'ಹೆಚ್ಚೆಚ್ಚು ಇಳುವರಿಗೆ ಆಧುನಿಕ ಪದ್ಧತಿ ಅಳವಡಿಸಿಕೊಳ್ಳಿ'
ಕ.ಪ್ರ.ವಾರ್ತೆ ಮಾಲೂರು ಆ.29
ಕೃಷಿಯಲ್ಲಿ ಹೊಸಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ರೈತರು ತಮ್ಮ ಕೃಷಿಯಲ್ಲಿ ಹೆಚ್ಚಿನ ಇಳುವರಿಗಾಗಿ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿವಿ ಪ್ರಾಧ್ಯಾಪಕ ಡಾ.ಕೆ.ಸಿ. ಲಲಿತಾ ಹೇಳಿದರು.
ಅವರು ತಾಲೂಕಿನ ಗುಡ್ನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಅನುಭವ ಯೋಜನೆಯಡಿ ಕೈ ಗೊಂಡಿದ್ದ ಪದ್ಧತಿಯ ಪ್ರಾತ್ಯಕ್ಷಿಕೆಯ ತಾಕುಗಳಿಗೆ ಭೇಟಿ ನೀಡಿ ನೆರೆದಿದ್ದ ರೈತರನ್ನು ಉದ್ದೇಶಿಸಿ ಮಾತನಾಡುತ್ತ ಹೊಸ ಆವಿಷ್ಕಾರದಲ್ಲಿ ಮೂರು ಬಗೆಯ ಬೆಳೆಯನ್ನು ಒಂದು ಜಮೀನಿನಲ್ಲಿ ವಿವಿಧ ಉಪಚಾರ ಮೂಲಕ ಬೆಳೆಯುವುದನ್ನು ತೋರಿಸಿಕೊಡಲಾಗಿದೆ. ಈ ಪ್ರಾತ್ಯಕ್ಷಿಕೆಯಿಂದ ಉಪಚಾರಕ್ಕೊಳಗಾದ ಬೆಳೆಗಳಿಗೂ ಹಾಗೂ ಉಪಚಾರಕ್ಕೊಳಗಾಗದ ಬೆಳೆಗಳಿಗೆ ಇರುವ ವ್ಯತ್ಯಾಸ ತಿಳಿಯಬಹುದಾಗಿದೆ. ರೈತರು ಈ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ತಮ್ಮ ಕೃಷಿ ಪದ್ಧತಿಯಲ್ಲಿ ಈ ರೀತಿಯ ತಾಕು ಬೆಳೆಗಳನ್ನು ಬೆಳೆಯಬೇಕು ಎಂದರು. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಶೇಖರಪ್ಪ, ಜಿಕೆವಿಕೆ ವಿದ್ಯಾರ್ಥಿಗಳಾದ ಸುನೀಲ್‌ಕುಮಾರ್ ರಾಥೋಡ್, ಸುನೀಲ್ ಕುಮಾರ್, ಡಿ.ಎನ್. ಸುನೀಲ್, ವಿ.ಆರ್. ಸುನಿಲ್, ವರುಣ್, ವೇಣುಗೋಪಾಲ್, ಸುಷ್ಮಾ, ವಿದ್ಯಾ, ಸುನೀತಾ, ತಾನ್ಯ ಶೇಖರ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.