ಮಂಚೇನಹಳ್ಳಿ ರೈತರು ಸಹಕರಿಸಲು ಮನವಿ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಹೊಸಕೆರೆಯಿಂದ ಪಟ್ಟಣ ಮತ್ತು ಕೆಲವು ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ರೂಪಿಸಿರುವ ಯೋಜನೆಗೆ ಮಂಚೇನಹಳ್ಳಿ ಹೋಬಳಿಯ ರೈತರು ವಿರೋಧಿಸುವುದನ್ನು ಬಿಟ್ಟು ಮಾನವೀಯತೆಗೆ ಆದ್ಯತೆ ನೀಡಿ, ಯೋಜನೆಗೆ ಸಹಕರಿಸಬೇಕು ಎಂದು ಗೌರಿಬಿದನೂರು ಪುರಸಭೆ ಎಲ್ಲಾ ಸದಸ್ಯರ ಪರ ಎಂ. ನರಸಿಂಹಮೂರ್ತಿ ಮನವಿ ಮಾಡಿ ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಜನೆಗೆ ಯಾವುದೇ ಪಕ್ಷ, ಗುಂಪು ರಾಜಕೀಯ ಮಾಡುವುದು ಬೇಡ. ಯೋಜನೆಯಿಂದ ಹೊಸಕೆರೆ ಅಚ್ಚುಕಟ್ಟಿನ ರೈತರಿಗೆ ಯಾವುದೇ ತೊಂದರೆಯಿಲ್ಲ ಎಂದರು. ಯೋಜನೆಯ ಹಿಂದೆ ಯಾವುದೇ ರೀತಿಯ ದುರುದ್ದೇಶವಿಲ್ಲ. ಪಟ್ಟಣದ ನಾಗರಿಕರು ನೀರಿನ ಭವಣೆಯಿಂದ ಪ್ರತಿಭಟನೆ ಮಾಡುತ್ತಿದ್ದು, ಪುರಸಭೆ ಸಭೆಯಲ್ಲಿ ಶಾಸಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು. ಯೋಜನೆ ಅನುಷ್ಠಾನದಿಂದ ಮಂಚೇನಹಳ್ಳಿ ಮತ್ತು ದಂಡಿಗಾನಹಳ್ಳಿ ಕೆರೆಯ ಸುತ್ತಮುತ್ತಲ ರೈತರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ. ಪ್ರತಿವರ್ಷ ಫೆಬ್ರವರಿಯಿಂದ ಜೂನ್ ವರೆಗೆ ಕೇವಲ 4 ತಿಂಗಳು ಮಾತ್ರ ನೀರನ್ನು ಬಳಕೆ ಮಾಡುಕಳ್ಳುವುದರಿಂದ ಪ್ರತಿರೋಧ ಮಾಡಬಾರದು ಎಂದರು.
ವಿ. ರಮೇಶ್ ಮಾತನಾಡಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಜನತೆಗೆ ಕುಡಿಯುವ ನೀರಿಗಾಗಿ ಜಕ್ಕಲಮಡುಗು ಜಲಾಶಯಕ್ಕೆ ಎತ್ತರದ ಗೋಡೆ ನಿರ್ಮಿಸಿ ಕುಡಿಯುವ ನೀರಿನ ಯೋಜನೆ ಮಾಡಿದಾಗ ನಾವು ವಿರೋಧಿಸಲಿಲ್ಲ. ಜಕ್ಕಲಮಡುಗು ಅಣೆಕಟ್ಟು ಎತ್ತರಿಸಿದ್ದರಿಂದ ಉತ್ತರ ಪಿನಾಕಿನ ನದಿಯ ಅಂತರ್ಜಲ ಮತ್ತು ಒಳಹರಿವು ನೀರಿನ ಕೊರತೆಯಾಗಿದೆ ಇಂತಹ ಸಂದರ್ಭದಲ್ಲಿ ರಾಜಕೀಯ ಬೆರೆಸದೆ ಮಾನವೀಯತೆ ಮೆರೆಯಬೇಕಿದೆ ಎಂದರು. ಜಿ. ಬಾಲಾಜಿ ಮಾತನಾಡಿ, ದಂಡಿಗಾನಹಳ್ಳಿ ಕೆರೆ ವ್ಯಾಪ್ತಿಯ ರೈತರಿಗೆ ಈ ಯೋಜನೆಯ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಅವರು ಪ್ರತಿಭಟಿಸಿರಬಹುದು, ಯೋಜನೆಯ ಪೂರ್ಣ ವಿವರ ತಿಳಿದ ಮೇಲೆ ಅವರು ಯಾವುದೇ ವಿರೋಧ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು. ಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಸುಭಾನ್, ಶಫೀಕ್ ಖಾನ್, ಮುನಿರಾಜು, ರತ್ನಯ್ಯ, ಶಾರದಾ ಅರುಣ್, ಮಾರ್ಕೆಟ್ ಮೋಹನ್, ಕಲೀಂ, ಶ್ಯಾಂಶಂಕರ್, ಅಂಜಿ, ರಾಧಾ ಕೃಷ್ಣಮೂರ್ತಿ ಇದ್ದರು.
ಕಳೆದ 10ವರ್ಷದಿಂದ ನನ್ನ ಕೊಳವೆ ಭಾವಿಯ ನೀರನ್ನು ಪುರಸಭೆಯ ನೀರಿನ ಭವಣೆ ನೀಗಿಸಲು ಪ್ರತಿ ತಿಂಗಳು ಕೇವಲ ಎಂಟುನೂರು ರು.ಗೆ ನೀಡುತ್ತಿದ್ದೇನೆ ಇದನ್ನು ಮಂಚೇನಹಳ್ಳಿ ಭಾಗದ ರೈತರು ಅರಿಯಬೇಕು.
-ರೈತ ರವಿಚಂದ್ರ ಮಾದನಹಳ್ಳಿ