ಕಾಲುಬಾಯಿ ಜ್ವರ; ಜಾನುವಾರು ಸಂತೆ ರದ್ದು
ಚಿಂತಾಮಣಿ: ಕಾಲುಬಾಯಿ ಜ್ವರ ಹರಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರುಗಳ ಸಂತೆಯನ್ನು ಜಿಲ್ಲಾಧಿಕಾರಿಗಳ ಮುಂದಿನ ಆದೇಶದ ವರೆಗೂ ರದ್ದು ಪಡಿಸಿಲಾಗಿದೆ ಎಂದು ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲ್ಲಾಳಿಗಳ ಪ್ರಭಾವಕ್ಕೆ ಒಳಗಾಗದೆ ರೈತರು ದನಕರುಗಳನ್ನು ಸಂತೆಗೆ ಕರೆತರದಂತೆ ಮನವಿ ಮಾಡಿದರು. ಕ್ರಮಕ್ಕೆ ಸೂಚನೆ: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಹಲವು ದಲ್ಲಾಳಿಗಳು ದೌರ್ಜನ್ಯದಿಂದ ದನಗಳ ಸಂತೆಯಲ್ಲಿ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ನಗರಸಭೆಯ ದಿನವಹಿ ಮಾರುಕಟ್ಟೆ ವಸೂಲುಗಾರ ಮಂಜುನಾಥ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಪಿಎಂಸಿ ಕಾರ್ಯದರ್ಶಿ ನಾಗರಾಜ್‌ಗೆ ದಂಡಾಧಿಕಾರಿಗಳು ಸಭೆಯಲ್ಲಿ ಸೂಚಿಸಿದರು.
ಚೆಕ್ ಪೋಸ್ಟ್: ತಾಲೂಕಿನ ವ್ಯಾಪ್ತಿಯ ಕೆಂಚಾರ್ಲಹಳ್ಳಿ, ಚೇಳೂರು, ಬಿಲ್ಲಾಂಡ್ಲಹಳ್ಳಿ, ಮೈಲಾಂಡ್ಲಹಳ್ಳಿ, ಸಿದ್ದೇಪಲ್ಲಿ ಕ್ರಾಸ್‌ಗಳಲ್ಲಿ ಭಾನುವಾರ ನಡೆಯುವ ಜಾನುವಾರು ಸಂತೆಯನ್ನು ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್‌ನಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಅಗತ್ಯ ಕ್ರಮವನ್ನು ಕೈಗೊಳ್ಳಲು ಪೊಲೀಸರಿಗೆ ಆದೇಶಿಸಿದ್ದಾರೆ. ಪಶು ವೈದ್ಯ ಡಾ. ಮಧುಸೂದನರೆಡ್ಡಿ, ಎಪಿಎಂಸಿ ಅಧ್ಯಕ್ಷ ಬೋರ್ ವೆಲ್ ನಾರಾಯಣಸ್ವಾಮಿ, ವೃತ್ತ ನಿರೀಕ್ಷಕ ನಂಜಪ್ಪ, ವೆಂಕಟೇಶಮೂರ್ತಿ ಇದ್ದರು.
ಸ್ವಯಂ ಸೇವಕ ತರಬೇತಿ ಕಾರ್ಯಗಾರ
ವಿಜಯಪುರ: ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆ ಮಾಡುವ ಉದ್ದೇಶದಿಂದ ನವಸಕ್ಷಾರತಾ ಆಂದೋಲನ ಕಾರ್ಯಾರಂಭ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಾಭ್ಯಾಸ ನೀಡುವುದರೊಂದಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಪಿಡಿಓ ಸುಧಾಕರ್ ತಿಳಿಸಿದರು. ಪಟ್ಟಣ ಸಮೀಪದ ಬಿಜ್ಜವಾರ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರದಲ್ಲಿ 2ನೇ ಹಂತದ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಾಲೂಕು ಸಂಯೋಜಕರಾದ ಸುಂದರ್ ಮಾತನಾಡಿ ಸ್ವಾತಂತ್ರ್ಯ ಪಡೆದಾಗ ಶೇ.14ರಷ್ಟು ಸಾಕ್ಷರತೆ ಇತ್ತು ಆದರೆ ಈಗ ಶೇ. 80ರಷ್ಟು ಸಾಕ್ಷರತೆ ಸಾಧಿಸುವುದು ನಮ್ಮ ಗುರಿಯಾಗಿದೆ ಮತ್ತು ಗಾಂಧೀಜಿಯವರ ಕನಸನ್ನು ನನಸು ಮಾಡಲು ನಾವೆಲ್ಲರೂ ಶ್ರಮಿಸಬೇಕು ಎಂದರು. ಕೇಂದ್ರ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಅವರು ಮಾತನಾಡಿದರು. ಸ್ವಯಂ ಪ್ರೇರಕರಾದ ಮುನಿರಾಜು, ಶಿವಕುಮಾರ್, ಗ್ರಾಮದ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.