ಆಲಂಗೂರು ಶ್ರೀನಿವಾಸ್ ಸ್ಮರಣಾರ್ಥ ಕಬ್ಬಡಿ ಪಂದ್ಯಾವಳಿ
ಮುಳಬಾಗಲು: ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಪುಣ್ಯ ಸ್ಮರಣೆಯನ್ನು ಕಬಡ್ಡಿ ಪಂದ್ಯಾವಳಿ ಏರ್ಪಡಿಸಿರುವುದು ಶ್ಲಾಘನೀಯ ಎಂದು ರಾಜ್ಯ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಎಂ. ಗೋಪಾಲ್ ಹೇಳಿದರು. ತಾಲೂಕಿನ ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ಎಂ. ಗೊಲ್ಲಹಳ್ಳಿಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆಲಂಗೂರು ಶಿವಣ್ಣ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ ರಾಜಗೋಪಾಲ್, ಚೌಡೇಶ್ವರಿ ರಾಮಚಂದ್ರ, ಶ್ಯಾಮೇಗೌಡ, ರಾಜಗೋಪಾಲ್, ಮುಖ್ಯಕಾರ್ಯದರ್ಶಿ ಝಲ್ವಿಕರ್ ಉಲ್ಲಾ, ಶ್ಯಾಮೇಗೌಡ, ನಲ್ಲೂರು ರಘುಪತಿ, ತೇಜೋರಮಣ, ಸೂರ್ಯನಾರಾಯಣಗೌಡ, ಸಿ.ವಿ. ಗೋಪಾಲ್ ಇದ್ದರು.
ರಾಜಕಾಲುವೆ ತೆರವು: ಸಾರ್ವಜನಿಕರ ಪ್ರಶಂಸೆ
ಮಾಲೂರು: ಇಲ್ಲಿನ ಆದರ್ಶ ನಗರ ಬಡಾವಣೆಯ ರಾಜಕಾಲುವೆ ಮುಚ್ಚಿದ್ದ ಖಾಸಗಿ ಲೇ ಔಟ್ ಮಾಲೀಕ ತಹಸೀಲ್ದಾರ್ ಆದೇಶದಂತೆ ಜೆಸಿಬಿ ಮೂಲಕ ತೆರವುಗೊಳಿಸಿದ್ದು, ತಹಸೀಲ್ದಾರ್ ಅವರ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಆದರ್ಶ ಬಡಾವಣೆಯಲ್ಲಿ ಸರ್ವೆ ನಂ.182 ಕ್ಕೆ ಹೂಂದಿಕೊಂಡಂತೆ ಇದ್ದ ರಾಜಕಾಲುವೆಯನ್ನು ಖಾಸಗಿ ವ್ಯಕ್ತಿ ಮುಚ್ಚಿ ತನ್ನ ಲೇ ಔಟ್ನ್ನು ವಿಸ್ತರಣೆ ಮಾಡಿಕೊಂಡಿದ್ದ. ಇದನ್ನು ಗಮನಿಸಿದ ಸ್ಥಳೀಯರು ತಹಸೀಲ್ದಾರ್ ರವರಿಗೆ ನೀಡಿದ ದೂರಿನ ಮೇರೆಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಅವರು ರಾಜಕಾಲುವೆ ಮುಚ್ಚಿದ್ದ ಲೇಔಟ್ ಮಾಲೀಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ತಹಸೀಲ್ದಾರ್ ಅವರ ಆದೇಶದ ವಿಷಯ ತಿಳಿದ ಲೇ ಔಟ್ ಮಾಲೀಕ ತಕ್ಷಣ ಜೆಸಿಬಿ ಮೂಲಕ ರಾಜಕಾಲುವೆ ತೆರವುಗೊಳಿಸಿದ್ದಾನೆ.
ಸಾರ್ವಜನಿಕರ ಪ್ರಶಂಸೆ: ಸರ್ಕಾರದ ಆಸ್ತಿ ಉಳಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಅವರು ತೋರುತ್ತಿರುವ ಸ್ಪಂದನೆ ಸಾರ್ವಜನಿಕರ ಪ್ರಂಶಸೆಗೆ ಪಾತ್ರವಾಗಿದೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಲೇ ಔಟ್ಗಳು ಪಟ್ಟಣದೊಳಗೆ ಹಾದುಹೋಗುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿವೇಶನ ನಿರ್ಮಿಸುತ್ತಿದ್ದಾರೆ.ಪ್ರಭಾವಿಗಳು ನಡೆಸುತ್ತಿರುವ ಈ ದಂಧೆಯನ್ನು ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಅವರು ತೆರವುಗೊಳಿಸಲಿದ್ದಾರೆ ಎಂಬ ಆಶಾಭಾವನೆಯನ್ನು ಸಾರ್ವಜನಿಕರು ವ್ಯಕ್ತ ಪಡಿಸುತ್ತಿದ್ದಾರೆ.