ಶಾಲಾ ಬಸ್ ಸ್ಥಗಿತ: ಬೆಮೆಲ್ ನಿರ್ಧಾರಕ್ಕೆ ವಿದ್ಯಾರ್ಥಿಗಳು, ಪೋಷಕರ ಆತಂಕ
-ಆರ್.ರಜನೀಕಾಂತ್
ಕೆಜಿಎಫ್: ಬೆಮೆಲ್ ಕಾರ್ಖಾನೆಯ ಆಡಳಿತ ಮಂಡಳಿ ಕೈಗೊಂಡಿರುವ ನಿರ್ಧಾರದಿಂದ ಗ್ರಾಮೀಣ ವಿದ್ಯಾರ್ಥಿಗಳು ಸೇರಿದಂತೆ ಕೆಜಿಎಫ್ ನಗರ ಪ್ರದೇಶದ ವಿದ್ಯಾರ್ಥಿಗಳು ಮತ್ತು ಪೋಷಕರು ಪರದಾಡುವಂತಾಗಿದೆ.
ಸುಮಾರು 20 ವರ್ಷಗಳಿಂದ ಬೆಮೆಲ್ ಪ್ರಾಥಮಿಕ ಶಾಲೆ, ಕಾಂಪೋಸಿಟ್ ಕಾಲೇಜು ಹಾಗೂ ಕೇಂದ್ರಿಯ ವಿದ್ಯಾಲಯದಲ್ಲಿ ಬೆಮೆಲ್ ಕಾರ್ಮಿಕರ ಮಕ್ಕಳು ಸೇರಿದಂತೆ ಕ್ಷೇತ್ರದ ಇತರೆ ಪ್ರದೇಶಗಳಿಂದ ಸಾರ್ವಜನಿಕರ ಮಕ್ಕಳು ಸಹ ಈ ಬೆಮೆಲ್ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕೆಜಿಎಫ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬರುವ ಮಕ್ಕಳಿಗೆ ಬೆಮೆಲ್ ಆಡಳಿತ ಮಂಡಳಿ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯದ ವ್ಯವಸ್ಥೆಯನ್ನು ಕಳೆದ 2 ತಿಂಗಳ ವರೆಗೆ ಒದಗಿಸುತ್ತಾ ಬಂದಿದೆ. ವಿದ್ಯಾರ್ಥಿಗಳನ್ನು ಕರೆತರುವ ಬಸ್ಗಳ ಮಾಸಿಕ, ವಾರ್ಷಿಕ ಶುಲ್ಕವನ್ನು ಶಾಲಾ ಕಾಲೇಜು ಪ್ರಾರಂಭದಲ್ಲೇ ಪಡೆದುಕೊಳ್ಳುತ್ತಿತ್ತು. ಕಾರ್ಮಿಕರ ಮಕ್ಕಳಿಗೆ ಅವರ ಸಂಬಳದಲ್ಲಿ ಹಿಡಿಯಲಾಗುತ್ತಿದೆ.
ಆದರೀಗ ಬೆಮೆಲ್ ಆಡಳಿತ ಮಂಡಳಿ ಕಾರ್ಖಾನೆ ನಷ್ಟದತ್ತ ಸಾಗುತ್ತಿದ್ದು, ಕಾರ್ಮಿಕರ ಮಕ್ಕಳು ಹೊರತುಪಡಿಸಿ ಇತರೆ ಸಾರ್ವಜನಿಕ ಮಕ್ಕಳು ಬಸ್ಗೆ ವಾರ್ಷಿಕ ಶುಲ್ಕ ನೀಡುತ್ತಿರುವುದು ಸಾಲುತ್ತಿಲ್ಲ ಮತ್ತು ತಮ್ಮಿಂದ ಪಡೆಯುತ್ತಿರುವ ಬಸ್ ಶುಲ್ಕ ಆಡಳಿತ ಮಂಡಳಿಗೆ ನಷ್ಟವುಂಟಾಗುತ್ತಿದೆ. ಆದ್ದರಿಂದ ಕಾರ್ಮಿಕರ ಮಕ್ಕಳು ಹೊರತು ಪಡಿಸಿ ಇತರೆ ಸಾರ್ವಜನಿಕ ಮಕ್ಕಳಿಗೆ ಇನ್ನು ಮುಂದೆ ಬೆಮೆಲ್ ವತಿಯಿಂದ ಶಾಲಾ ಕಾಲೇಜುಗಳಿಗೆ ಬಂದು ಹೋಗುವ ಶಾಲಾ ಬಸ್ ಸೌಕರ್ಯ ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಿದೆ.
ಆಡಳಿತ ಮಂಡಳಿ ಜತೆ ಪೋಷಕರ ಮಾತುಕತೆ: ಬೆಮೆಲ್ ಆಡಳಿತ ಮಂಡಳಿಯ ಈ ನಿರ್ಧಾರದಿಂದ ಕೆಜಿಎಫ್ ನಗರ ಭಾಗ ಮತ್ತು ಬೇತಮಂಗಲ ಹೋಬಳಿ, ಸುಂದರಪಾಳ್ಯ ಹೋಬಳಿ ಮತ್ತು ಕ್ಯಾಸಂಬಳ್ಳ ಹೋಬಳಿಗಳ ಸುತ್ತಮುತ್ತಲಿನಿಂದ ಬರುವ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಕುರಿತು ಬೆಮೆಲ್ ಶಾಲಾ ಕಾಲೇಜು ಆಡಳಿತದೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಪೋಷಕರ ಆರೋಪ.
ಇನ್ನೂ ಹೆಚ್ಚು ಶುಲ್ಕ ನೀಡಲು ಸಿದ್ಧ: ಬೆಮೆಲ್ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಕಾರ್ಮಿಕರ ಮಕ್ಕಳ ಪೋಷಕರನ್ನು ಹೊರತುಪಡಿಸಿ ಇತರೆ ಸಾಮಾನ್ಯ ಮಕ್ಕಳ ಪೋಷಕರು ನಗರದಲ್ಲಿ ಸಭೆ ನಡೆಸಿ ಪೋಷಕರ ಸಂಘವನ್ನು ಸಹ ರಚಿಸಿಕೊಂಡು ಎಲ್ಲರೂ ಒಗ್ಗೂಡಿ ತಮ್ಮ ಮಕ್ಕಳಿಗೆ ಮತ್ತು ಪೋಷಕರಿಗೆ ಆಗುತ್ತಿರುವ ತೊಂದರೆ ವಿವರಿಸಿ ಬೇಕಾದಲ್ಲಿ ಬಸ್ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಶುಲ್ಕವನ್ನು ನೀಡಲು ತಾವು ಸಿದ್ದರಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಜರುಗಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ: ಆದರೆ ಬೆಮೆಲ್ ಆಡಳಿತ ಮಂಡಳಿ ಹೇಳುವ ಪ್ರಕಾರ ವಿದ್ಯಾರ್ಥಿಗಳಿಗೆ ಒದಗಿಸುವ ಬಸ್ ಸೌಲಭ್ಯದಿಂದ ಕಾರ್ಖಾನೆಗೆ ನಷ್ಟವುಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ 2012-13 ನೇ ವರ್ಷದ ಬಸ್ ಶುಲ್ಕವನ್ನು ಪಡೆದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇತ್ತ ತೊಂದರೆಗೆ ಸಿಲುಕಿರುವ ಪೋಷಕರು ಹೇಳುವ ಪ್ರಕಾರ ಬೆಮೆಲ್ ಆಡಳಿತ ಮಂಡಳಿ ಈ ವರ್ಷ ತಮ್ಮ ಮಕ್ಕಳಿಗೆ ಡೋನೇಶನ್ ಪಾವತಿಸುವ ಸಮಯದಲ್ಲಿ ಈ ಬಗ್ಗೆ ತಮಗೆ ಮಾಹಿತಿ ನೀಡಿದ್ದಲ್ಲಿ ತಾವು ಮುಂದಿನ ನಿರ್ಧಾರ ಕೈಗೊಳ್ಳುತ್ತಿದ್ದವು.
ಆದರೆ ಇನ್ನೂ ಮೂರು ತಿಂಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ಆಗಮಿಸುತ್ತಿರುವ ಸಮಯದಲ್ಲಿ ಬೆಮೆಲ್ ಆಡಳಿತ ಮಂಡಳಿ ಇಂತಹ ನಿರ್ಧಾರವನ್ನು ಕೈಗೊಂಡಿರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಅಡ್ಡ ಪರಿಣಾಮ ಬೀಳುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ.
ಇತ್ತೀಚೆಗೆ ಬೆಮೆಲ್ ವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮಾತನಾಡಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಬೆಮೆಲ್ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ತಿಳಿಸಿದ್ದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ದೂರಿದ್ದಾರೆ.