ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಫ್ಲೋರೈಡ್ ರಹಿತ ಕ್ಷೇತ್ರ ನನ್ನ ಗುರಿ: ಮೊಯ್ಲಿ

Srinivasa Murthy VN
Updated On : 31 Aug 2013, 11:03 am

ಬಾಗೇಪಲ್ಲಿ: ಬಡವರ ಬದುಕಿನ ಪ್ರಶ್ನೆ, ಮಹಿಳೆಯರ ಸಂರಕ್ಷಣೆ ಹಾಗೂ ಶುದ್ಧ ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬೆರಸದೆ ಪಕ್ಷಾತೀತವಾಗಿ ಎಲ್ಲರು ಸಹಕರಿಸಿದಾಗ ಮಾತ್ರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಹಾಗೂ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೋರೇಷನ್ ಸಂಯುಕ್ತ ಆಶ್ರಯದಲ್ಲಿ ಆರ್‌ಇಸಿಎಲ್ ಯೋಜನೆಯಡಿಯಲ್ಲಿ ತಾಲೂಕಿನ ಘಂಟಂವಾರಿಪಲ್ಲಿ ಗ್ರಾಮದ ಚಿತ್ರಾವತಿ ನದಿ ದಡದಲ್ಲಿರುವ ಭೈರವೇಶ್ವರ ದೇವಸ್ಥಾನ ಬಳಿ ಇಕೋಪಾರ್ಕ್ ಅಭಿವೃದ್ಧಿ ಹಾಗೂ ಬಿ.ಬಿ ರಸ್ತೆಯಿಂದ ಹೊಸಹುಡ್ಯ ಮುಖ್ಯರಸ್ತೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ಫ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರನ್ನು ನೀಡಲು 10 ಯೋಜನೆಗಳನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದ್ದು, ಇಡೀ ವಿಧಾನಸಭೆ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಪ್ಲೋರೈಡ್ ರಹಿತ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ ಎಂದರು.
ಈ ಹಿಂದೆ ನೀಡಿದ್ದ ಭರವಸೆಯಂತೆ 35 ಲಕ್ಷ ರು. ವೆಚ್ಚದಲ್ಲಿ ಸೌರವಿದ್ಯುತ್ ಮತ್ತು ಕಾರಂಜಿಗೆ 20 ಲಕ್ಷ, ರಸ್ತೆ ಅಭಿವೃದ್ಧಿಗೆ 15 ಲಕ್ಷ, ಬೃಂದಾವನಕ್ಕೆ 20 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಕಾಮಗಾರಿಗಳನ್ನು 2 ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲು ಈಗಾಗಲೇ ಯೋಜನೆ ಸಿದ್ಧತೆ ಮಾಡಲಾಗಿದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು  ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೋರೇಷನ್ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ ಶರ್ಮಾ ವಹಿಸಲಿದ್ದಾರೆ. ಈ ಯೋಜನೆಯನ್ನು ಮೂರು ತಿಂಗಳೊಳಗಾಗಿ ಪೂರ್ಣಗೊಳಿಸುವ ಭರವಸೆ ನನಗೆ ಇದೆ ಎಂದರು.
ತಾಲೂಕಿನ 55 ಕೆರೆಗಳ ಅಭಿವೃದ್ಧಿಗೆ ಐ.ಟಿ.ಸಿ.ಕಂಪನಿ ವತಿಯಿಂದ 5 ವರ್ಷದಲ್ಲಿ 75 ಕೋಟಿ ರು. ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಇನ್ನೂ ಕ್ರೀಡಾಂಗಣದ ಅಭಿವೃದ್ಧಿಗಾಗಿ 50 ಲಕ್ಷ ಮಂಜೂರಾಗಿದೆ. ಇದನ್ನು ಸಂಬಂದಪಟ್ಟ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು. ಹೆಣ್ಣು ಮಕ್ಕಳು ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗಾಗಿ ರಾಜ್ಯದ ಚಿಕ್ಕಬಳ್ಳಾಪುರ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಕೌಶಲ್ಯಾಧಾರಿತ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಈ ತರಬೇತಿ ಕೇಂದ್ರಗಳಲ್ಲಿ ಕ್ಷೇತ್ರದ ಹೆಣ್ಣು ಮಕ್ಕಳು ತರಬೇತಿ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು. ಈ ಯೋಜನೆಗಾಗಿ 40 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಇಂತಹ ಬೃಂದಾವನ ಎಲ್ಲೂ ಇಲ್ಲ. ನಮ್ಮ ತಾಲೂಕಿನಲ್ಲಿ ಆಗಿರುವುದು ತುಂಬ ಸಂತಸದ ವಿಷಯ.  ಇದಕ್ಕೆ ನೀಡಲಾಗಿರುವ ಅನುದಾನ ಸಾಲದು ಇನ್ನು ಹೆಚ್ಚಿಗೆ ಅನುದಾನ ನೀಡಬೇಕಾಗಿದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಆಕ್ರಮ ಕಲ್ಲಿನ ಗಣಿಗಾರಿಕೆ ಹೆಚ್ಚಾಗಿದ್ದು, ಆಕ್ರಮವಾಗಿ ದೊಡ್ಡ ಕಲ್ಲುಗಳನ್ನು ಟ್ರಕ್‌ಗಳಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ. ನಾನು ಸಿಎಂ, ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಿಲ್ಲದಂತಾಗಿದೆ.  ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಆದರೆ, ಅಕ್ರಮವಾಗಿ ಈ ಕ್ಷೇತ್ರದ ಕಲ್ಲಿನ ಸಂಪತ್ತು ಲೂಟಿಯಾಗುತ್ತಿದ್ದರೂ ಯಾವುದೇ ಅಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.ಇದೇ ರೀತಿಯಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆ ಮುಂದುವರೆದಲ್ಲಿ ತಾಲೂಕು ಎರಡನೇ ಬಳ್ಳಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಆರ್‌ಇಸಿಎಲ್ ಅಧಿಕಾರಿ ರಾಜೀವ್ ಶರ್ಮ, ಪ್ರಧಾನ ವ್ಯವಸ್ಥಾಪಕ ರಾಖೇಶ್ ಅರೋರ, ದಕ್ಷಿಣ ವಲಯ ಅಧಿಕಾರಿ ಪಿ.ಎಸ್. ಹರಿಹರನ್,ಜಿ.ಪಂ. ಸದಸ್ಯೆ ಬಿ.ಸಾವಿತ್ರಮ್ಮ, ಮಾಜಿ ಶಾಸಕ ಎನ್.ಸಂಪಂಗಿ ಮತ್ತಿತರರು ಹಾಜರಿದ್ದರು.

ಉದ್ಯೋಗ ಉನ್ನತಿ ಕೇಂದ್ರಕ್ಕೆ ಕೇಂದ್ರ ಸಚಿವ ಮೊಯ್ಲಿ ಚಾಲನೆ
ಚಿಕ್ಕಬಳ್ಳಾಪುರ:
ನಿರುದ್ಯೋಗಿಯುವಕ, ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಸಾಮರ್ಥ್ಯ ಗಳಿಸಿದ ನಂತರ ಉದ್ಯೋಗಾವಕಾಶಗ ಳನ್ನು ಕಲ್ಪಿಸುವ ಉದ್ಯೋಗ ಉನ್ನತಿ ಕೇಂದ್ರಕ್ಕೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ವೀರಪ್ಪ ಮೊಯ್ಲಿ ಚಾಲನೆ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇದರಲ್ಲಿ ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರೂ ಅಗತ್ಯವಿರುವ ಕೌಶಲ್ಯ, ಸಾಮರ್ಥ್ಯದ ಕೊರತೆಯಿಂದ ಉದ್ಯೋಗ ಪಡೆದುಕೊಳ್ಳುವಲ್ಲಿ ಹಲವರು ವಿಫಲರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ನಿರುದ್ಯೋಗಿಗಳಿಗೆ ಸೂಕ್ತ ತರಬೇತಿಯನ್ನು ಕೊಟ್ಟು ಆನಂತರ ಉದ್ಯೋಗಸ್ಥರಾಗುವಂತೆ ಮಾಡುವ ನಿಟ್ಟಿನಲ್ಲಿ ಉದ್ಯೋಗ ಉನ್ನತಿ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಕಾರ್ಯಾರಂಭಿಸಿದ್ದು ನಗರದ ಬಿ.ಬಿ.ರಸ್ತೆಯಲ್ಲಿರುವ ಜಿಎನ್‌ಆರ್ ಕಾಂಪ್ಲೆಕ್ಸ್‌ನಲ್ಲಿ ಕಚೇರಿಯನ್ನು ತೆರೆಯಲಾಗಿದೆ.
ಗೈಲ್ ಮತ್ತು ಲೇಬರ್ ನೆಟ್ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗ ಉನ್ನತಿ ಕೇಂದ್ರದಲ್ಲಿ ನಿರುದ್ಯೋಗಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನಿರುದ್ಯೋಗಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡ ನಂತರ ಅಗತ್ಯವಿರುವ ತರಬೇತಿಯನ್ನು ನೀಡಲಾಗುತ್ತದೆ. ಸದ್ಯ ಚಿಕ್ಕಬಳ್ಳಾಪುರ ಮತ್ತು ನೆಲಮಂಗಲದಲ್ಲಿ ತಲಾ 3 ಸಾವಿರ ಮಂದಿ ನೋಂದಣಿ, ಚಿಕ್ಕಬಳ್ಳಾಪುರದಲ್ಲಿ 1200 ಮಂದಿಗೆ, ನೆಲಮಂಗಲದಲ್ಲಿ 1000 ಮಂದಿಗೆ ತರಬೇತಿ ನೀಡಿ ಆನಂತರ ಉದ್ಯೋಗವನ್ನು ಕೊಡಿಸುವ ಗುರಿಯನ್ನು ಹೊಂದಿದೆ.
4 ತಂಡಗಳಲ್ಲಿ 30 ದಿನಗಳ ಕಂಪ್ಯೂಟರ್ ಬೇಸಿಕ್ ತರಬೇತಿ, 60 ದಿನಗಳ ಬ್ಯುಟಿಷಿಯನ್ ಮತ್ತು 45 ದಿನಗಳ ಕರಕುಶಲ ತರಬೇತಿಯನ್ನು ತಲಾ 2 ಬ್ಯಾಚುಗಳಲ್ಲಿ ನೀಡಲಾಗುತ್ತಿದೆ. ತರಬೇತಿ ಪಡೆದುಕೊಂಡವವರಿಗೆ ಉದ್ಯೋಗವನ್ನು ಕೊಡಿಸಲು ಕಂಪನಿಗಳು, ಸಂಘ ಸಂಸ್ಥೆಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಉದ್ಯೋಗ ಉನ್ನತಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಲೆಬರ್‌ನೆಟ್ ಕಾರ್ಯ ನಿರ್ವಹಣಾಧಿಕಾರಿ ಗಾಯತ್ರಿ ವಸುದೇವನ್, ದೇಶದ ಸಮಸ್ಯೆಗಳಲ್ಲಿ ನಿರುದ್ಯೋಗ ಮತ್ತು ಅನಕ್ಷರತೆ ಪ್ರಮುಖ ಸಮಸ್ಯೆಗಳಾಗಿವೆ. ಉದ್ಯೋಗವಿಲ್ಲದೇ ಅನೇಕರು ಆರ್ಥಿಕವಾಗಿ ಹಿಂದುಳಿಯುತ್ತಿದ್ದಾರೆ. ಇದನ್ನರಿತು ಲೇಬರ್‌ನೆಟ್ 11 ರಾಜ್ಯಗಳಲ್ಲಿ ಉದ್ಯೋಗ ತರಬೇತಿಯನ್ನು ನೀಡಿ ನಿರುದ್ಯೋಗಿಗಳಿಗೆ ಕೆಲಸವನ್ನು ಕೊಡಿಸುತ್ತಿದೆ. ಈಗ ಚಿಕ್ಕಬಳ್ಳಾಪುರದಲ್ಲೂ ಸಂಸ್ಥೆ ಕಾರ್ಯಾರಂಭಿಸಿದ್ದು ಇದನ್ನು ಜನರು ಸದುಪಯೋಗಪಡಿಸಿಕೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.

ಮೊಯ್ಲಿ ಆಗಮನ; ಗೊಂದಲದ ವಾತಾವರಣ
ಬಾಗೇಪಲ್ಲಿ:
ಪಟ್ಟಣದ ಪ್ರವಾಸಿ ಮಂದಿರದ ಬಳಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಆಗಮಿಸುತ್ತಿದ್ದಂತೆ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ಘೋಷಣೆಗಳಿಂದ ಕೆಲ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಣದ ಬೆಂಬಲಿಗರು ಹಾಲಿ ಶಾಸಕರ ಪರ ಜಯಕಾರಗಳನ್ನು ಹಾಕಿದರೆ, ಮಾಜಿ ಶಾಸಕ ಎನ್.ಸಂಪಂಗಿ ಬೆಂಬಲಿಗರು ಡಾ. ಎಂ.ವೀರಪ್ಪ ಮೊಯ್ಲಿ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ ಪರ ಜಯಕಾರ ಕೂಗಿದರು.
 ನಂತರ ಸಚಿವರು ನೇರವಾಗಿ ಮಾಜಿ ಶಾಸಕರ ಜತೆ ಕಾಂಗ್ರೆಸ್ ಕಾರ್ಯಕರ್ತರಿದ್ದ ಕೊಠಡಿಗೆ ತೆರಳಿದರೆ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ಅವರ ಬೆಂಬಲಿಗರು ಇನ್ನೊಂದು ಕೊಠಡಿಗೆ ತೆರಳಿದರು.
ಕಾರ್ಯಕ್ರಮಕ್ಕೆ ಹೋಗುವ ಮುನ್ನ ಇದೇ ಪ್ರವಾಸಿ ಮಂದಿರದ ಇನ್ನೊಂದು ಕೊಠಡಿಯಲ್ಲಿದ್ದ ಹಾಲಿ ಶಾಸಕರನ್ನು ಮರೆತು ಹೋಗುತ್ತಿದ್ದಾಗ ಹಾಲಿ ಶಾಸಕರ ಕೆಲವು ಬೆಂಬಲಿಗರು ಹಾಲಿ ಶಾಸಕರು ಇರುವ ಕೊಠಡಿಗೆ ಬರುವಂತೆ ಒತ್ತಡ ಹೇರಿದರು.
ಇದರಿಂದ ತಬ್ಬಿಬ್ಬಾದ ಕೇಂದ್ರ ಸಚಿವರು ಅತ್ತಪುಲಿ ಇತ್ತ ದರಿ ಎಂಬಂತೆ ಎತ್ತ ಹೋಗಬೇಕೆಂದು ತಿಳಿಯದೆ ನಿಂತಲ್ಲೇ 5-6 ನಿಮಿಷ ನಿಂತು ಶಾಸಕರನ್ನು ಅಲ್ಲಿಂದಲೇ ಕಾರ್ಯಕ್ರಮಕ್ಕೆ ಬರುವಂತೆ ಸೂಚಿಸಿ ವೇದಿಕೆ ಕಡೆ ತೆರಳಿದರು. ಹಾಲಿ ಶಾಸಕರು ಕೇಂದ್ರ ಸಚಿವರನ್ನು ಹಿಂಬಾಲಿಸಿದರು.

ಸರ್ಕಾರಕ್ಕೆ ಒತ್ತಡ ಹೇರಿ ವೈದ್ಯರ ಕೊರತೆ ನಿವಾರಿಸಿ: ಸುಧಾಕರ್
ಚಿಕ್ಕಬಳ್ಳಾಪುರ:
ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೆಲ್ಲಾ ವೈದ್ಯರ ಕೊರತೆ ಸಮಸ್ಯೆ ಕಾಡುತ್ತಿದೆ. ಇದನ್ನು ಹೋಗಲಾಡಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಶಾಸಕ ಕೆ.ಸುಧಾಕರ್ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿರವರನ್ನು ಒತ್ತಾಯಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಗೇಲ್, ಲೇಬರ್ ನೆಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯೋಗ ಉನ್ನತಿ ಕೇಂದ್ರ, ತುಮ್ಮನಹಳ್ಳಿಯಲ್ಲಿ ಫ್ಲೋರೈಡ್ ನೀರು ಶುದ್ಧೀಕರಣ ಘಟಕ ಸ್ಥಾಪನೆ, ಜಕ್ಕಲಮಡಗು ಜಲಾಶಯ ನಲ್ಲಕದಿರೇನಹಳ್ಳಿ ಮಾರ್ಗದ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಮುಖವಾಗಿ ಆರೋಗ್ಯ ಮತ್ತು ಶಿಕ್ಷಣ, ಉದ್ಯೋಗವನ್ನು ಸಮರ್ಪಕವಾಗಿ ಒದಗಿಸಲು ಸರ್ಕಾರಗಳು ಒತ್ತು ಕೊಡಬೇಕು. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವೈದ್ಯರ ಸಮಸ್ಯೆಯಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಆರೋಗ್ಯ ಸೇವೆಯನ್ನು ಸಮರ್ಪಕ ರೀತಿಯಲ್ಲಿ ಜನರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗಾಗಿ ಸವಲತ್ತುಗಳನ್ನು ಹೆಚ್ಚಿಗೆ ಒದಗಿಸಬೇಕು. ಆಗ ಮಾತ್ರ ಜನರ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.
ಥೈಲ್ಯಾಂಡ್, ಕೆನಡಾದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲ ಹೊಸ ಮಾರ್ಪಾಡುಗಳನ್ನು ತಂದು ವಿಶೇಷ ಸವಲತ್ತುಗಳ ಮೂಲಕ ಜನರಿಗೆ ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಸಿಗುವಂತೆ ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ದೇಶದಲ್ಲಿನ ಜನರಿಗೆ ಆರೋಗ್ಯ ಸೇವೆ ನೀಡುವಂತಾಗಲು ಅಗತ್ಯವಿರುವ ಹೊಸ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಹೆಣ್ಣು ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಿ ಸ್ವಯಂ ಉದ್ಯೋಗವನ್ನು ಕೈಗೊಂಡು ಆರ್ಥಿಕ ಪ್ರಗತಿಯತ್ತ ಸಾಗುವಂತೆ ಮಾಡಬೇಕೆಂದರು.
ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಜಿಲ್ಲೆಯಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಜನರನ್ನು ಬಾಧಿಸುತ್ತಿದೆ. ತಾಲೂಕಿನ ತುಮನಹಳ್ಳಿಯಲ್ಲಿ ಫ್ಲೋರೈಡ್ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿ, ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಲಾ 8 ಲಕ್ಷ ರು. ವೆಚ್ಚದಲ್ಲಿ 10 ಕಡೆ ಶುದ್ಧೀಕರಣ ಘಟಕವನ್ನು ಸ್ಥಾಪನೆ ಮಾಡಲಾಗುವುದು. ಉದ್ಯೋಗ ಉನ್ನತಿ ಕೇಂದ್ರದ ಮೂಲಕ ನಿರುದ್ಯೋಗಿಗಳಿಗೆ ತರಬೇತಿಯನ್ನು ನೀಡಿ ಉದ್ಯೋಗವನ್ನು ಕೊಡಿಸಲಾಗುತ್ತಿದೆ ಎಂದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೆಲಸವಾಗುತ್ತಿದ್ದು ಇದೀಗ ಕೇಂದ್ರ ಸರ್ಕಾರದ ಅನುದಾನದಲ್ಲಿ ಟ್ರಾಮರ್ ಸೆಂಟರ್ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು ಐದೂವರೆ ಕೋಟಿ ರು. ವೆಚ್ಚದ ಚಿಕಿತ್ಸೆ ಯಂತ್ರೋಪಕರಣಗಳನ್ನು ಅಳವಡಿಸಿ ಜನರ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಸೆ.20 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಸಂಕೀರ್ಣದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ ಎಂದರು. ಜಿಲ್ಲಾಧಿಕಾರಿ ವಿಶಾಲ್.ಆರ್, ಗೇಲ್ ನಿರ್ದೇಶಕ ಎಂ.ರವೀಂದ್ರನ್ ಮಾತನಾಡಿದರು. ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಲೇಬರ್ ನೆಟ್ ಕಾರ್ಯ ನಿರ್ವಹಣಾಧಿಕಾರಿ ಗಾಯತ್ರಿ ವಸುದೇವನ್, ನಿರ್ದೇಶಕರಾದ ಅನುರಾಧ, ವಂದನಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement