ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಮರಳುಗಾರಿಕೆ ತಡೆಯಿರಿ

Srinivasa Murthy VN
Updated On : 31 Aug 2013, 11:04 am

ಕ.ಪ್ರ.ವಾರ್ತೆ ಕೋಲಾರ ಆ.31
ಬೆಂಗಳೂರು ಮಹಾನಗರದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಮರಳು ಅಗತ್ಯ. ಹಾಗೆಂದು ಕೋಲಾರ ಜಿಲ್ಲೆಯ ಮೇಲೆ ದುಷ್ಪರಿಣಾಮ ಉಂಟಾಗುವುದಕ್ಕೆ ಅವಕಾಶ ನೀಡಬಾರದು ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆಗಳಲ್ಲಿ ಮರಳು ಫಿಲ್ಟರ್ ಮಾಡಿ ಅಕ್ರಮವಾಗಿ ಸಾಗಣೆ ಮಾಡುವುದನ್ನು ತಡೆಯುವುದಕ್ಕೆ ತಾವು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆಂದು ತಿಳಿಸಿದರು.
ಸಮುದ್ರದಲ್ಲಿ ಯಥೇಚ್ಚವಾಗಿ ಮರಳು ಸಿಗುತ್ತದೆ. ಆದರೆ ಉಪಯೋಗಕ್ಕೆ ಯೋಗ್ಯವಲ್ಲ. ನದಿ ಪಾತ್ರದ ಮರಳು ಸೂಕ್ತವೆಂಬ ಕಾರಣದಿಂದ ಮರಳು ಮಾರಾಟಗಾರರು ಕೋಲಾರ ಇನ್ನಿತರ ಕಡೆಗಳಿಂದ ಮರಳು ಸಂಗ್ರಹಣೆ ಮಾಡಿ ಬೆಂಗಳೂರಿಗೆ ಸಾಗಾಣೆ ಮಾಡುತ್ತಿದ್ದಾರೆಂದ ಸಚಿವರು, ಇದರಿಂದ ಕೋಲಾರ ಜಿಲ್ಲೆಯ ಅಂತರ್ಜಲ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುವುದಾದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರಿಗೆ ತಾಕೀತು ಮಾಡಿದರು.
ಉತ್ತರ ಪಿನಾಕಿನಿ ಮತ್ತು ಚೇಳೂರು ನದಿ ಪಾತ್ರದಲ್ಲಿ ಮರಳು ಸಿಗುತ್ತದೆ, ಅದನ್ನು ವೈಜ್ಞಾನಿಕವಾಗಿ ಸಂಗ್ರಹಣೆ ಮಾಡುವುದಕ್ಕೆ ಸಂಬಂಧಪಟ್ಟ ಇಲಾಖೆಯವರು ಕಾರ್ಯಕ್ರಮ ರೂಪಿಸಬೇಕು. ಮುಳಬಾಗಿಲು ಸೇರಿದಂತೆ ಜಿಲ್ಲೆಯ ಇನ್ನಿತರ ಕಡೆಗಳಿಂದ ಕೆರೆಗಳಲ್ಲಿ ಮತ್ತು ಕೃಷಿ ಭೂಮಿಯಲ್ಲಿ ಮರಳು ಫಿಲ್ಟರ್ ಮಾಡುವ ಜನರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ಮೂಲಕ ಫಿಲ್ಟರ್ ಮರಳು ಕೆಲಸಕ್ಕೆ ಕೂಲಿ ಕಾರ್ಮಿಕರು ಹೋಗದ ರೀತಿಯಲ್ಲಿ ಯೋಜನೆ ರೂಪಿಸುವಂತೆಯೂ ಸಲಹೆ ನೀಡಿದರು.
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮರಳು ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸಿದಲ್ಲಿ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹೊಸ ಡಿಸಿ ಕಚೇರಿ ನಿರ್ಮಾಣಕ್ಕೆ ಯತ್ನ: ಹಾಲಿ ಜಿಲ್ಲಾಧಿಕಾರಿಗಳ ಕಚೇರಿ ಅತ್ಯಂತ ಹಳೆಯದಾಗಿರುವುದಲ್ಲದೆ, ವ್ಯವಸ್ಥಿತ ರೀತಿಯಲ್ಲಿ ಆಡಳಿತ ನಡೆಸುವುದಕ್ಕೆ ಸಮಸ್ಯೆ ಇರುವುದರಿಂದ ನಗರದ ಹೊರವಲಯದ ಟಮಕ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಟಮಕ ಪ್ರದೇಶದಲ್ಲಿ ಸೂಕ್ತ ಜಾಗವನ್ನು ಇನ್ನೊಂದು ತಿಂಗಳಲ್ಲಿ ಹುಡುಕಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಸಹ ಇದಕ್ಕೆ ಒಲವು ವ್ಯಕ್ತಪಡಿಸಿರುವುದರಿಂದ ಆದಷ್ಟು ಬೇಗನೆ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದರು.
ನೀರು ಶುದ್ಧೀಕರಣ ಘಟಕಗಳು: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಹೊಸ ಕೊಳವೆ ಬಾವಿಗಳಿಗೆ ಪಂಪು-ಮೋಟಾರ್ ಅಳವಡಿಸುವುದಲ್ಲದೆ, ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಜನತೆಗೆ ಫ್ಲೋರೈಡ್‌ಯುಕ್ತವಾದ ನೀರು ಒದಗಿಸುವುದಕ್ಕೆ ಜಿಲ್ಲೆಯ ಎಲ್ಲ ಶಾಸಕರು ಬದ್ಧರಾಗಿದ್ದು, ಈ ಕೆಲಸವನ್ನು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿಯು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಲು ಸೂಚಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಕೆ.ಆರ್.ರಮೇಶ್‌ಕುಮಾರ್, ಕೆ.ಎಂ.ನಾರಾಯಣಸ್ವಾಮಿ, ಕೋಡಿಹಳ್ಳಿ ಮಂಜುನಾಥಗೌಡ, ಕೊತ್ತೂರು ಮಂಜುನಾಥ್, ವೈ.ರಾಮಕ್ಕ, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್ ,ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾಧಿಕಾರಿ ಡಿ.ಕೆ.ರವಿ ಹಾಗೂ ಜಿ.ಪಂ ಸಿಇಒ ಜುಲ್ಫಿಖಾರ್ ಉಲ್ಲಾ ಇದ್ದರು.

'ಸಹಕಾರ ಕ್ಷೇತ್ರದಲ್ಲಿ ರಾಜಕೀಯ'
ಮುಳಬಾಗಲು:
ಸಹಕಾರ ಸಂಘಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪದೊಂದಿಗೆ ಹಣವಂತರ ಹಸ್ತಕ್ಷೇಪ ಹೆಚ್ಚಾಗಿದ್ದು ಇಂತಹ ಬೆಳವಣಿಗೆಗಳ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಕಳವಳ ವ್ಯಕ್ತಪಡಿಸಿದರು.
ಅಮರಜ್ಯೋತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ ಬಗೆಗಿನ ಅರಿವಿನ ಕಾರ್ಯಕ್ರಮ ಉದ್ಫಾಟಿಸಿ, ತಾಲೂಕು ಹಾಲು ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ  97ನೇ ಸಹಕಾರ ಕಾಯಿದೆ ಸಂವಿಧಾನ ತಿದ್ದುಪಡಿ 2011 ಅಭಿಪ್ರಾಯ ಮತ್ತು ವಿಶ್ಲೇಷಣೆ ಕುರಿತು ಮಾತನಾಡಿದ ಅವರು, ಭಾರತ ಸರ್ಕಾರ ಸಹಕಾರ ಸಂಘಗಳು ತಿದ್ದುಪಡಿಯನ್ನು ಯಥಾವತ್ತಾಗಿ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಾರಣ ಸಂಘಗಳು ಅದನ್ನು ಅನುಷ್ಠಾನಗೊಳಿಸಿಕೊಂಡು ಹೋಗಬೇಕಾಗಿದೆ. ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಕಾರ್ಯದರ್ಶಿಗಳಲ್ಲಿರಬೇಕು ಎಂದು ನುಡಿದರು.
ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ ಸಹಕಾರಿ ಸಂಘಗಳು ರಾಜಕೀಯರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧಿಕಾರಿ ಮಹದೇವಪ್ಪ, ಪತ್ರಕರ್ತ ಪಿ.ರುದ್ರಪ್ಪ, ಅಮರಜ್ಯೋತಿ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಅಶೋಕ್, ಕೋಮುಲ್ ಶಿಬಿರದ ಉಪವ್ಯವಸ್ಥಾಪಕ ಬಿ.ಶಿವರಾಜ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement