ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ
ಮಾಲೂರು: ತಾಲೂಕಿನ ಚಿಕ್ಕತಿರುಪತಿ ವ್ಯವಸಾಯ ಸೇವಾ ಸಹಕಾರ ಸಂಘದ 2013- 14ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆಯಲ್ಲಿ ಹಿರಿಯರ ಮಧ್ಯಸ್ಥಿಕೆಯಲ್ಲಿ ಎಲ್ಲ ಹತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು. ಚಿಕ್ಕತಿರುಪತಿ ಪಂಚಾಯಿತಿ ಅಧ್ಯಕ್ಷ ಶೈಲಜಾ ಬಾಲಕೃಷ್ಣ, ಉಪಾಧ್ಯಕ್ಷ ವಿ.ನಾಗೇಶ್, ಮಾಜಿ ಅಧ್ಯಕ್ಷ ಗುರುಮೂರ್ತಿ ರೆಡ್ಡಿ, ಮಂಗಳಾ ರಮೇಶ್, ಅಲಂಬಾಡಿ ಸುರೇಶ್ ಅವರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ 36 ಅಕಾಂಕ್ಷಿಗಳ ಜತೆ ಸಭೆ ನಡೆಸಿ ಮಾತುಕತೆ ಮೂಲಕ ಅವಿರೋಧ ಅಯ್ಕೆಯಾಗುವಂತೆ ಮನವೊಲಿಸಲು ಯಶಸ್ವಿಯಾದರು. ಸಾಲಗಾರರ ಕ್ಷೇತ್ರದಿಂದ ಚಿಕ್ಕತಿರುಪತಿಯ ಕೆ.ನಾರಾಯಣಸ್ವಾಮಿ, ಎಂ.ರಾಮಕೃಷ್ಣೇಗೌಡ, ಎಂ.ಶಂಕರ್ ನಾರಾಯಣಗೌಡ, ಟಿ.ವಿ. ಕೃಷ್ಣಮೂರ್ತಿ, ಅಲಂಬಾಡಿ ಎಂ.ರಾಮಚಂದ್ರಪ್ಪ, ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಕಲ್ಕೆರೆ ಅಶ್ವಥಮ್ಮ, ಚಿಕ್ಕತಿರುಪತಿ ನಾರಾಯಣಮ್ಮ, ಹಿಂದುಳಿಂದ ವರ್ಗ ಕ್ಷೇತ್ರದಿಂದ ಚಿಕ್ಕತಿರುಪತಿ ಜಿ.ವಿ. ಮಂಜುನಾಥ್, ಎಸ್ಸಿ- ಎಸ್ಪಿ ಕ್ಷೇತ್ರದಿಂದ ರಾಜಕೃಷ್ಣಾಪುರದ ಕೃಷ್ಣಪ್ಪ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಚಿಕ್ಕತಿರುಪತಿಯ ಎಂ. ಮಂಜುನಾಥ್ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಕೃಷ್ಣಪ್ಪ, ಸಂಘದ ಕಾರ್ಯದರ್ಶಿ ಎಂ. ಶಿವಶಂಕರ್ ಇದ್ದರು.
ಪ್ರತಿಭಾ ಪುರಸ್ಕಾರ
ಶ್ರೀನಿವಾಸಪುರ: ಸರ್ಕಾರಿ ನೌಕರರ ಭೋವಿ ಸಂಘದ ವತಿಯಿಂದ 2012- 13ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆ. 31ರಂದು ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9449262248.
ಕ್ರೀಡೆಗಳಿಂದ ದೈಹಿಕ, ಮಾನಸಿಕ ಒತ್ತಡ ನಿವಾರಣೆ ಸಾಧ್ಯ: ರಾಮಕ್ಕ
ಕೆಜಿಎಫ್: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ತಮ್ಮ ದೈಹಿಕ ಹಾಗೂ ಮಾನಸಿಕ ಒತ್ತಡ ನೀಗಿಸಲು ಸಾಧ್ಯ ಎಂದು ಶಾಸಕಿ ವೈ. ರಾಮಕ್ಕ ಹೇಳಿದರು. ಬೆಮೆಲ್ನಗರ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಒತ್ತಡ ಹೆಚ್ಚಾಗಿ ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ. ಅಂತಹ ಸಮಯದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಹಾಗೂ ವ್ಯಾಯಾಮಗಳಲ್ಲಿ ಭಾಗಿಯಾಗುವುದರಿಂದ ತಮ್ಮ ಮಾನಸಿಕ ಒತ್ತಡ ದೂರವಾಗಿ ಮನಸ್ಸು ಮತ್ತು ದೇಹ ಚುರುಕುಗೊಂಡು ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ಅದೇ ರೀತಿ ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ದೇಶದ ಒಂದು ಉನ್ನತ ಸ್ಥಾನಕೇರುವ ಕನಸನ್ನು ಕಟ್ಟಿಕೊಂಡಿದ್ದಾರೆ. ಪೋಷಕರಿಗೆ ಮತ್ತು ಶಿಕ್ಷಕರ ಶ್ರಮಕ್ಕೆ ತಕ್ಕ ಫಲವನ್ನು ತಂದುಕೊಡಲು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ವೈ. ಸಂಪಂಗಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್. ಬಸವರಾಜ್, ನಗರಸಭೆ ಸದಸ್ಯೆ ಉಮಾ ಮಹಂತೇಶ್, ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಕದಿರಪ್ಪ, ಟಿಪಿಇಒ ವ್ಯವಸ್ಥಾಪಕ ಬಾಬು ಸೇರಿದಂತೆ ಇತರೇ ವಿವಿಧ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕ್ರೀಡಾಪಟುಗಳು ಹಾಜರಿದ್ದರು.
ಚಿತ್ರ29 ಕೆಜಿಎಫ್ 1
ಬೆಮೆಲ್ನಗರ ಕ್ರೀಡಾಂಗಣಗಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳಿಂದ ನಡೆದ ಪಥಸಂಚಲನಕ್ಕೆ ಗೌರವ ಸಲ್ಲಿಸುತ್ತಿರುವ ಶಾಸಕಿ ವೈ. ರಾಮಕ್ಕ ಹಾಗೂ ಇತರರು.
ಚಿತ್ರ29 ಕೆಜಿಎಫ್ 2
ಬೆಮೆಲ್ನಗರ ಕ್ರೀಡಾಂಗಣಗಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡುತ್ತಿರುವ ಶಾಸಕಿ.ವೈ. ರಾಮಕ್ಕ ಹಾಗೂ ಮಾಜಿ ಶಾಸಕ ವೈ. ಸಂಪಂಗಿ
9ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಕೋಲಾರ: ತಾಯಿ ಮತ್ತು ಮಗುವನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲು ಒತ್ತಾಯಿಸಿ ಜೆಎಂಎಸೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆಯ 9ನೇ ದಿನವಾದ ಗುರುವಾರ ವಿವಿಧ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಭಾಗವಹಿಸಿ ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ಸುರೇಶ್ಗೌಡ, ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಹೂವಳ್ಳಿ ನಾಗರಾಜ್, ಎಸ್.ಎಫ್.ಐ. ವಿದ್ಯಾರ್ಥಿಯರ ಉಪ ಸಮಿತಿಯ ರಾಜ್ಯ ಸಹ ಸಂಚಾಲಕಿ ಎ.ಎಲ್. ವಿದ್ಯಾ ಮತ್ತು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿ ಮುಖಂಡರು ಧರಣಿಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡರು ಶೀಘ್ರವಾಗಿ ಆರೋಪಿಯನ್ನು ಬಂಧಿಸದಿದ್ದರೆ ವಿದ್ಯಾರ್ಥಿಗಳು ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕದಸಂಸ ರಾಜ್ಯ ಮುಖಂಡರಾದ ಟಿ. ವಿಜಯಕುಮಾರ್, ಎಸ್.ಎಫ್.ಐ. ಜಿಲ್ಲಾಧ್ಯಕ್ಷ ವಿ.ಅಂಬರೀಷ್, ಕಾರ್ಯದರ್ಶಿ ವಾಸುದೇವರೆಡ್ಡಿ, ಜೆಎಂಎಸ್ ಜಿಲ್ಲಾ ಕಾರ್ಯದರ್ಶಿ ವಿ.ಗೀತಾ, ಮುಖಂಡರಾದ ಕೆ.ಎಂ. ಸುಶೀಲ ಇದ್ದರು.
50 ಸಾವಿರಪರಿಹಾರ
ಕೋಲಾರ: ತಾಲೂಕಿನ ಲಕ್ಷೀಸಾಗರ ಗೇಟ್ ಬಳಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಪಮಂಜಲಿ ಗ್ರಾಮದ ಮಮತ, ತಿಪ್ಪಪ್ಪ, ರಾಕೇಶ್, ವೆಂಕಟೇಶ್, ಹಾಗೂ ಉದಪನಹಳ್ಳಿ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ ಕೋಲಾರ ಎಪಿಎಂಸಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಹರೀಶ್ ಗೌಡ, ಆಡಳಿತ ಮಂಡಳಿ, ವರ್ತಕರ ಸಂಘ ಮತ್ತು ಕೋಲಾರ ಜಿಲ್ಲಾ ಹೆಚ್.ಡಿ. ಕುಮಾರಸ್ವಾಮಿ ನೆಚ್ಚಿನ ಬಳಗದವರು ಚಿಕಿತ್ಸೆಗಾಗಿ 50 ಸಾವಿರ ರು. ನೀಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ವಡಗೂರು ರಾಮು, ನಿರ್ದೇಶಕ ಬಣಕನಹಳ್ಳಿ ನಟರಾಜ್, ನರಸಾಪುರ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ಗೌಡ, ಅಂಬರೀಷ್, ಬೆಳ್ಳೂರು ರಾಜಣ್ಣ, ಕೃಷ್ಣಪ್ಪ, ನಂದಗೋಪಾಲ್, ಬಾಲಗೋವಿಂದ, ಹೂವಳ್ಳಿ ನಾಗರಾಜ್, ವಡಗೇರಿ ವೆಂಕಟೇಶ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ನೆಚ್ಚಿನ ಬಳಗದ ಜಿಲ್ಲಾಧ್ಯಕ್ಷ ಶ್ರೀಕಾಂತಗೌಡ, ಪ್ರಸಾದ್, ನಂಜುಂಡ ಗೌಡ ಮತ್ತಿತರರು ಇದ್ದರು.
ಯಡಹಳ್ಳಿ ಶಾಲೆ ಶಿಕ್ಷಕ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಕೋಲಾರ: ತಾಲೂಕಿನ ಯಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗರಾಜ್ ಅವರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಗುರುವಾರ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಗ್ರಾಮದ ಶಾಲೆಯಲ್ಲಿ1ರಿಂದ 5ನೇ ತರಗತಿವರೆಗೆ 38 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಶಿಕ್ಷಕರಾಗಿ ಬಂದ ನಾಗರಾಜ್ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಮಾಡುತ್ತಿದ್ದರು. ಇದರಿಂದ ಶಾಲಾ ಹಾಜರಾತಿ ಸಹ ಹೆಚ್ಚಿತ್ತು. ಆದರೆ ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಶಿಕ್ಷಕರನ್ನು ವರ್ಗಾವಣೆ ಮಾಡಿದ್ದಾರೆಂದು ಪೋಷಕರು ಆರೋಪಿಸಿದರು.