ಎಸ್ಮಾ ಜಾರಿ ವಿರೋಧಿಸಿ ಸಿಐಟಿಯು ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಡಿ. 12
ಕಾರ್ಮಿಕರ ಹಕ್ಕು ಕಸಿಯುವುದಕ್ಕಾಗಿ ರಾಜ್ಯ ಸರ್ಕಾರ ಎಸ್ಮಾ ಜಾರಿಗೆ ತಂದಿದೆ ಎಂದು ಆರೋಪಿಸಿ ನಗರದಲ್ಲಿ ಗುರುವಾರ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್)ನಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ ದುಡಿಯುವ ಜನರ ಹಿತ ಕಾಪಾಡುವ ಬದಲು ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕುವ ಯತ್ನ ನಡೆಸುತ್ತಿದೆ ಎಂದು ಸಿಐಟಿಯು ಕಾರ್ಯಕರ್ತರು ಆರೋಪಿಸಿದರು.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸರ್ಕಾರ ಬಿಡಿಗಾಸನ್ನು ನೀಡದೆ ಕಾರ್ಮಿಕರ ಹಿತ ಕಡೆಸುತ್ತಿದೆ, ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಗೆ, ವಿಮಾ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಿ ಚಾತಕ ಪಕ್ಷಿಗಳಂತೆ ಸಾವಿರಾರು ಾಕರ್ಮಿಕರು ಕಾಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ದೂರಿದರು.
ಗುತ್ತಿಗೆ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಸ್ಮಾ ಜಾರಿ ಹಿಂದಕ್ಕೆ ಪಡೆಯಬೇಕು, ಬೆಲೆ ಏರಿಕೆ ನಿಯಂತ್ರಿಸಿ ಎಲ್ಲಾ ಕುಟುಂಬಗಳಿಗೆ ರೇಷನ್ ವ್ಯವಸ್ಥೆ ಕಲ್ಪಿಸಬೇಕು, ಸಾರ್ವಜನಿಕರ ಉದ್ದಿಮೆಗಳ ಶೇರು ವಿಕ್ರಯ ಖಾಸಗೀಕರಣ ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕರಿಗೆ ವಸತಿ ಸೌಲಭ್ಯ, ಬಿಕ್ಕಟ್ಟಿನಲ್ಲಿರುವ ಕಾರ್ಮಿಕರಿಗಾಗಿ ವಿಶೇಷ ಪ್ಯಾಕೇಜ್, ಅಂಗನವಾಡಿ,ಗ್ರಾಮ ಪಂಚಾಯಿತಿ,ಬಿಸಿಯೂಟ, ಆಶಾ ನೌಕರರನ್ನು ಕಾಯಂಗೊಳಿಸಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಐಟಿಯು ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ನಾಗರತ್ನ, ಖಜಾಂಚಿ ಹೆಚ್.ಬಿ. ಕೃಷ್ಣಪ್ಪ, ಉಪಾಧ್ಯಕ್ಷರಾದ ಜಿ.ಅರ್ಜುನ್, ಪಿ. ಶ್ರೀನಿವಾಸ್, ಆನಂದರಾಜ್, ಜಿ. ಈಶ್ವರಮ್ಮ, ಹೆಚ್.ಎಂ. ಯಲ್ಲಪ್ಪ, ಸಹಾ ಕಾರ್ಯದರ್ಶಿ ಎ.ಆರ್. ಬಾಬು, ಮುನಿರಾಜಮ್ಮ, ಬಿ.ವಿ. ಸಂಪಂಗಿ ಇದ್ದರು.