ನೀರಿನ ಸಮಸ್ಯೆ, ಶುದ್ಧ ನೀರು ಘಟಕ, ಕಲ್ಯಾಣಿ ಪುನಶ್ಚೇತನ
ಕನ್ನಡಪ್ರಭವಾರ್ತೆ,ಕೋಲಾರ,ಆ.31
ನೂತನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಕರೆದಿದ್ದ ಜಿಲ್ಲಾ ಪ್ರತಿನಿಧಿಗಳ ಔಪಚಾರಿಕ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಶುದ್ಧ ನೀರು ಘಟಕಗಳ ನಿರ್ಮಾಣ ಹಾಗೂ ಕಲ್ಯಾಣಿಗಳ ಪುನಶ್ಚೇತನದ ಬಗ್ಗೆ ಚರ್ಚಿಸಲಾಯಿತು ಎಂದು ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಭೆಯ ವಿವರ ನೀಡಿದ ಅವರು, ನೂತನ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳ ಪರಿಚಯಕ್ಕಾಗಿ ಕರೆದಿದ್ದ ಔಪಚಾರಿಕ ಸಭೆಯಾಗಿದ್ದರಿಂದ ಪತ್ರಕರ್ತರನ್ನು ಸಭೆಗೆ ಕರೆದಿರಲಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಗುಪ್ತವಾಗಿ ಅಥವಾ ಏಕ ಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುವುದಕ್ಕೆ ನಾವೂ ಒಪ್ಪಲ್ಲ ಎಂದು ಪತ್ರಕರ್ತರು ಸಭೆಗೆ ಆಹ್ವಾನ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರಲ್ಲದೆ, ಸಭೆಗೆ ಪತ್ರಕರ್ತರನ್ನು ಕರೆದಿದ್ದರೆ ನಷ್ಟವೇನು ಆಗುತ್ತಿರಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಹುಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲಾಗಿದೆ. ಸರ್ಕಾರದಿಂದ ಕೊರೆಸಿರುವ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಹಾಗೂ ಪಂಪು-ಮೋಟಾರ್ ಅವಳಡಿಸಲು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಸೂಚಿಸಲಾಗಿದೆ ಎಂದರು.
ಶಾಶ್ವತ ನೀರಾವರಿ ಯೋಜನೆಯ ಜತೆಗೆ ತಾತ್ಕಾಲಿಕ ಪರಿಹಾರವಾಗಿ ಕೊಳವೆ ಬಾವಿಗಳ ಮೂಲಕ ಜನರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ, ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಡಿಸಿಗೆ ಜನಪ್ರತಿನಿಧಿಗಳ ಬೆಂಬಲ: ಈ ಹಿಂದಿನ ಜಿಲ್ಲಾಧಿಕಾರಿಗಳು ಕಲ್ಯಾಣಿಗಳ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದರು. ಹೊಸ ಜಿಲ್ಲಾಧಿಕಾರಿಗಳು ಸಹ ಸದರಿ ಯೋಜನೆ ಮುಂದುವರೆಸಲು ಉತ್ಸಾಹ ತೋರಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇವೆಂದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿದ್ದರೂ ಅಭಿವೃದ್ಧಿ ಬಗ್ಗೆ ಮಾತನಾಡಲಾಗುತ್ತಿದೆ, ಕೆರೆಗಳ ಒತ್ತುವರಿ ತೆರವುಗೊಂಡಿಲ್ಲ, ಅಕ್ರಮ ಮರಳು ಸಾಗಣೆ ತಡೆಗಟ್ಟಲು ಪೊಲೀಸ್ ಇಲಾಖೆ ವಿಫಲವಾಗಿದೆ, ಕೋಲಾರ ನಗರದಲ್ಲೇ ಎರಡು ಕಲ್ಯಾಣಿಗಳ ಕಲ್ಯಾಣ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಪತ್ರಕರ್ತರು ತಿಳಿಸಿದಾಗ, ಸಮಸ್ಯೆಗಳು ಬೆಟ್ಟದಷ್ಟು ಇವೆ, ಜಿಲ್ಲೆಯ ಶಾಸಕರ ಆಯ್ಕೆಯಾಗಿ ಮೂರು ತಿಂಗಳಾಗಿದೆ. ಹೊಸ ಜಿಲ್ಲಾಧಿಕಾರಿಗಳು ಅಧಿಕಾರ ಸ್ವೀಕರಿಸಿ 13 ದಿನಗಳಾಗಿದೆ. ಮತದಾರರಿಗೆ ನೀಡಿರುವ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುವುದೇ ಜಿಲ್ಲೆಯ ಎಲ್ಲ ಶಾಸಕರ ಮುಖ್ಯ ಉದ್ದೇಶವಾಗಿದ್ದು, ಆದಷ್ಟು ಬೇಗನೆ ಜಿಲ್ಲೆಯ ಅಭಿವೃದ್ಧಿ ವೇಗವನ್ನು ಹೆಚ್ಚಿಸಿ ಜನತೆಯ ವಿಶ್ವಾಸ ಉಳಿಸಿಕೊಳ್ಳುವುದಾಗಿ ರಮೇಶ್‌ಕುಮಾರ್ ಭರವಸೆ ನೀಡಿದರು.
ಕೆರೆ ಅಭಿವೃದ್ಧಿ ಪ್ರಾಧಿಕಾರ: ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇದನ್ನು ಕಾನೂನು ರೀತಿಯಲ್ಲಿ ರಚನೆ ಮಾಡುವ ಸಲುವಾಗಿ ಮುಂದಿನ ವಿಧಾನಸಭಾ ಆಧಿವೇಶನದಲ್ಲಿ ಕಾಯಿದೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಜಿಲ್ಲೆಯ ಎಲ್ಲ ಶಾಸಕರು ಜಿಲ್ಲಾ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಜಿಲ್ಲಾಧಿಕಾರಿಗಳು ದಂಡಾಧಿಕಾರಿಗಳು ಆಗಿರುವುದರಿಂದ ಕಾನೂನು ಪ್ರಕಾರ ಅಕ್ರಮ ನಿಯಂತ್ರಣಕ್ಕೆ ಕ್ರಮ ಜರುಗಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲವೆಂದು ತಿಳಿಸಿದರು.
ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಅಕ್ರಮ ಮರಳು ಸಾಗಾಣೆಯಾಗಲಿ, ಮರಳು ಫಿಲ್ಟರ್ ದಂಧೆಯಾಗಲಿ ಇಲ್ಲವೇ ಇಲ್ಲ. ಇಟ್ಟಿಗೆ ಕಾರ್ಖಾನೆಯವರು ಕೆರೆಗಳಲ್ಲಿ ಮಣ್ಣು ತೆಗೆದುಕೊಳ್ಳುತ್ತಿದ್ದು, ಮರಳು ಫಿಲ್ಟರ್ ಮಾಡದಂತೆ ಇವರಿಗೆ ಅರಿವು ಮೂಡಿಸುವುದಾಗಿ ನುಡಿದರು.
ರಾಮಕ್ಕ ಅಳಲು: ಕೆಜಿಎಫ್ ಶಾಸಕ ವೈ.ರಾಮಕ್ಕ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದ್ದು, ಅಧಿಕಾರಿಗಳು ಸಹಕಾರ ನೀಡುತ್ತಿಲ್ಲವೆಂದು ತಮ್ಮ ಅಳಲು ತೋಡಿಕೊಂಡರು.
ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಮಾತನಾಡಿ, ಕೋಲಾರ ನಗರಸಭೆಯಿಂದ ಟ್ಯಾಂಕರ್ ಮಾಲೀಕರಿಗೆ 1.30 ಕೋಟಿ ಬಾಕಿ ಪಾವತಿಸಬೇಕಾಗಿದ್ದು, ಬಾಕಿ ಪಾವತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ತಮ್ಮ ಅನುದಾನದಲ್ಲಿ ನಗರದಲ್ಲಿ ಐದು ಕಡೆ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಕೆ.ಎಂ.ನಾರಾಯಣಸ್ವಾಮಿ, ಮುಳಬಾಗಿಲು ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾಧಿಕಾರಿ ಡಿ.ಕೆ.ರವಿ, ಜಿ.ಪಂ ಸಿಇಒ ಜುಲ್ಫಿಖಾರ್ ಉಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.