698 ಹಸುಗಳಿಗೆ ಪರಿಹಾರ
ಕನ್ನಡಪ್ರಭವಾರ್ತೆ ಕೋಲಾರ ಡಿ.15
ಕಳೆದ ಮೂರು ತಿಂಗಳ ಹಿಂದೆ ಸುನಾಮಿಯಂತೆ ಅಪ್ಪಳಿಸಿದ ಕಾಲುಬಾಯಿ ಜ್ವರಕ್ಕೆ ಕೋಲಾರ ಜಿಲ್ಲೆಯ 10422 ಹಸುಗಳು ತುತ್ತಾಗಿ 2259 ಹಸುಗಳು ಸತ್ತಿವೆ.
ರೈತರ ಹಾಗೂ ವಿವಿಧ ಸಂಘಟನೆಗಳ ಒತ್ತಾಯದಿಂದ ರಾಜ್ಯ ಸರ್ಕಾರ ಕಾಲುಬಾಯಿ ಜ್ವರದಿಂದ ಸುತ್ತಿರುವ ಹಸುಗಳಿಗೆ ಪರಿಹಾರ ಘೋಷಣೆ ಮಾಡಿ ಕೇವಲ 698 ಹಸುಗಳಿಗೆ ಮಾತ್ರ 1.35 ಕೋಟಿ ರು.ಮಂಜೂರು ಮಾಡಿದೆ.
ಸರ್ಕಾರ ಕಾಲುಬಾಯಿ ಜ್ವರದಿಂದ ಸತ್ತಿರುವ ರಾಸುಗಳ ಮಾಹಿತಿಗಾಗಿ ರಚನೆ ಮಾಡಿದ್ದ ಸಮಿತಿ ನೀಡಿರುವ ವರದಿಯನ್ವಯ ಶ್ರೀನಿವಾಸಪುರ, ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ 698 ಹಸುಗಳಿಗೆ ಮಾತ್ರ ಪರಿಹಾರ ಬಿಡುಗಡೆ ಮಾಡಿದ್ದು ಇನ್ನುಳಿದ ಕೋಲಾರ ಮತ್ತು ಮುಳಬಾಗಿಲು ತಾಲೂಕಿನಲ್ಲಿ ಸತ್ತಿರುವ ಹಸುಗಳಿಗೆ ಪರಿಹಾರ ಮಂಜೂರು ಮಾಡದಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಪುರ ತಾಲೂಕಿನಲ್ಲಿ ಸತ್ತಿರುವ 287 ಹಸುಗಳಿಗೆ 61.35 ಲಕ್ಷ ರು. ಪರಿಹಾರ 263 ರೈತರಿಗೆ ನೀಡಲಾಗುತ್ತದೆ. ಮಾಲೂರು- 265 ಹಸುಗಳಿಗೆ 46.40 ಲಕ್ಷ ರು. 219 ರೈತರಿಗೆ, ಬಂಗಾರಪೇಟೆ ತಾಲೂಕಿನ 146 ಹಸುಗಳಿಗೆ 27.95 ಲಕ್ಷ ರು. ಪರಿಹಾರವನ್ನು 135 ರೈತರು ಪಡೆಯುತ್ತಿದ್ದು, ಒಟ್ಟಾರೆ ಈ ಮೂರು ತಾಲೂಕಿನ 617 ರೈತರು ಒಟ್ಟು 1 ಕೋಟಿ, 35 ಲಕ್ಷದ 70 ಸಾವಿರ ರು. ಪರಿಹಾರವನ್ನು ಪಡೆಯುವಂತಾಗಿದೆ. ಸರ್ಕಾರ ಕೇವಲ ಮೂರು ತಾಲೂಕುಗಳಿಗೆ ಮಾತ್ರ ಪರಿಹಾರ ಮಂಜೂರು ಮಾಡಿ ಉಳಿದ ಎರಡು ತಾಲೂಕುಗಳಿಗೆ ನೀಡದಿರುವುದು ಏಕೆ ಎಂಬುದು ಜಿಜ್ಞಾಸೆಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಅತೀ ಹೆಚ್ಚು ಜಾನುವಾರುಗಳು ಮೃತಟ್ಟಿರುವುದು ಕೋಲಾರ ಮತ್ತು ಮುಳಬಾಗಿಲು ತಾಲೂಕಿನಲ್ಲಿಯಾದರೂ ಸರ್ಕಾರ ಈ ಎರಡು ತಾಲೂಕಿಗೆ ಪರಿಹಾರ ಬಿಡುಗಡೆ ವಿಳಂಬಕ್ಕೆ ಕಾರಣವೇನೆಂಬುದು ಅರ್ಥವಾಗುತ್ತಿಲ್ಲ. ಅಧಿಕಾರಿಗಳನ್ನು ಹೇಳಿದರೆ ವರದಿ ಬಂದ ನಂತರ ಪರಿಹಾರ ಬಿಡುಗಡೆ ಆಗುವುದರಲ್ಲಿ ಅನುಮಾನವಿಲ್ಲವೆಂದು ಹೇಳಿದ್ದಾರೆಯಾದರೂ ಯಾವಾಗ ರೈತರಿಗೆ ಹಣ ತಲುಪುತ್ತದೆ ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ.
ಕೋಲಾರ ತಾಲೂಕಿನಲ್ಲಿ 741 ಹಾಗೂ ಮುಳಬಾಗಿಲು ತಾಲೂಕನಲ್ಲಿ 632 ಹಸುಗಳು ಸತ್ತಿವೆ.ರೈತರಿಗೆ ಸರ್ಕಾರದ ಲೆಕ್ಕಾಚಾರ ಪ್ರಕಾರ 1.2 ಕೋಟಿ ಬರಬೇಕಾಗಿದೆ. ಮೂರು ತಾಲೂಕಿಗೆ ಬಂದಂತೆ ನಮಗೂ ಪರಿಹಾರ ಸಿಗುತ್ತದೆ ಎಂದು ರೈತರು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರದಲ್ಲಿ ಹಾಲು ನೀಡುವಂತಹ ಜಾನುವಾರುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿದ್ದರೆ 25 ಸಾವಿರ ರು, ಬಂಜೆ ಜಾನುವಾರಗಳಿಗೆ 20 ಸಾವಿರ, ಕರುಗಳಿಗೆ 5 ಸಾವಿರ ರು. ನಿಗದಿಪಡಿಸಿದೆ. ಪ್ರತಿ ಜಾನುವಾರುಗಳಿಗೆ ರಾಜ್ಯ ಸರ್ಕಾರದಿಂದ 16,400 ರು., ನೀಡಲಿದ್ದು, ಉಳಿದ ಹಣವನ್ನು ಆಯಾ ಹಾಲು ಒಕ್ಕೂಟಗಳು ಭರಿಸಬೇಕಾಗಿದೆ. ಇದಲ್ಲದೆ ಕೇಂದ್ರ ಸರ್ಕಾರದಿಂದಲೂ 25 ಸಾವಿರ ಪರಿಹಾರ ಸೇರಿ ಒಟ್ಟು 50 ಸಾವಿರ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ.
ಜಿಲ್ಲೆಯಲ್ಲಿ 10422 ಹಸುಗಳು ಕಾಲು ಬಾಯಿ ಜ್ವರಕ್ಕೆ ತುತ್ತಾಗಿ 2259 ಮೃತಪಟ್ಟಿದ್ದು.7170 ರೋಗದಿಂದ ಚೇತರಿಕೆಗೊಂಡಿದ್ದರೆ 992 ಹಸುಗಳು ಇನ್ನೂ ರೋಗದಿಂದ ಚೇತರಿಕೆ ಕಾಣದೆ ನರಳುತ್ತಿವೆ.