ಅಗಲಗುರ್ಕಿಯಲ್ಲಿ ಫುಟ್ಬಾಲ್ ಪಂದ್ಯಾವಳಿ
ಚಿಕ್ಕಬಳ್ಳಾಪುರ: ತಾಲೂಕಿನ ಅಗಲಗುರ್ಕಿ ಬಳಿ ಇರುವ ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಶಾಲಾಂತರ್ಗತ ಫುಟ್ ಬಾಲ್ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಅರುಣ್ಕುಮಾರ್, ಕ್ರೀಡಾಸ್ಫೂರ್ತಿಯಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಗೆಲುವನ್ನು ಸಾಧಿಸಬೇಕು.ಇದಕ್ಕಾಗಿ ನಿರಂತರವಾಗಿ ಅಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಟಿ.ವಿ. ಬಾಲರಾಜು, ಭಾಗ್ಯಲಕ್ಷ್ಮೀ ಮತ್ತು ದೈಹಿಕ ಶಿಕ್ಷಕ ಮನೋಹರ್ ಉಪಸ್ಥಿತರಿದ್ದರು. ಆಜಾದ್, ಸುಭಾಷ್ ಮತ್ತು ವಿವೇಕಾನಂದ ಎಂಬ ಮೂರು ತಂಡಗಳನ್ನಾಗಿ ವಿಂಗಡಿಸಿ ಡಬ್ಬಲ್ ಲೀಗ್ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಯಿತು. ಬೆಳಗಿನ ಅವಧಿಯಲ್ಲಿ ಮೂರು ಪಂದ್ಯಗಳು ಮತ್ತು ಮಧ್ಯಾಹ್ನದ ಅವಧಿಯಲ್ಲಿ ಮೂರು ಪಂದ್ಯಗಳು ಸೇರಿದಂತೆ ಒಟ್ಟು ನಡೆದ ಆರು ಪಂದ್ಯಗಳಲ್ಲಿ ಆಜಾದ್ ತಂಡವು ನಾಲ್ಕು ಪಂದ್ಯಗಳನ್ನು ಆಡಿ ಒಟ್ಟು 4 ಅಂಕದೊಂದಿಗೆ ಪ್ರಥಮ ಸ್ಥಾನ ಪಡೆಯಿತು. ವಿವೇಕಾನಂದ ಮತ್ತು ಸುಭಾಷ್ ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯಿತು.
ವಿಜೇತರಿಗೆ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಬಹುಮಾನ ವಿತರಿಸಿದರು. ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪ್ರಥಮ ಡಿ.ಪಿ.ಎಡ್ ವಿದ್ಯಾರ್ಥಿ ಸತೀಶ್, ಉತ್ತಮ ರಕ್ಷಕ ಪ್ರಶಸ್ತಿಯನ್ನು ದ್ವಿತೀಯ ಡಿ.ಪಿ.ಎಡ್ ವಿದ್ಯಾರ್ಥಿ ಮಣಿ ಮತ್ತು ಉತ್ತಮ ಗೋಲು ರಕ್ಷಕ ಪ್ರಶಸ್ತಿಯನ್ನು ದ್ವಿತೀಯ ಡಿ.ಪಿ.ಎಡ್ ವಿದ್ಯಾರ್ಥಿ ಅಶೋಕ ಪಡೆದುಕೊಂಡರು.