ಮೆಕ್ಕೆಜೋಳಕ್ಕೆ ಬೆಂಬೆಲೆಗೆ ಆಗ್ರಹಿಸಿ ಧರಣಿ
ಗೌರಿಬಿದನೂರು: ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ತಾಲೂಕು ಕಚೇರಿ ಮುಂದೆ ಅನಿರ್ಧಿಷ್ಟಕಾಲ ಧರಣಿ ಪ್ರಾರಂಭಿಸಿತು. ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಎಂ.ಆರ್. ಲಕ್ಷ್ಮೀನಾರಾಯಣ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಬೆಳೆಯುವ ವಾಣಿಜ್ಯ ಬೆಳೆ ಮೆಕ್ಕೆಜೋಳ. ತಕ್ಷಣ ಸರ್ಕಾರ ಮೆಕ್ಕೆಜೋಳಕ್ಕೆ 1,800ರು.ಗಳನ್ನು ನಿಗಧಿಪಡಿಸಬೇಕು, ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದಿದ್ದಲ್ಲಿ ಅನಿರ್ಧಿಷ್ಟಕಾಲದ ಧರಣಿ ಮುಂದುವರೆಸಲಾಗುವುದು ಎಂದರು. ಜಲತಜ್ಞ ಕೆ. ನಾರಾಯಣಸ್ವಾಮಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ರೈತರದ್ದೇ ಸರ್ಕಾರ ಆಡಳಿತಕ್ಕೆ ಬಂದಾಗ ಮಾತ್ರ ರೈತರ ಉದ್ಧಾರ ಸಾಧ್ಯ ಎಂದರು. ತಾಲೂಕು ಅಧ್ಯಕ್ಷ ಲೋಕೇಶ್ ಗೌಡ, ಮುದ್ದುರಂಗಪ್ಪ, ಸನತ್ ಕುಮಾರ್, ಶೇಂದಿ ಅಶ್ವತ್ಥಪ್ಪ ಇದ್ದರು. ವಕೀಲ ಪಾರ್ಶ್ವನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ
ಚಿಂತಾಮಣಿ: ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಮೇಲೆ ಹಲ್ಲೆ ಮಾಡಿದ ಪರಿಣಾಮ ಯುವಕ ತೀವ್ರ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ವೆಂಕಟಶಿವಾರೆಡ್ಡಿ ಇದೇ ಗ್ರಾಮದ ಮೂರ್ತಿ ಎಂಬವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಪರಿಣಾಮ ಮೂರ್ತಿ ಗಾಯಗೊಂಡಿದ್ದಾನೆ. ಈ ಸುದ್ದಿ ತಿಳಿದ ಗ್ರಾಮದ 2 ಗುಂಪುಗಳು ಜಮಾವಣೆಗೊಂಡು ಕೈ ಕೈ ಮಿಲಾಯಿಸಲು ಯತ್ನಿಸಿದಾಗ ಗ್ರಾಮದ ಹಿರಿಯರು ರಾಜಿ ಸಂದಾನದ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ. ಗ್ರಾಮದಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.