ಚಿಕಿತ್ಸೆಗೆಂದು ಹೇಳಿ 7 ಲಕ್ಷ ಮೌಲ್ಯದ ಒಡವೆ ವಂಚನೆ
ಕೆಜಿಎಫ್: ಅನಾರೋಗ್ಯದ ಕಾರಣ ಕಳೆದ 6 ತಿಂಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಮಗಳ ಬಳಿ ಮಹಿಳೆಯೊಬ್ಬರು ಚಿಕಿತ್ಸೆಗೆಂದು ಹೇಳಿ ಲಕ್ಷಾಂತರ ಮೌಲ್ಯದ ಚಿನ್ನದ ಒಡವೆಗಳನ್ನು ಪಡೆದು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವರ್ಣನಗರದ 2ನೇ ಕ್ರಾಸ್ ನಿವಾಸಿ ದೊರೈಸ್ವಾಮಿ ಎಂಬವರು 6 ತಿಂಗಳ ಹಿಂದೆ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದೊರೈಸ್ವಾಮಿ ಅವರ ಪತ್ನಿ ಸರಸ್ವತಮ್ಮ ಅವರ ತಂಗಿ ಮಂಜುಳಾ ಎಂಬವರು ಸ್ವರ್ಣನಗರದ ಮನೆಗೆ ಬಂದು ತಮ್ಮ ತಂದೆಯ ಚಿಕಿತ್ಸೆಗೆ ಹೆಚ್ಚು ಹಣ ಬೇಕಾಗಿದ್ದು ಹಣ ಹೊಂದಿಸಿದರೆ ಅವರು ಗುಣಮುಖರಾಗುತ್ತಾರೆ ಎಂದು ಹೇಳಿ ದೊರೈಸ್ವಾಮಿ ಅವರ ಮಗಳಾದ ಸಿಂಧು ಎಂಬವರ ಬಳಿ ಸುಮಾರು 7 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಪಡೆದುಕೊಂಡು ಹೋಗಿ ವಂಚನೆ ಮಾಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ದೊರೈಸ್ವಾಮಿ ಗುಣಮುಖರಾಗಿ ಮನೆಗೆ ಬಂದಿದ್ದು ಸರಸ್ವತಮ್ಮ ಚಿನ್ನದ ಒಡವೆಗಳ ಬಗ್ಗೆ ಮಗಳು ಸಿಂಧು ಬಳಿ ವಿಚಾರಿಸಿದಾಗ ನಡೆದ ಸಂಗತಿ ಬೆಳಕಿಗೆ ಬಂದಿದೆ. ಮಂಜುಳ ಚಿನ್ನದ ಒಡವೆಗಳನ್ನು ಕೆಜಿಎಫ್ನಲ್ಲಿ ಅಡವಿಟ್ಟು ಶ್ರೀನಿವಾಸ್ ಮತ್ತು ಕಲಾ ಅವರೊಂದಿಗೆ ಕೂಡಿ ವಂಚನೆ ಮಾಡಿರುವುದಾಗಿ ಸರಸ್ವತಮ್ಮ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಿನ್ನದ ಅದಿರು ನಾಪತ್ತೆ; ದಯಾನಂದಂ ದೂರು
ಕೆಜಿಎಫ್: 2012ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ಗಳಲ್ಲಿ ಚಿನ್ನದ ಗಣಿಯ ಮೈಸೂರು ಮಿಲ್ಗೆ ಸೇರಿದ ಕೊನೆ ಹಂತದ ಚಿನ್ನ ಸಂಸ್ಕರಣಾ ಜಾಗದಲ್ಲಿ ದೊಡ್ಡ ಗುಂಡಿಯನ್ನು ತೋಡಿ ಸಂಸ್ಕರಣೆಯಾದ ಚಿನ್ನವು ದ್ರವದ ರೂಪದಲ್ಲಿ ಹರಿದುದೋದ ಪೈಪ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆಂದು ಬಿಜಿಎಂಎಲ್ ಚಿನ್ನದ ಗಣಿಯ ನೂತನ ಉಸ್ತುವಾರಿ ಭದ್ರತಾಧಿಕಾರಿ ದಯಾನಂದಂ ಮಾರಿಕುಪ್ಪಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳುವಾದ ಮೌಲ್ಯದ ಬಗ್ಗೆ ಮೇಲಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸ್ವತ್ತನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಭದ್ರಾತಾಧಿಕಾರಿ ದಯಾನಂದಂ ತಿಳಿಸಿದ್ದಾರೆ. ಆ.17ರಂದು ಬಿಜಿಎಂಎಲ್ನ ಮೈಸೂರು ಮಿಲ್ನೊಳಗೆ ಚಿನ್ನದ ಅದಿರನ್ನು ಕಳವು ಮಾಡಲು ಯತ್ನಿಸಿದ ಮೂವರು ಭದ್ರತಾ ಸಿಬ್ಬಂದಿ ಸೇರಿದಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹಣ ಪಡೆದು ಕಳ್ಳರೊಂದಿಗೆ ಶಾಮೀಲಾಗಿರುವ ಆರೋಪದ ಮೇರೆಗೆ ಈ ಹಿಂದೆ ಇದ್ದ ಬಿಜಿಎಂಎಲ್ ಭದ್ರತಾಧಿಕಾರಿ ಆನಂದ್ಸಿಂಗ್ ರಾವತ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ತೆರವಾದ ಆ ಸ್ಥಾನಕ್ಕೆ ಬಿಜಿಎಂಎಲ್ ಆಡಳಿತ ಮಂಡಳಿ ಉಸ್ತುವಾರಿ ಭದ್ರತಾಧಿಕಾರಿಯಾಗಿ ದಯಾನಂದಂ ಅಧಿಕಾರ ವಹಿಸಿಕೊಂಡು ಮಾರಿಕುಪ್ಪಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸ್ಐ ಸುರೇಶ್ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಡಿಕ್ಕಿ; ಮಹಿಳೆ ಸಾವು
ಶಿಡ್ಲಘಟ್ಟ: ಪಿಂಡಪಾಪನಹಳ್ಳಿ ಗೇಟ್ ಬಳಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಮುನಿಯಮ್ಮ(60) ಮೃತ ದುರ್ದೈವಿ. ಮುನಿಯಮ್ಮ ಚಿಂತಾಮಣಿಯ ನಾರಾಯಣಪುರದ ನಿವಾಸಿಯಾಗಿದ್ದು ಬೊಮ್ಮನಹಳ್ಳಿಯ ರೇಲ್ವೆ ಕಾಮಗಾರಿಗೆ ಕೆಲಸಕ್ಕೆ ಬಂದಿದ್ದರು. ಊರಿಗೆ ಹೋಗುವ ಸಲುವಾಗಿ ಪಿಂಡಪಾಪನಹಳ್ಳಿ ಗೇಟ್ಗೆ ಗುರುವಾರ ರಾತ್ರಿ 8 ಗಂಟೆಯಲ್ಲಿ ನಡೆದು ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ.
ವೈದ್ಯ ಮನೆ ಕಳ್ಳತನ
ಕೋಲಾರ: ಇಲ್ಲಿನ ರಹಮತ್ ನಗರದಲ್ಲಿರುವ ಆಯುರ್ವೇದ ಡಾಕ್ಟರ್ ಜಾಕೀರ್ ಹುಸೇನ್ ಎಂಬುವರ ಮನೆಗೆ ಕಳ್ಳರು ನುಗ್ಗಿ 2 ಲಕ್ಷ ರು.ನಗದು ಹಾಗೂ 170 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಕೇಂದ್ರ ಮಾಜಿ ರೇಲ್ವೆ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ನೆಂಟರೆಂದು ಹೇಳಲಾದ ಡಾಕ್ಟರ್ ಜಾಕೀರ್ ಹುಸೇನ್ ಶುಕ್ರವಾರ ಬೆಂಗಳೂರಿಗೆ ಹೋಗಿದ್ದಾಗ ಕಳ್ಳರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಮನೆಯ ಬಾಗಿಲು ಮುರಿದು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಗರದ ಗಲ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.