ಧಾರ್ಮಿಕ ಕಾರ್ಯಕ್ರಮಗಳಿಂದ ಸಾಮರಸ್ಯ: ವರ್ತೂರು
ಕ.ಪ್ರ.ವಾರ್ತೆ ಕೋಲಾರ ಆ.31
ಧಾರ್ಮಿಕ ಕಾರ್ಯಕ್ರಮಗಳು ಜನ ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಸೌಹಾರ್ದತೆ ಮೂಡಿಸುವಂತಿರಬೇಕೆಂದು ಶಾಸಕ ಆರ್.ವರ್ತೂರು ಪ್ರಕಾಶ್ ಅಭಿಪ್ರಾಯಪಟ್ಟರು.
ನಗರ ಹೊರವಲಯದ ಅಂತರಗಂಗೆ ಬೆಟ್ಟದ ತಪ್ಪಲಲ್ಲಿರುವ ಶನೇಶ್ವರಸ್ವಾಮಿ ದೇವಾಲಯದ 18 ನೇ ವಾರ್ಷಿಕೋತ್ಸವ ಮತ್ತು ಅಭಯ ಆಂಜನೇಯಸ್ವಾಮಿ ನೂತನ ವಿಗ್ರಹ ಸ್ಥಾಪನೆ ಭೂಮಿಪೂಜೆ ನೆರವೇರಿಸಿದ ನಂತರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಅಂತರಗಂಗೆ ಬೆಟ್ಟದ ತಪ್ಪಲಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸೂರ್ಯನಾರಾಯಣ ಟ್ರಸ್ಟ್‌ನ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅವರು, ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಕೆಲವರು ಸಮಾಜದ ಸಾಮರಸ್ಯವನ್ನು ಕೆಡಿಸುವಂತೆ ವರ್ತಿಸುತ್ತಿರುವುದು ಸರಿಯಲ್ಲವೆಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ರಘುರಾಂ ಮಾತನಾಡಿ, ಅಂತರಗಂಗೆ ಬೆಟ್ಟಕ್ಕೆ ತನ್ನದೇ ಆದ ಇತಿಹಾಸವಿದ್ದು, ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು, ಬೆಟ್ಟದ ತಪ್ಪಲಲ್ಲಿ ಶನೇಶ್ವರ ದೇವಾಲಯ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಭಕ್ತರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೂರ್ಯನಾರಯಣ ಟ್ರಸ್ಟ್ ಅಧ್ಯಕ್ಷ ವಕೀಲ ಕೆ.ವಿ.ಸುರೇಂದ್ರಕುಮಾರ್ ಮಾತನಾಡಿದರು.
ಶ್ರಾವಣ ಮಾಸದ ನಗರ ಸಂಕೀರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಜನಾ ತಂಡದ ಸದಸ್ಯರೆಲ್ಲರಿಗೂ ಶಾಸಕ ಆರ್.ವರ್ತೂರುಪ್ರಕಾಶ್ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.
ದೇವಾಲಯದ ಮುಂಭಾಗ ನಿರ್ಮಿಸಲು ಉದ್ದೇಶಿಸಿರುವ ಅಭಯಾಂಜನೇಯ ಸ್ವಾಮಿ ವಿಗ್ರಹಕ್ಕೆ ಶಾಸಕ ಆರ್.ವರ್ತೂರು ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ಸಿ.ರಘುರಾಂ ಮತ್ತು ಪತ್ರಕರ್ತ ಕೆ.ಎಸ್.ಗಣೇಶ್ ಇತರರು ಗುದ್ದಲಿ ಪೂಜೆ ನೆರವೇರಿಸಿದರು.
ಮದ್ದೇರಿ ಮುನಿರೆಡ್ಡಿ ಮತ್ತು ತಂಡದವರಿಂದ ಭಕ್ತಿ ಗೀತೆಗಳ ಗಾಯನ ಮತ್ತು ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸ್ವಾಗತಿಸಿದರು, ದೇವಾಲಯದ ಧರ್ಮಾಧಿಕಾರಿ ಜೆ.ವೆಂಕಟಸ್ವಾಮಿ ಇದ್ದರು.
ಪ್ರಸನ್ನ ವೆಂಕಟೇಶ್ವರಸ್ವಾಮಿ ದೇಗುಲಕ್ಕೆ 50 ಸಾವಿರಕ್ಕೂ ಅಧಿಕ ಭಕ್ತರು...
ಮಾಲೂರು: ಶ್ರಾವಣ ಮಾಸದ ಕೊನೆಯ ಶನಿವಾರ ಪ್ರಯುಕ್ತ ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ತಾಲೂಕಿನ ಹಾಗೂ ನೆರೆ ರಾಜ್ಯಗಳಿಂದ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭೇಟಿ ನೀಡಿದ್ದರು. ಬೆಳಗ್ಗಿನ ಜಾವ 5 ರ ಸುಮಾರಿಗೆ ಸುಪ್ರಭಾತ ಸೇವೆಯೊಂದಿಗೆ ಪ್ರಾರಂಭವಾದ ಸ್ವಾಮಿ ದರ್ಶನಕ್ಕೆ ಭಕ್ತರು ಸಾಲುಗಟ್ಟಿದ್ದರು. 50 ರು. ವಿಶೇಷ ದರ್ಶನಕ್ಕೂ ಬೆಳಗ್ಗಿನಿಂದ ಸಂಜೆವರೆಗೂ ಕಿ.ಮೀ.ಉದ್ದದ ಸಾಲು ಬೆಳೆದಿತ್ತು. ಆಂಧ್ರ,ತಮಿಳುನಾಡು ಹಾಗೂ ಕೇರಳ ರಾಜ್ಯದಿಂದಲೂ ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕೆ ಬಂದಿದ್ದರು. ಧಾರ್ಮಿಕ ಕಾರ್ಯದಲ್ಲಿ ಶಾಸಕ ಮಂಜುನಾಥ್ ಗೌಡ ದಂಪತಿ ಭಾಗವಹಿಸಿದ್ದರಲ್ಲದೇ ಬಂದ ಭಕ್ತಾದಿಗಳಿಗಾಗಿ 50 ಸಾವಿರ ಲಾಡುಗಳನ್ನು ವಿತರಿಸಿದರು. ಮಾಲೂರಿನ ಉದ್ಯಮಿ ಡಿ.ಟಿ.ಪುಟ್ಟಪ್ಪ ರವರಿಂದ ಪ್ರತಿ ವರ್ಷದಂತೆ ಈ ಬಾರಿಯೂ ಬ್ರಾಹ್ಮಣರ ಸಂಘದ ಸಹಕಾರದಲ್ಲಿ ಪ್ರಸಾದ ಹಂಚಿಕೆ ನಡೆಯಿತು. ಬೆಂಗಳೂರಿನ ಮುದ್ದಪ್ಪ ಮತ್ತು ಮಕ್ಕಳು ಸ್ವಾಮಿ ಅಲಂಕಾರಕ್ಕಾಗಿ ನೀಡುವ ಹೂಗಳಿಂದ ಸ್ವಾಮಿಗೆ ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು. ಸ್ಥಳೀಯ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು. ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ದೇವಾಲಯ ಸಮಿತಿಯವರು ಮಾಡಿದ್ದರು.