ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭ್ರೂಣ ಹತ್ಯೆ ತಡೆಗೆ ಕಠಿಣ ಕಾಯಿದೆ ಜಾರಿಗೆ ಚಿಂತನೆ

Srinivasa Murthy VN
Updated On : 12 Dec 2013, 1:18 am

ಕನ್ನಡಪ್ರಭ ವಾರ್ತೆ, ಕೋಲಾರ,ಡಿ.11
ಭ್ರೂಣ ಹತ್ಯೆ ತಡೆಗಾಗಿ ಸರ್ಕಾರಗಳು ಅನೇಕ ರೀತಿಯ ಕಾನೂನುಗಳನ್ನು ಜಾರಿಗೆ ತಂದಿದ್ದು ಈ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲು ವಿದ್ಯಾವಂತರು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಹೊರ ವಲಯದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಕಾಯ್ದೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ಗಂಡಸರ ಸಹಕಾರ ಅಗತ್ಯವಿತ್ತು. ಆದರೆ, ಸರ್ಕಾರಗಳು ಹೆಣ್ಣಿನ ಹಕ್ಕುಗಳ ರಕ್ಷಣೆಗಾಗಿ ಅನೇಕ ರೀತಿಯ ಕಾರ್ಯಕ್ರಮ ಹಾಗೂ ಕಾನೂನು ಜಾರಿಗೊಳಿಸುವ ಮೂಲಕ ಹೆಣ್ಣು-ಗಂಡು ಸಮಾನವಾಗಿ ಬದುಕುವ ವಾತಾವರಣ ಸೃಷ್ಟಿಸಿರುವುದರಿಂದ ಗರ್ಭಪೂರ್ವ ಇಲ್ಲವೇ ಪ್ರಸವಪೂರ್ವ ಲಿಂಗ ಪತ್ತೆಗಾಗಿ ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲವೆಂದು ತಿಳಿಸಿದರು.
ಹೆಣ್ಣು ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆಗೆ ಕಾನೂನು ಮಾತ್ರ ಇದ್ದರೆ ಸಾಲದು ಶಿಕ್ಷಣ, ಮಾಹಿತಿಯ ಅಗತ್ಯತೆಯೂ ಇದೆ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಜನತೆಯಲ್ಲಿ ಅರಿವು ಮೂಡಿಸದಿದ್ದರೆ ಕಾನೂನಿನ ಬಗ್ಗೆ ತಿಳಿಯಲಾಗುವುದಿಲ್ಲ ಎಂದರು.
ಇಂದು ಎಲ್ಲಾ ರಂಗದಲ್ಲೂ ಪುರುಷನಷ್ಟೇ ಸಮಾನವಾಗಿ ಹೆಣ್ಣಿಗೂ ಸರಿ ಸಮಾನವಾದ ಸ್ಥಾನ-ಮಾನ ಕಲ್ಪಿಸಲಾಗಿದೆ. ಕಾಯಿದೆಗಳ ಮೂಲಕ ಹೆಣ್ಣಿಗಿರುವ ಹಕ್ಕುಗಳನ್ನು ತಿಳಿಸಲಾಗಿದೆ. ಶೇ.33 ಮಹಿಳಾ ಮೀಸಲಾತಿ ಜಾರಿಗೆ ತಂದಿರುವುದರಿಂದ ಹೆಣ್ಣಿನ ಬಗ್ಗೆ ಯಾರೂ ಉದಾಸೀನ ಮಾಡದೆ, ಗೌರವ ನೀಡಬೇಕು ಹಾಗೂ ಹೆಣ್ಣಿನ ಸಂಸತಿ ಕಡಿಮೆ ಆಗದಂತೆ ಜಾಗ್ರತೆ ವಹಿಸಬೇಕೆಂದರು.
ಕೊಲೆ ಪ್ರಕರಣ ದಾಖಲಿಗೆ ಚಿಂತನೆ:
ಕಾರ್ಯಾಗಾರ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ರೇಣುಕಾ ಪ್ರಸಾದ್ ಅವರು, ಭ್ರೂಣ ಹತ್ಯೆ ನಿಷೇಧಕ್ಕಾಗಿ  ಕಾನೂನು ಜಾರಿಯಲ್ಲಿದ್ದರೂ ಕೆಲವರು ವಾಮಮಾರ್ಗದಲ್ಲಿ ಲಿಂಗ ಪತ್ತೆ ಮಾಡುವ ದಂಧೆ ಮುಂದುವರೆದಿದ್ದು, ಇದರ ನಿಯಂತ್ರಣಕ್ಕೆ 302ರಡಿ ಕೊಲೆ ಮೊಕದ್ದಮೆ ದಾಖಲಿಸುವ ಅವಕಾಶ ಕಲ್ಪಿಸಲು ಮತ್ತೊಂದು ಕಠಿಣವಾದ ಕಾಯಿದೆ ಜಾರಿಗಾಗಿ ಚಿಂತನೆ ನಡೆದಿದೆ ಎಂದರು.
ಹೆಣ್ಣು ಮತ್ತು ಗಂಡಿನ ನಡುವಿನ ಅನುಪಾತ ವ್ಯತ್ಯಾಸವಾಗಿದ್ದು, ಇದು ಮುಂದುವರೆದಲ್ಲಿ ಮನುಕುಲಕ್ಕೆ ಮಾರಕವಾಗಬಹುದೆಂದ ಅವರು, ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಕೊಲೆ ಪ್ರಕರಣ ದಾಖಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರು ಈಗಾಗಲೇ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಚರ್ಚಿಸಿದ್ದಾರೆ ಎಂದರು. ಅಪರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣಿಕೇರಿ, ಭ್ರೂಣ ಹತ್ಯೆ ಮಹಾಪಾಪ, ಹುಟ್ಟುವ ಮುನ್ನವೇ ಕಂದನನ್ನು ಕೊಲ್ಲುವ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರು ಮುಂದಾಗಬೇಕೆಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ವಿ. ರೇಣುಕಾ ಮಾತನಾಡಿ, 1994ಕ್ಕೆ ಮುನ್ನ ಈ ಕಾಯಿದೆ ಇರಲಿಲ್ಲ, ಆದರೂ ಅಂದು ವೈದ್ಯರಲ್ಲಿ ಮೌಲ್ಯಗಳಿತ್ತು, ವೃತ್ತಿ ಘನತೆ ಕಾಪಾಡಿಕೊಳ್ಳುವ ಮನೋಭಾವವಿತ್ತಾದ್ದರಿಂದ ಭ್ರೂಣ ಹತ್ಯೆಗಳು ನಡೆಯುತ್ತಿರಲಿಲ್ಲ, ನಾಗರಿಕತೆ ಬೆಳೆದಂತೆ ಅನಿಷ್ಠಗಳು ಹೆಚ್ಚಾಗುತ್ತಿರುವುದು ವಿಷಾದಕರ ಎಂದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೀಮೋಲ್ ಮೋಹನ್, ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಿಂದಾಗಿ ಹೆಣ್ಣಿನ ಅನುಪಾತ ವ್ಯತ್ಯಾಸವಾಗಿ ಹೆಣ್ಣು ಮಕ್ಕಳ ಮಾರಾಟ ದಂಧೆ ನಡೆಯಲು ಕಾರಣವಾಗಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರಾಜ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಫಯಾಜ್ ಖಾನ್, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸಪುರ ತಾಲೂಕು ಆರೋಗ್ಯಾಧಿಕಾರಿ ಮಹಮದ್ ಷರೀಫ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ.ಎಂ.ಶ್ರೀನಿವಾಸ್ ಉಪನ್ಯಾಸ ನೀಡಿದರು.
ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಬದನೂರ್ ಇದ್ದರು.
ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ ಸ್ವಾಗತಿಸಿ, ತಾಲೂಕು ಆರೋಗ್ಯಾಧಿಕಾರಿ ಡಾ. ಲತಾಪ್ರಮೀಳಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement