ಲೋಕ ಕಲ್ಯಾಣಾರ್ಥ ಮಹಾಲಕ್ಷ್ಮಿ ಕೋಟಿ ಕುಂಕುಮಾರ್ಚನೆ 15 ಕ್ಕೆ
ಚಿಕ್ಕಬಳ್ಳಾಪುರ: ಗಾಯತ್ರಿ ಸೇವಾ ಸಮಿತಿ ಹಾಗೂ ಗಾಯತ್ರಿ ಮಹಿಳಾ ಮಂಡಳಿ ಆಶ್ರಯದಲ್ಲಿ ಡಿ.15 ರಂದು ಪ್ರಥಮಬಾರಿಗೆ ಶ್ರೀ ಮಹಾಲಕ್ಷ್ಮಿ ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗಾಯತ್ರಿ ಸೇವಾ ಸಮಿತಿ ಎಸ್.ಎನ್. ರಮೇಶ್ ತಿಳಿಸಿದರು.
ನಗರದ ಶ್ರೀರಾಮ ವರದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಡಿ.15 ರಂದು ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಜಾತಿ, ಮತ ಭೇದವಿಲ್ಲದೆ ಎಲ್ಲಾ ವರ್ಗದ 1200 ಮಂದಿ ಸುಮಂಗಲಿಯರು ಕೋಟಿಕುಂಕುಮಾರ್ಚನೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈಗಾಗಲೇ 100 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಂಗಲಿಯರು ತಮ್ಮ ಕೈಯಾರೆ ಶ್ರೀ ಮಾತೆ ಗೊರವನಹಳ್ಳಿ ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ನೆರವೇರಿಸಲಿದ್ದಾರೆ ಎಂದರು.
ಇದೇ ಪ್ರಥಮ ಬಾರಿಗೆ ಗೊರವನಹಳ್ಳಿಯ ಚರಪ್ರತಿಷ್ಠಾ ಮೂರ್ತಿ(ಉತ್ಸವ ಮೂರ್ತಿ)ಯನ್ನು ಚಿಕ್ಕಬಳ್ಳಾಪುರಕ್ಕೆ ತರುತ್ತಿದ್ದು ಶ್ರೀಮಾತೆಗೆ ಅರ್ಪಿಸಬೇಕಿರುವ ಪೂಜಾ ಕಾರ್ಯಗಳ ವಿಧಿ ವಿಧಾನಗಳಿಗೆ ಬೇಕಾದ ಅರಿಶಿಣ, ಕುಂಕುಮ, ಕಡ್ಡಿ, ಕರ್ಪೂರ ಸುಮಂಗಲಿಯರು ತರುವುದರ ಜೊತೆ ಸಾಧ್ಯವಾದರೆ ಕೂರುವುದಕ್ಕೆ ಪೀಠ ತಂದರೆ ಒಳಿತು ಅದರಂತೆ ಕುಂಕುಮಾರ್ಚನೆಗೆ ಬೇಕಾದ ಇನ್ನಿತರ ಪೂಜಾ ಸಾಮಗ್ರಿಗಳನ್ನು ಪ್ರಸಾದವನ್ನು ಸಮಿತಿ ವತಿಯಿಂದ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ. ಬಿ.ಎನ್.ವಿ. ಸುಬ್ರಮಣಿ, ರಾಯಲ್ಪಾಡುವಿನ ಖ್ಯಾತ ಜೋತಿಷ್ಯಗಳಾದ ಶ್ರೀ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ, ಡಾ. ಆನಂದಗುರೂಜಿ, ಮಲ್ಲೇಶ್ವರಂ ಮಹಾ ಗಣಪತಿ ಪ್ರಧಾನ ಅರ್ಚಕ ಕಾಶಿ ವಿಶ್ವನಾಥಶಾಸ್ತ್ರಿಗಳು, ಗೊರವನಹಳ್ಳಿ ಮಹಾ ಲಕ್ಷ್ಮಿ ಪ್ರಧಾನ ಅರ್ಚಕ ಹೆಚ್.ಸಿ. ಪ್ರಸನ್ನಕುಮಾರ್, ಶಾಸಕ ಡಾ.ಕೆ. ಸುಧಾಕರ್, ಶೇಷಭಟ್ಟ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಂದು ಸಂಜೆ 4 ಗಂಟೆಗೆ ಖ್ಯಾತ ಹಿನ್ನಲೆ ಗಾಯಕಿ ನಾಗಲಕ್ಷ್ಮಿ ನಾಗರಾಜ್, ಮತ್ತು ಕು.ಇಂದು ನಾಗರಾಜ್ ರವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಟ್ರಸ್ಟ್ ನ ಬಿ.ಎನ್. ನರಸಿಂಹಮೂರ್ತಿಯವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದರು.