ಆಸ್ಪತ್ರೆ ಕಾಂಪೌಂಡ್ ಕುಸಿದು 4 ದ್ವಿಚಕ್ರ ವಾಹನ ಜಖಂ
ಕ.ಪ್ರ.ವಾರ್ತೆ ಮಾಲೂರು ಡಿ. 15
ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗದ ಕಾಂಪೌಂಡಿನ ಒಂದು ಭಾಗ ದಿಢೀರನೆ ಕುಸಿದುಬಿದ್ದು 4 ದ್ವಿಚಕ್ರ ವಾಹನಗಳ ಜಖಂ ಆದ ಘಟನೆ ಭಾನುವಾರ ಸಂಜೆ ನಡೆದಿದೆ. ಸಾರ್ವಜನಿಕರ ಆಸ್ಪತ್ರೆಗೆ ಭಾನುವಾರ ಬಹಳ ಕಡಿಮೆ ಜನ ಭೇಟಿ ನೀಡುವುದರಿಂದ ಹೆಚ್ಚಿನ ಅಪಘಾತ ತಪ್ಪಿದೆ. ಕಾಂಪೌಂಡ್ಗೆ ಹೊಂದಿಕೊಂಡತೆ ಇರುವ ದೊಡ್ಡ ಮರದ ಬೇರುಗಳಿಂದ ಕಾಂಪೌಂಡು ಬಹಳ ದಿನದಿಂದ ಶಿಥಿಲವಾಗುತ್ತ ಬಂದಿತ್ತು.ಈ ಬಗ್ಗೆ ಆಸ್ಪತ್ರೆ ಆಡಳಿತ ನಿರ್ಲಕ್ಷ ತೋರಿರುವ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಪ್ರತಿ ದಿನ ಸಂಜೆ ಬಿಸಿಲು ಕಾಯಲು ಬಾಣಂತಿಯರು ಸೇರಿದಂತೆ ರೋಗಿಗಳನ್ನು ನೋಡಲು ಬರುವ ಗ್ರಾಮಾಂತರ ಪ್ರದೇಶದ ಜನತೆ ಎಲೆಅಡಿಕೆ ಹಾಕಿಕೊಳ್ಳುತ್ತಿದ್ದ ಜಾಗ ಆದಾಗಿದ್ದು,ಭಾನುವಾರ ಆದ ಕಾರಣ ಇಂದು ಯಾರು ಇಲ್ಲದಿರುವುದರಿಂದ ಅದೃಷ್ಟವಶಾತ್ ಪ್ರಾಣಪಾಯ ಸಂಭವಿಸಲಿಲ್ಲ.
ಕುಟುಂಬ ಕಲಹ : ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ
ಕೆಜಿಎಫ್: ಕುಟುಂಬ ಕಲಹ ಹಿನ್ನೆಲೆಯಲ್ಲಿ ಗೃಹಿಣಿ ಸಂಗೀತ(32) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಡ್ರಸನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಡ್ರಸನ್ಪೇಟೆ ನಿವಾಸಿ ಕಿರಣ್ ಎಂಬುವರೊಂದಿಗೆ ಸಂಗೀತ ಮದುವೆಯಾಗಿದ್ದರು. ಗಂಡ ಹೆಂಡತಿ ಚೆನ್ನಾಗಿ ಸಂಸಾರ ಮಾಡಿಕೊಂಡು ಬರುತ್ತಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಗಂಡ ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿದ್ದು ಹಲವು ಬಾರಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದುಗೂಡಿಸಲಾಗಿತ್ತು ಎಂದು ಹೇಳಲಾಗಿದೆ.
ಪಂಚಾಯಿತಿ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ಗೃಹಣಿ ಸಂಗೀತ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ ಗಂಡ ಮತ್ತು ಆಕೆಯ ಮನೆಯವರು ಹೇಳುವ ಪ್ರಕಾರ ಸಂಗೀತಳಿಗೆ ಆಗಾಗ ಹೊಟ್ಟೆ ನೋವು ಕಾಣಿಸಿ ಕೊಳ್ಳುತ್ತಿದ್ದು ನೋವು ವಾಸಿಯಾಗದ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಆಂಡ್ರಸನ್ಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.