ರು. 8 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ವಸತಿ ನಿಲಯ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸರಿ ಸುಮಾರು 20 ಎಕರೆ ಪ್ರದೇಶದಲ್ಲಿ 8 ಕೋಟಿ ರು. ವೆಚ್ಚದ ಮಹರ್ಷಿ ವಾಲ್ಮೀಕಿ ವಸತಿ ನಿಲಯವನ್ನು ನಿರ್ಮಾಣ ಮಾಡಲು ಸರ್ಕಾರ ಸಿದ್ಧವಿದ್ದು ಜಿಲ್ಲಾಡಳಿತ ಅಗತ್ಯವಿರುವ ಸ್ಥಳವನ್ನು ತ್ವರಿತವಾಗಿ ಗುರುತಿಸಿಕೊಟ್ಟರೆ ನಿರ್ಮಾಣ ಕೆಲಸಕ್ಕೆ ಬೇಗ ಚಾಲನೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ತಿಳಿಸಿದರು.
ನಗರದ ಬಿ.ಬಿ.ರಸ್ತೆಯಲ್ಲಿ ಎಲ್.ಜಿ. ಹಾವನೂರು ವೇದಿಕೆಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿ ಎಲ್ಲಾ ಕಾಲಕ್ಕೂ ಎಲ್ಲಾ ವರ್ಗದವರಿಗೂ ಅಗತ್ಯವಿರುವ ಮಹಾನ್ ವ್ಯಕ್ತಿ. ಇವರ ರಚಿಸಿದ ರಾಮಾಯಣವು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ತಿಳಿಸುವ ಮಹಾಕಾವ್ಯವಾಗಿದೆ. ಇಂತಹ ದೊಡ್ಡ ಕೊಡುಗೆಯನ್ನು ನೀಡಿದಂತಹ ವಾಲ್ಮೀಕಿ ಮಹರ್ಷಿಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲಾ ವರ್ಗದ ಜನರು ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಜನಾಂಗದವರು ಸಂಘಟಿತರಾಗಬೇಕು. ಸರ್ಕಾರ ನೀಡುತ್ತಿರುವ ಅನೇಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ವಾಲ್ಮೀಕಿ ಜನಾಂಗಕ್ಕೆ ಹೆಚ್ಚಿಗೆ ಸವಲತ್ತುಗಳನ್ನು ನೀಡಲಾಗುತ್ತದೆ. ಇತರೆ ಸಮುದಾಯಗಳಿಗೆ ಸವಲತ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಒದಗಿಸುತ್ತಿದ್ದರೂ ಅಭಿವೃದ್ಧಿಯಲ್ಲಿ ಮುಂದೆ ಇದ್ದು ಜನಾಂಗದವರು ಹೆಚ್ಚಿನ ಸವಲತ್ತುಗಳ ನಡುವೆಯೂ ಹಿಂದುಳಿದಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾವು ತಮ್ಮ ಸ್ವಂತ ಶಕ್ತಿಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಅವರವರ ಭವಿಷ್ಯ ಅವರವರ ಕೈಯಲ್ಲಿಯೇ ಇರುತ್ತದೆ ಎಂದ ಅವರು, ರಾಜ್ಯವನ್ನು ಕಳ್ಳಬಟ್ಟಿ ಮುಕ್ತ ರಾಜ್ಯ ಮಾಡಲು ಪಣ ತೊಟ್ಟಿದ್ದು ಸರ್ಕಾರದ ವತಿಯಿಂದ ಕಳ್ಳಬಟ್ಟಿ ಮಾರಾಟ ಮಾಡುತ್ತಿದ್ದ 3 ಸಾವಿರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿರವರು ಒಬ್ಬ ಕವಿಯಲ್ಲ, ಅವರು ದಾರ್ಶನಿಕ, ಮಾನವತಾವದಿ, ಮಹಾನನ್ವಿಚಾರವಂತರು. ವಾಲ್ಮೀಕಿರವರು ರಾಮಾಯಣದಲ್ಲಿ ಸಮಾಜ, ರಾಜ ಪ್ರಜೆಗಳ ಸಂಬಂಧ, ಅಣ್ಣ ತಮ್ಮಂದಿರ ಸಂಬಂಧದ ಹೇಗಿರಬೇಕೆನ್ನುವುದನ್ನು ತಿಳಿಸಿದ್ದಾರೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಒಳ್ಳೆಯ ಜೀವನ ಸಾಗಿಸಬೇಕೆಂದರು.
ಶಾಸಕ ಡಾ. ಕೆ. ಸುಧಾಕರ್ ಮಾತನಾಡಿ,ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಜಿಲ್ಲೆಗೂ ಒಂದು ವಾಲ್ಮೀಕಿ ಭವನ ಹಾಗೂ ವಸತಿ ನಿಲಯ ಕಟ್ಟಿಸಿಕೊಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದಾರೆ. ಇದರಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದ ಅವರು, ಯುವಕರು, ಮಹಿಳೆಯರ ಸಬಲೀಕರಣ ಆಗಬೇಕು. ಆಗ ಮಾತ್ರ ರಾಜ್ಯದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು.
ಹರಿಹರದ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆ ಉಪ ಸಭಾಪತಿ ಶಿವಶಂಕರ ರೆಡ್ಡಿ, ಶಾಸಕ ಎಂ.ರಾಜಣ್ಣ, ಜಿ.ಪಂ. ಅಧ್ಯಕ್ಷ ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ ಹನುಮಾನ್, ಜಿಲ್ಲಾ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಬಂಕ್ ಮುನಿಯಪ್ಪ, ಮುಖಂಡರಾದ ಎನ್. ಸುಬ್ಬರಾಯಪ್ಪ, ಕೆ.ವಿ. ಗವಿರಾಯಪ್ಪ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೃಹತ್ ಮೆರವಣಿಗೆ
ಚಿಕ್ಕಬಳ್ಳಾಪುರ: ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಅವರ ನಿಧನದ ನಡುವೆಯೂ ವಾಲ್ಮೀಕಿ ಜಯಂತಿ ಬುಧವಾರ ಅದ್ಧೂರಿಯಾಗಿ ನೆರವೇರಿತು.
ನಗರದ ಪ್ರಮುಖ ರಸ್ತೆಗಳಲ್ಲಿ ವಾಲ್ಮೀಕಿ ಮಹರ್ಷಿ ಭಾವಚಿತ್ರಗಳ ಬೃಹತ್ ಮೆರವಣಿಗೆಯಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಡೊಳ್ಳು ಕುಣಿತ, ತಮಟೆ ತಂಡ, ವೀರಗಾಸೆ, ವೀರಭದ್ರನ ಕುಣಿತ ಸೇರಿದಂತೆ ಅನೇಕ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಮಹಿಳೆಯರು ಕಳಶಗಳನ್ನು ಹೊತ್ತು ಸಾಗಿದರೆ, ವಾಲ್ಮೀಕಿ, ರಾಮ ಲಕ್ಷ್ಮಣ, ಲವಕುಶ ಸೇರಿದಂತೆ ವೇಷಾವಳಿಗಳಲ್ಲಿ ಕಲಾವಿದರು ಎಲ್ಲರ ಗಮನ ಸೆಳೆದರು.
ಜಿಲ್ಲಾ ವ್ಯಾಪ್ತಿಯ ವಿವಿಧ ಹೋಬಳಿಗಳಿಂದ ಆಗಮಿಸಿದ್ದ ಗ್ರಾಮಸ್ಥರು ಮುತ್ತಿನ ಪಲ್ಲಕ್ಕಿಯಲ್ಲಿ ವಾಲ್ಮೀಕಿ ಮಹರ್ಷಿಯ ಮೆರವಣಿಗೆ ನಡೆಸಿದರು. ನಗರದ ಬಿ.ಬಿ.ರಸ್ತೆಯಲ್ಲಿ ಸಾಗಿ ಅದ್ಧೂರಿಯಾಗಿ ನಿರ್ಮಿಸಿದ್ದ ಎಲ್.ಜಿ. ಹಾವನೂರು ವೇದಿಕೆಯವರೆಗೂ ಮೆರವಣಿಗೆ ನಡೆಯಿತು.