ಉದ್ಘಾಟನೆ ಕಾಣದ ಟೊಮೆಟೋ ಮಾರುಕಟ್ಟೆ
ಬಂಗಾರಪೇಟೆ: ಟೊಮೆಟೋ ಬೆಳೆಗಾರರಿಗೆ ಅನುಕೂಲವಾಗಲೆಂದು ಕೋಟ್ಯಂತರ ರು. ವೆಚ್ಚದಲ್ಲಿ ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಿರುವ ಟೊಮೆಟೋ ಮಾರುಕಟ್ಟೆ ನಿರ್ಮಿಸಿ, ಮೂರು ವರ್ಷಗಳಾದರೂ ಇನ್ನೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ.
ಜಿಲ್ಲೆಯ ಹಾಗೂ ನೆರೆ ರಾಜ್ಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಟೊಮೆಟೋ ಬೆಳೆಗಾರರಿಗೆ ಅನುಕೂಲವಾಗಲೆಂದು ಪಟ್ಟಣದ ಎಪಿಎಂಸಿಯಲ್ಲಿ ನಿರ್ಮಿಸಿರುವ ನೂತನ ಮಾರುಕಟ್ಟೆ ವ್ಯಾಪಾರಸ್ಥರಿಗೆ ನೆರವಾಗದೆ ಪಾಳು ಬಿದ್ದಿದೆ. ವ್ಯಾಪಾರಿಗಳು ಹಾಗೂ ದಲ್ಲಾಳಿಗಳಿಗೆ ಅನಾನುಕೂಲವಾಗುತ್ತದೆ ಎಂದು ಸರ್ಕಾರ ಟೊಮೆಟೋ ಮಾರುಕಟ್ಟೆ ನಿರ್ಮಾಣಕ್ಕೆ 2010ರಲ್ಲಿ ಅನುಮತಿ ನೀಡಿತ್ತು.
ಕೇಂದ್ರ ಸರ್ಕಾರದ ಡೆವಲಪ್‌ಮೆಂಟ್ ಆಫ್ ಮಾರ್ಕೆಟಿಂಗ್ ಇನ್ಪ್ರಾಸ್ಟ್ರಕ್ಚರ್ ಯೋಜನೆಯಡಿ 11ಎಕರೆ ಪ್ರದೇಶದಲ್ಲಿ ನೂತನ ಮಾರುಕಟ್ಟೆ ನಿರ್ಮಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಅರ್ಧ ಭಾಗದಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು, ಉಳಿದ ಹಣವನ್ನು ಎಪಿಎಂಸಿ ಬ್ಯಾಂಕಿನಿಂದ ಸಾಲ ಪಡೆದು ಕಾಮಗಾರಿಗೆ ಖರ್ಚು ಮಾಡಲಾಗಿದೆ.
ರಕ್ಷಣಾತ್ಮಕ ಹರಾಜು ಕಟ್ಟೆ: ಜಿಲ್ಲೆಯಲ್ಲೇ ಅತ್ಯಂತ ವಿಶಾಲವಾದ ಮಾರುಕಟ್ಟೆ ಇದಾಗಿದ್ದು, ತರಕಾರಿ ಸಾಗಣೆ ವಾಹನಗಳ ಓಡಾಟಕ್ಕೆ ಅನುಕೂಲವಾಗಲು ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಸ್ವಚ್ಚತೆಗಾಗಿ ಮತ್ತು ಮಳೆ ನೀರು ಸರಾಗವಾಗಿ ಹರಿಯಲು ಗುಣಮಟ್ಟದ ಬಾಕ್ಸ್ ಚರಂಡಿ ಹಾಗೂ ತರಕಾರಿ ಹರಾಜಿಗಾಗಿ ರಕ್ಷಣಾತ್ಮಕ ಹರಾಜು ಕಟ್ಟೆ, ಕಚೇರಿ, ಕ್ಯಾಂಟೀನ್ ಶೌಚಾಲಯ ಹಾಗೂ ಎರಡು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಕೂಡಲೆ ಸಹಾಯಧನವನ್ನು ಬಿಡುಗಡೆ ಮಾಡಿಸಲು ಸಚಿವರು ಮುಂದಾಗಬೇಕಿದೆ. ಈ ಬಗ್ಗೆ ಶಾಕರ ಎಸ್.ಎನ್.ನಾರಾಯಣಸ್ವಾಮಿ ಸಹ ಕ್ರಿಯಾಶೀಲರಾದಲ್ಲಿ ನೂತನ ಮಾರುಕಟ್ಟೆ ರೈತರಿಗೆ ನೆರವಾಗಲಿದೆ.
ಅಧ್ಯಕ್ಷರು ಏನಂತಾರೆ?
ಎಪಿಎಂಸಿ ಅಧ್ಯಕ್ಷ ಬಿ.ವಿ.ಮಹೇಶ್ ನೂತನ ಮಾರುಕಟ್ಟೆ ಪ್ರಾರಂಭಕ್ಕೆ ವಿಳಂಬವಾಗಲು ಕೇಂದ್ರದ ಸಹಾಯಧನ ಬಿಡುಗಡೆಯಾಗದಿರುವುದೇ ಕಾರಣ. ಮಾರುಕಟ್ಟೆಯಲ್ಲಿ ತರಕಾರಿ ದಾಸ್ತಾನಿಗಾಗಿ ಅಗತ್ಯವಿರುವ ಗೋದಾಮು ನಿರ್ಮಾಣಕ್ಕೆ ಇನ್ನು 10 ದಿನದಲ್ಲಿ ಬಿಡ್‌ದಾರರು ಕಾಮಗಾರಿ ಪ್ರಾರಂಭಿಸಲಿದ್ದಾರೆ.