಲಿ ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳು ಘಟಕಗಳನ್ನು ನಾಶ ಪಡಿಸಿದರು.
ಭಟ್ಲಭಾವನಹಳ್ಳಿ ಗ್ರಾಮದಲ್ಲಿ ಎರಡು ಫಿಲ್ಟರ್ ಕೇಂದ್ರ ಸೇರಿದಂತೆ ಒಂದು ಲಾರಿ ವಶಪಡಿಸಿಕೊಂಡರು. ಕೆಂಪಾಪುರದಲ್ಲಿ ಒಂದು ಫಿಲ್ಟರ್ ಕೇಂದ್ರ, ದೇವರಾಯಸಮುದ್ರ ಗ್ರಾಮದಲ್ಲಿ ಒಂದು ಫಿಲ್ಟರ್ ಕೇಂದ್ರ, ಮಿಣಜೇನಹಳ್ಳಿ ಗ್ರಾಮದಲ್ಲಿ ಒಂದು ಫಿಲ್ಟರೆ ಕೇಂದ್ರ ಸೇರಿದಂತೆ ಒಂದು ಆಯಿಲ್ ಯಂತ್ರ ನಾಶಪಡಿಸಿದರು.
ತಹಶೀಲ್ದಾರ್ ಡಿ.ವಿ. ರಾಮಮೂರ್ತಿ, ರಾಜಸ್ವ ನಿರೀಕ್ಷಕ ಮುನಿವೆಂಕಟಪ್ಪ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.