ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಡಿ ಶಾಲೆಗಳ ಅಭಿವೃದ್ಧಿಗೆ ಸಿಮೋಲ್ ಮೋಹನ್ ಸೂಚನೆ

Srinivasa Murthy VN
Updated On : 12 Dec 2013, 1:19 am

ಕೋಲಾರ: ಗಡಿ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗಮನ ನೀಡಿ, ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕೆಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿಮೋಲ್ ಮೋಹನ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪದ್ಮನಾಭ್ ಅವರಿಗೆ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ಬಂಗಾರಪೇಟೆ ತಾಲೂಕು ಗಡಿಭಾಗದ ಬತ್ತಲಹಳ್ಳಿ, ತೊಪ್ಪನಹಳ್ಳಿ, ಕಳವಂಚಿ, ಸೇರಿದಂತೆ 12 ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಯಾವುದೇ ಕಾರಣಕ್ಕೂ ಅಲ್ಲಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಎಚ್ಚರವಹಿಸಬೇಕೆಂದರು. ಡಿಡಿಪಿಐ ಪದ್ಮನಾಭ್ ಮಾತನಾಡಿ, ಬಂಗಾರಪೇಟೆ ತಾಲೂಕಿನ ಗಡಿ ಭಾಗದಲ್ಲಿರುವ 12 ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿತ್ತು.  ಆದರೆ, ಮಕ್ಕಳ ಹಿತದೃಷ್ಟಿಯಿಂದ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಉತ್ತರಿಸಿದರು.
ಗಡಿ ಪ್ರದೇಶವಾಗಿರುವ ಹಳ್ಳಿಗಳಿಗೆ ಕೌನ್ಸಲಿಂಗ್ ಮೂಲಕ ಶಿಕ್ಷಕರ ನಿಯೋಜನೆ ಮಾಡಲಾಗಿತ್ತಾದರೂ ಯಾವುದೇ ಶಿಕ್ಷಕರು ಈ ಜಾಗವನ್ನು ತೆಗೆದುಕೊಳ್ಳದೆ ಇರುವುದರಿಂದ ಖಾಲಿ ಉಳಿಯುವಂತಾಯಿತು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿ ಮತ್ತು ವಿಜ್ಞಾನ ಶಿಕ್ಷಕರು ಇಲ್ಲ, ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕಷ್ಟವಾಗಲಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ದೂರಿದರು. ರಾಜ್ಯದಲ್ಲಿ ಮಾತೃಭಾಷೆ ಕನ್ನಡವಾಗಿದ್ದರೂ ರಾಷ್ಟ್ರ ಭಾಷೆ ಹಿಂದಿಯಾಗಿರುವುದರಿಂದ ಹಿಂದಿ ಶಿಕ್ಷಕರಿಗೂ ಆದ್ಯತೆ ನೀಡಬೇಕಾಗಿದೆ ಎಂದರು. ಡಿಡಿಪಿಐ ಪದ್ಮನಾಭ್ ಮಾತನಾಡಿ, ಹಿಂದೆ ಭಾಷೆಯ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಸಾಮಾನ್ಯ ಡಿ.ಎಡ್ ಮಾಡಿರುವುದರಿಂದ ತೊಂದರೆಯಾಗುತ್ತಿದೆ ಎಂದರು.
ವಾರದಲ್ಲಿ ಒಂದು ದಿನ ಶಾಲೆಯ ಮಕ್ಕಳಿಗೆ ಗೋಧಿ ನೀಡುವ ದಿನವನ್ನು ನಿಗಧಿ ಮಾಡಲು ಸರ್ಕಾರ ಜಿಪಂಗೆ ಅಧಿಕಾರ ನೀಡಿರುವುದರಿಂದ ಸದಸ್ಯರ ಒಪ್ಪಿಗೆ ಮೇರೆಗೆ ಶನಿವಾರ ಗೋಧಿ ನೀಡಲಾಗುವುದು ಎಂದು ಜಿಪಂ ಸಿಇಒ ಜುಲ್ಪಿಕಾರ್ ಉಲ್ಲಾ ತಿಳಿಸಿದರು.
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಕನ್ನಯ್ಯ ಮಾತನಾಡಿ, ಬಂಗಾರಪೇಟ ಮತ್ತು ಕೋಲಾರ ತಾಲೂಕಿನಲ್ಲಿ ಎನ್ಜಿಒಗಳು ನೀಡುತ್ತಿರುವ ಬಿಸಿಯೂಟ ಗುಣಮಟ್ಟವಿಲ್ಲ ಎಂಬ ಆರೋಪ ಬಂದಿರುವುದರಿಂದ ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಎಸ್.ಬಿ. ಮುನಿವೆಂಕಟಪ್ಪ. ರತ್ನಮ್ಮ, ಮಂಗಮ್ಮ ಮುನಿಸ್ವಾಮಿ, ಸೋಮಶೇಖರ್, ಬದನೂರು ಇದ್ದರು.

'ಮಹಿಳೆಯರಿಗೆಅರಿವು ಅನಿವಾರ್ಯ'
ಕೊರಟಗೆರೆ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಹೆಣ್ಣುಭ್ರೂಣಹತ್ಯೆಯಂತಹ ಪಿಡುಗು ತಡೆಯಬೇಕಾದರೆ ಮಹಿಳೆಯರಿಗೆ ಶಿಕ್ಷಣದೊಂದಿಗೆ ಅರಿವು ಮೂಡಿಸುವುದು ಅನಿವಾರ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್. ಮಹೇಶ್ ತಿಳಿಸಿದರು. ಅವರು ಮದ್ದೂರು ತಾಲೂಕಿನ ಆರ್.ಕೆ.ಎಜ್ಯುಕೇಷನ್ ಇನ್ಸ್ಟೀಟ್ಯೂಷನ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪಟ್ಟಣದ ಸಂನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ  ಲಿಂಗ ತಾರತಮ್ಯದ ತಲ್ಲಣಗಳೂ ಸಹಜವೂ-ಅಸಹಜವೂ ಎಂಬ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮುದಾಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಂಧಶ್ರದ್ಧೆಗಳಿಂದ ಸಮಾಜದಲ್ಲಿ ಮಹಿಳೆ ಕಿರುಕುಳಕ್ಕೆ ಒಳಗಾಗುತ್ತಿದ್ದು ಆಕೆ ಅನುಭವಿಸುತಿರುವ ಅಪಮಾನಕ್ಕೆ ಮಿತಿಯೇ ಇಲ್ಲದಂತಾಗಿದೆ ಇದಕ್ಕೆ ಮೂಲಕ ಕಾರಣ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದಿರುವುದು, ಅವರಿಗೆ ಉತ್ತಮ ಭವಷ್ಯ ರೊಪಿಸದಿರುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement