ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಜರ ಕೊಡುಗೆ ಸ್ಮರಿಸುವುದಕ್ಕೂ ನಿರ್ಲಕ್ಷ್ಯ

Srinivasa Murthy VN
Updated On : 12 Dec 2013, 1:17 am

ಕ.ಪ್ರ.ವಾರ್ತೆ ಕೋಲಾರ ಡಿ. 11
ಮೈಸೂರು ರಾಜ ಮನೆತನದ ಕೊನೆಯ ಕೊಂಡಿ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡು ದಿನ ಶೋಕಾಚರಣೆಗೆ ಆದೇಶ ನೀಡಿದ್ದರೂ ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಎಡೆ ಮಾಡಿದೆ.
ಕೋಲಾರ ಜಿಲ್ಲೆಯ ಬಡ ಜನರ ಸಲುವಾಗಿ ಮೈಸೂರು ರಾಜ ಮನೆತನದ ಶ್ರೀ ನರಸಿಂಹರಾಜರು ಉಚಿತವಾಗಿ ಭೂಮಿ ನೀಡಿ ಆಸ್ಪತ್ರೆ ನಿರ್ಮಿಸಲು ಸಹಾಯ ಮಾಡಿದ್ದಾರೆ. ಇವರ ವಂಶಕ್ಕೆ ಸೇರಿದ ಯದುಕುಲ ತಿಲಕ, ಮಾಜಿ ಸಂಸದ, ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಬಹುಮುಖ ಪ್ರತಿಭೆಯಾಗಿದ್ದ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸೌಜನ್ಯಕ್ಕಾದರೂ ಕನಿಷ್ಠ ಒಂದು ನಿಮಿಷ ಮೌನ ಆಚರಿಸಿ ಆಗಲಿದ ಆತ್ಮಕ್ಕೆ ಶಾಂತಿ ಕೋರಬೇಕಾಗಿದ್ದ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆ ಆಡಳಿತ ವರ್ಗ ನಿರ್ಲಕ್ಷ್ಯ ತೋರಿರುವುದು ಸಾರ್ವಜನಿಕರು ಟೀಕೆಗೆ ಗ್ರಾಸವಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಬಡ ರೋಗಿಗಳ ಸಲುವಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ತಾತ ಭೂಮಿಯನ್ನು ನೀಡದಿದ್ದ ಪಕ್ಷದಲ್ಲಿ ದೊಡ್ಡಸ್ಪತ್ರೆ ನಿರ್ಮಾಣವಾಗುತ್ತಿರಲಿಲ್ಲ. ಮೈಸೂರಿನ ರಾಜ ವಂಶಸ್ಥರಾದ ಶ್ರೀಕಂಠದತ್ತರು ಜಿಲ್ಲೆಗೆ ಸಹಾಯ ಮಾಡದಿದ್ದರೂ ಸೌಜನ್ಯಕ್ಕಾದರೂ ರಾಜ ಮನೆತನದವರನ್ನು ಸ್ಮರಿಸಿಬೇಕಾದದ್ದು ಆಸ್ಪತ್ರೆಯ ಮುಖ್ಯಸ್ಥರ ಕರ್ತವ್ಯವೆಂದು ವಕೀಲ ಅಮರೇಂದ್ರ,ನರಸಿಂಹಮೂರ್ತಿ,ಯುವ ಮುಖಂಡ ಓಂಶಕ್ತಿ ಚಲಪತಿ, ಛಾಯಾಗ್ರಾಹಕ ರಾಘವೇಂದ್ರ ಇನ್ನಿತರರು ಪ್ರತಿಪಾದಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶವಿದ್ದರೂ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿಲ್ಲ, ಮೌನಾಚರಣೆ ನಡೆಸಿಲ್ಲವೆಂದು ದೂರಿರುವ ನಾಗರಿಕರು ಆಸ್ಪತ್ರೆಗೆ ಭೂಮಿ ನೀಡಿದ ರಾಜ ಮನೆತನದವರನ್ನು ಮರೆಯುವುದು ಸಮಂಜಸವಲ್ಲವೆಂದು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗೆ ಮಾತ್ರವಲ್ಲದೆ ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಸ್ಯಾನಿಟೋರಿಯಂ)ಇರುವ ಜಾಗಕ್ಕೂ ಸುಮಾರು ವರ್ಷಗಳ ಹಿಂದೆ ಮೈಸೂರು ರಾಜರು ಭೂಮಿ ನೀಡಿದ್ಗಾರೆ. ಪ್ರಸ್ತುತ ಇಲಾಖೆಯ ಆಸ್ತಿ ಅರಣ್ಯ ಇಲಾಖೆಗೆ ಸೇರಿದೆಯಾದರೂ ಮೂಲತ- ಈ ಜಾಗವನ್ನು ಮೈಸೂರು ಅರಸರು ನೀಡಿದಾಗಿದ್ದು. ಜಿಲ್ಲಾ ಆರೋಗ್ಯ ಇಲಾಖೆಯವರು ಸಹ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಗ್ಗೆ ಕನಿಷ್ಠ ಗೌರವ ವ್ಯಕ್ತಪಡಿಸದಿರುವುದು ಬೇಸರವನ್ನುಂಟು ಮಾಡಿದೆ ಎಂದು ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದಾರೆ. ನಗರಸಭೆಯ ಆವರಣಕ್ಕೆ ಅಂಟಿಕೊಂಡಿರುವ ಜಾಗದಲ್ಲಿ ಇದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಕಟ್ಟಡ ಈಗ ಕೆಡವಲಾಗಿದ್ದು, ಮುಂಚೆ ಇದ್ದ ಹಳೆಯ ಕಟ್ಟಡ ನಿರ್ಮಾಣಕ್ಕೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತಂದೆ ಶ್ರೀಜಯಚಾಮರಾಜ ಒಡೆಯರ್ ಸಹಾಯ ಮಾಡಿದ್ದಾರೆಂದು ಹಿರಿಯ ನಾಗರಿಕರೂ ಆಗಿರುವ ಜವಳಿ ಉದ್ಯಮಿ ಬಿ.ಎಂ. ಚೆನ್ನಪ್ಪ ನೆನಪು ಮಾಡಿಕೊಂಡಿದ್ದಾರೆ. ಕೋಲಾರದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಮೈಸೂರು ಮಹಾರಾಜರು ಸಹಾಯ ಮಾಡಿದ್ದಾರೆ, ಹಾಗಾಗಿ ಒಡೆಯರ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡುವುದರಲ್ಲಿ ತಪ್ಪಿಲ್ಲವೆಂದು ಪತ್ರಕರ್ತ  ಎಂ.ಜಿ. ಪ್ರಭಾಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement