ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಾಸ್ಟೆಲ್ ಕಾಮಗಾರಿಗೆ ಚಾಲನೆ

Srinivasa Murthy VN
Updated On : 30 Aug 2013, 12:43 pm

ಬಂಗಾರಪೇಟ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯ ವಿದ್ಯಾರ್ಥಿನಿಲಯ ಕೊರತೆಯಿಂದಾಗಿ ಬಾಲಕಿಯರು ಹಲವು ವರ್ಷಗಳಿಂದ ಅವ್ಯವಸ್ಥೆಯಲ್ಲೆ ಕಾಲ ಕಳೆಯುವಂತಾಗಿತ್ತು. ವಿದ್ಯಾರ್ಥಿ ನಿಲಯದ ಬೇಡಿಕೆ ಇದ್ದರೂ ಈ ಹಿಂದಿನ ಯಾವ ಶಾಸಕರೂ ಗಮನಹರಿಸಿರಲಿಲ್ಲ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
375 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು. ಪಟ್ಟಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ವಿದ್ಯಾರ್ಥಿ ನಿಲಯಗಳಿಲ್ಲದೆ ಎರಡು ನಿಲಯಗಳ ಮಕ್ಕಳು ಒಂದೇ ಕಟ್ಟಡದಲ್ಲಿ  ಅನಾನುಕೂಲಗಳ ನಡುವೆ ಕಾಲ ನೂಕುತ್ತಿದ್ದರು. ಇಂತಹ ದುಸ್ಥಿತಿ ಕ್ಷೇತ್ರದ ಗಡಿ ಭಾಗವಾದ ಕಾಮಸಮುದ್ರ ಹೋಬಳಿಯಲ್ಲಿಯೂ ಇದೆ.  ಮಕ್ಕಳಿಗೆ ಅವರ ಮನೆಗಳಲ್ಲಿ ಮೂಲ ಸೌಲಭ್ಯಗಳಿಲ್ಲದ ಕಾರಣ ಹಾಸ್ಟೆಲ್‌ಗಳಿಗೆ ದಾಖಲಿಸುವರು. ಆದರೆ, ಇಲ್ಲಿಯೂ ಮನೆಗಳಿಗಿಂತಲೂ ಭಿನ್ನವಾಗಿದ್ದರೆ ಅವರ ಭವಿಷ್ಯ ಏನಾಗಬೇಕು, ಆದ್ದರಿಂದ ಗುತ್ತಿಗೆದಾರರು 7 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು. ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಇರುವ ಇಲಾಖೆ ಕಚೇರಿ ಇದೆಯೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ.
 ಇದುವರೆಗೂ ಇಲಾಖೆಯಿಂದ ಜನರಿಗೆ ಸರ್ಕಾರ ಜಾರಿಗೆ ತಂದಿರುವ ಯಾವುದೇ ಯೋಜನೆಗಳ ಬಗ್ಗೆ ಪ್ರಚಾರ ಮಾಡಿಲ್ಲ ಮತ್ತು ಕಾರ್ಯಕ್ರಮ ಹಮ್ಮಿಕೊಂಡಿಲ್ಲ ಎಂದು ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಿ. ನೀಲಾಚಂದ್ರ ಬಿಜೆಪಿಗೆ ರಾಜಿನಾಮೆ
ಮಾಲೂರು:
ಇಲ್ಲಿನ ಪುರಸಭೆ ಮಾಜಿ ಅಧ್ಯಕ್ಷೆ, ಬಿಜೆಪಿ ಹಿರಿಯ ಸದಸ್ಯೆ ಸಿ. ನೀಲಾಚಂದ್ರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.   ಪಟ್ಟಣದ ಪದ್ಮಾವತಿ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೃಷ್ಣಾ ರೆಡ್ಡಿ ಅವರಿಗೆ ಸ್ವಇಚ್ಛೆಯಿಂದ ರಾಜಿನಾಮೆ ಪತ್ರ ಸಲ್ಲಿಸಲಾಗಿದೆ ಎಂದು ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರು ಆಗಿದ್ದ ನೀಲಾಚಂದ್ರ ತಿಳಿಸಿದ್ದಾರೆ. ನನನ್ನು ಪುರಸಭೆ ಅಧ್ಯಕ್ಷರನ್ನಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ಮುಖಂಡರಿಗೆ ಹಾಗೂ ಸಹಕರಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ತಾಲೂಕು ಜಾಗೃತಿ ಸಮಿತಿ ಸಭೆ
ಗುಡಿಬಂಡೆ:
ತಾಲೂಕಿನಲ್ಲಿ ಪ.ಜಾತಿ, ಪ.ವರ್ಗದ ಜನಾಂಗಗಳ ಮೇಲೆ ನಡೆಯುವ ದೌರ್ಜನ್ಯ ನಿಯಂತ್ರಿಸಲು ಮತ್ತು ಕುಂದುಕೊರತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಸೆ.4ರಂದು ಮಧ್ಯಾಹ್ನ 2.30 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಸಮುದಾಯದ ಮುಖಂಡರು ಆಗಮಿಸಿ ತಮ್ಮ ಅಮೂಲ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಬೇಕೆಂದು ಸಮಿತಿಯ ಅಧ್ಯಕ್ಷ ತಹಸೀಲ್ದಾರ್ ಕೋರಿದ್ದಾರೆ.

ಸೆ. 2ರಂದು ರೈತರ ಸಮಾವೇಶ
ಗುಡಿಬಂಡೆ:
ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಶಾಖೆ ಪಟ್ಟಣದಲ್ಲಿ ಸಮಾವೇಶವನ್ನು ನಡೆಸಲಿದೆ. ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಸೆ.2ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಹೆಚ್.ಆರ್. ಬಸವರಾಜು ಮುಂತಾದ ಮುಖಂಡರು ಭಾಗವಹಿಸಲಿದ್ದಾರೆ.

ಜೂಜಾಟ: 12 ಆರೋಪಿಗಳ ಸೆರೆ
ಚಿಂತಾಮಣಿ:
ತಾಲೂಕಿನ ಚಿಕ್ಕಪುರ ಗ್ರಾಮದಲ್ಲಿ ಗುರುವಾರ ಜೂಜಾಟ ಆಡುತ್ತಿದ್ದ ಗುಂಪಿನ ಪೊಲೀಸರು ದಾಳಿ ನಡೆಸಿ 12 ಜನರನ್ನು ಬಂಧಿಸಿ  1.50 ನಗದು ಹಣ 12 ದ್ವಿಚಕ್ರ ವಾಹನ, 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಆಂಧ್ರಪ್ರದೇಶದ ಕೆಲವರು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದ ಪೊಲೀಸರು ದಾಳಿ ನಡೆಸಿದ್ದಾರೆ.

ಜೈವಿಕ ಇಂಧನ ಬಳಸಿ: ವೆಂಕಟೇಶ್
ಚಿಂತಾಮಣಿ:
ವಿಶ್ವದಾದ್ಯಂತ ಹೆಚ್ಚುತ್ತಿರುವ ಕಚ್ಚಾ ತೈಲದ ಬೇಡಿಕೆಯಿಂದ ತೈಲ ಬೆಲೆಗಳು ಸತತವಾಗಿ ಹೆಚ್ಚುತ್ತಿವೆ. ಕಚ್ಚಾ ತೈಲದ ಬದಲಾಗಿ ಜೈವಿಕ ಇಂಧನ ಬಳಕೆಯಿಂದ ಇದನ್ನು ಪರಿಹರಿಸಬಹುದಾಗಿದೆ ಎಂದು ವೈಜ್ಞಾನಿಕ ಸಹಾಯಕ ಕೆ.ಸಿ. ವೆಂಕಟೇಶ್ ಅವರು ಅಭಿಪ್ರಾಯಪಟ್ಟರು. ಕೈವಾರ ಹೋಬಳಿಯ ಮಸ್ತೇನಹಳ್ಳಿಯಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯ ಮತ್ತು ಕೈವಾರ ರೈತ ಸಂಪರ್ಕ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಜೈವಿಕ ಇಂಧನದ ಮಾಹಿತಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತಕ್ಕೆ ಅಗತ್ಯವಿರುವ ಶೇ.85ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಉಪಯೋಗಿಸುತ್ತಿದ್ದೇವೆ. ಇದರಿಂದಾಗಿ ರಾಷ್ಟ್ರದ ಆರ್ಥಿಕತೆ ವ್ಯವಸ್ಥೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಮಿತಿಮೀರಿದ ಬಳಕೆಯಿಂದ ನಿತ್ಯದ ಕಚ್ಚಾ ತೈಲ ಸಂಪನ್ಮೂಲಗಳು ಕ್ಷೀಣಿಸುತ್ತಿದೆ. ಕೋಟ್ಯಂತರ ರುಪಾಯಿ ಇದಕ್ಕಾಗಿ ವ್ಯಯಿಸುತ್ತಿದ್ದೇವೆ ಎಂದರು. ಅತಿಯಾದ ಪೆಟ್ರೋಲಿಯಂ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ತಾಪಮಾನ ವೈಪರೀತ್ಯಗಳು ಕಂಡುತ್ತಿರುವುದರಿಂದ ಬದಲಿ ಇಂಧನ ಮೂಲಗಳ ಬಳಕೆಗೆ ಪ್ರಾಮುಖ್ಯ ಒದಗಿಸಬೇಕಾಗಿದೆ. ಕಚ್ಚಾ ತೈಲದ ಬಳಕೆಯನ್ನು ಹತೋಟಿಯಲ್ಲಿರಿಸಬಲ್ಲ ಸಾಮರ್ಥ್ಯ ಕಚ್ಚಾ ತೈಲದ ಪರ್ಯಾಯ ಸ್ವರೂಪದಂತಿರುವ ಜೈವಿಕ ಇಂಧನಕ್ಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement