ಮಾರಿಕುಪ್ಪಂ ಗ್ರಾಮಸಭೆಯಲ್ಲಿ ಶಾಸಕಿ- ಇಒ ಚಕಮಕಿ
ಕ.ಪ್ರ. ವಾರ್ತೆಕೆಜಿಎಫ್ಆ.29
ಕೆಜಿಎಫ್ ಕ್ಷೇತ್ರದ ಮಾರಿಕುಪ್ಪಂ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಯನ್ನು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿತ್ತು.
ಸಭೆಗೆ ಶಾಸಕಿ ವೈ.ರಾಮಕ್ಕ ಅವರು 2 ಗಂಟೆ ತಡವಾಗಿ ಆಗಮಿಸಿದ್ದರು. ಆದರೆ, ಅಷ್ಟರಲ್ಲಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣರೆಡ್ಡಿ ಸಭೆಯನ್ನು ಪ್ರಾರಂಭಿಸಿದ್ದನ್ನು ಶಾಸಕಿ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ಕುಮಾರ್ ವಿರುದ್ಧ ಶಾಸಕಿ ಬೆಂಬಲಿಗರು ನಡುವೆ ಮಾತಿನ ಚಕಮಕಿ ನಡೆಯಿತು.
ಶಾಸಕಿ ವೈ. ರಾಮಕ್ಕ ಅವರು ಸಭೆ ಬಹಿಷ್ಕಾರ ಹಾಕುವುದಾಗಿ ತಿಳಿಸಿದರೆ, ಇಒ ಜಗದೀಶ್ಕುಮಾರ್ ಸಹ ಸಭೆಯಿಂದ ಹೊರ ನಡೆಯುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಗೊಂದಲದ ನಡುವೆ ಸಭೆಗೆ ಚಾಲನೆ ನೀಡಿದ ಶಾಸಕಿ ವೈ. ರಾಮಕ್ಕ, ತಾವು ಯಾವುದೇ ದ್ವೆಷದ ರಾಜಕೀಯ ಮಾಡುತ್ತಿಲ್ಲ. ವಿನಾಕಾರಣ ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯನ್ನು ಶಾಸಕರ ಉಪಸ್ಥಿತಿ ಇಲ್ಲದೆ ಮಾಡಲಾಗಿದೆ ಮತ್ತು ತಮಗೆ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಜಿಪಂ ಸದಸ್ಯ ನಾರಾಯಣರೆಡ್ಡಿ ಅವರು ಸಹ ಶಾಸಕರ ವಿರುದ್ಧ ಕಠಿಣವಾಗಿ ಮಾತನಾಡಿದ್ದಾರೆ.
ತಾವು ಬಿಜೆಪಿ ಶಾಸಕರಾದ ಕಾರಣಕ್ಕೆ ತಮ್ಮನ್ನು ಕೆಲ ಕಾಂಗ್ರೆಸ್ ಮುಖಂಡರು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಮಾರಿಕುಪ್ಪಂ ಗ್ರಾಮ ಪಂ. ಗೊಲ್ಲಹಳ್ಳಿ ಮಾರ್ಗ ಮಧ್ಯೆ ಸ್ಮಶಾನಕ್ಕೆ ಸ್ಥಳವಿಲ್ಲ, ಗ್ರಾಮದಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆಗಳು, ಶೌಚಾಲಯಗಳು, ವಿದ್ಯುತ್ ದೀಪಗಳು, ಬಸವ ಇಂದಿರಾ ಅವಾಸ್ ಯೋಜನೆಯಡಿ ಅನುದಾನ ನೀಡಿಲ್ಲ ಮುಂತಾದ ಸಮಸ್ಯೆಗಳಿಂದ ಗ್ರಾಮಸ್ಥರು ಪರದಾಡುವಂತಾಗಿದೆ ಮತ್ತು ಕೊಳವೆ ಬಾವಿ ಕೊರೆಸಲು ಅಹವಾಲುಗಳ ಅರ್ಜಿಗಳನ್ನು ಗ್ರಾಮಸ್ಥರು ಸಭೆಗೆ ಸಲ್ಲಿಸಿದರು.
ಪಿಎಸ್ಐಗಳಾದ ನಾರಾಯಣಸ್ವಾಮಿ, ಸುರೇಶ್ ಅವರು ಗ್ರಾಮಸ್ಥರು, ಶಾಸಕಿ ಬೆಂಬಲಿಗರನ್ನು ಹಾಗೂ ಜಿಪಂ ಸದಸ್ಯ ನಾರಾಯಣರೆಡ್ಡಿ ಬೆಂಬಲಿಗರನ್ನು ಸಮಾಧಾನಪಡಿಸಿದರು.
ಮಾಜಿ ಶಾಸಕ ವೈ. ಸಂಪಂಗಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಕಾಂತಮ್ಮ, ನೋಡಲ್ ಅಧಿಕಾರಿ ಈರಾಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟಸ್ವಾಮಿ, ಸಹಾಯಕ ಅಭಿಯಂತರ ರವಿಚಂದ್ರನ್, ಪಶುವೈಧ್ಯಾಧಿಕಾರಿ ಆನಂದಮೂರ್ತಿ ಸೇರಿದಂತೆ ಗ್ರಾಮದ ಮುಖಂಡರು ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.