ಪೊಲೀಸ್ ದರ್ಪ ಖಂಡಿಸಿ ಧರಣಿ
ಕ.ಪ್ರ.ವಾರ್ತೆ ಕೋಲಾರ ಡಿ. 15
ಕೆಲ ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ಪೊಲೀಸರು ಬಜರಂಗ ದಳ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ದರ್ಪ ಪ್ರದರ್ಶಿಸುತ್ತಿದ್ದಾರೆಂದು ಆರೋಪಿಸಿ ನಗರದಲ್ಲಿ ಭಾನುವಾರ ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಇತ್ತೀಚೆಗೆ ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ನಡೆದ ಅಂತರಗಂಗೆ ಜಾತ್ರೆಗಾಗಿ ಭಕ್ತರನ್ನು ಆಕರ್ಷಿಸಲು ಸರ್ಕಾರಿ ಬಸ್ ನಿಲ್ದಾಣ ವೃತ್ತದಲ್ಲಿ ಬಂಟಿಂಗ್ಸ್ ಹಾಗೂ ದೇವರ ಭಾವಚಿತ್ರಗಳನ್ನು ಒಳಗೊಂಡ ಪ್ಲೆಕ್ಸ್ಗಳನ್ನು ಕಟ್ಟಲಾಗಿತ್ತು.
ಡಿ.21ರ ನಂತರ ತೆರವು ಮಾಡುವುದಕ್ಕೆ ನಗರಸಭೆಯಿಂದ ಅನುಮತಿ ಪಡೆಯಲಾಗಿತ್ತು. ಆದರೆ, ಕಾಂಗ್ರೆಸ್ ಮುಖಂಡರು ಅದರಲ್ಲೂ ನಗರಸಭೆಯ ಸದಸ್ಯ ಸಲ್ಲಾವುದ್ದೀನ್ಬಾಬು ಎಂಬುವರು ನಗರಸಭೆಯ ಆಯುಕ್ತರ ಮೇಲೆ ಪ್ರಭಾವಿ ಮುಖಂಡರಿಂದ ಒತ್ತಡ ತಂದು ಏಕಾಏಕಿ ಬಂಟಿಂಗ್ಸ್ ತೆರವು ಮಾಡಿಸಿದ್ದರಿಂದ ಪ್ರತಿಭಟನೆ ನಡೆದಿತ್ತು.
ಮನೆಯಲ್ಲಿದ್ದವರಿಗೆ ಮಾನಸಿಕ ಹಿಂಸೆ: ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಪೊಲೀಸರು ಬಜರಂಗದಳ ಮತ್ತು ಬಿಜೆಪಿಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಿ ಕೆಲವರನ್ನು ಬಂಧಿಸಿದ್ದಾರೆ, ಬಿಜೆಪಿಯ ನಗರ ಘಟಕದ ಕಾರ್ಯದರ್ಶಿ ಅಪ್ಪಿ ಸೇರಿದಂತೆ ಇನ್ನಿತರ ವಿರುದ್ಧವೂ ಪ್ರಕರಣ ದಾಖಲು ಮಾಡಿ ಬಂಧಿಸಲು ಹೊತ್ತು ಗೊತ್ತು ಇಲ್ಲದೆ ಮನೆಗಳಿಗೆ ಹೋಗಿ ಮನೆಯಲ್ಲಿದ್ದವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಅಪ್ಪಿಯವರು ಮನೆಯಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಸಿಪಿಐ ಶಿವಕುಮಾರ್ ಆದೇಶದ ಮೇರೆಗೆ ಪೊಲೀಸರು ಅಪ್ಪಿ ಮನೆಗೆ ಹೋಗಿ ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಪಿಯವರ ತಾಯಿ ರುಕ್ಕಮ್ಮ ಸೇರಿದಂತೆ ಇನ್ನಿತರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಅಘಾತಕ್ಕೆ ಒಳಗಾಗಿದ್ದ ಅಪ್ಪಿಯವರ ತಾಯಿ ಭಾನುವಾರ ಮುಂಜಾನೆ ಹೃದಯಾಘಾತದಿಂದ ಸತ್ತಿದ್ದಾರೆ. ಇದಕ್ಕೆ ಪೊಲೀಸರ ಅನಾಗರಿಕ ನಡವಳಿಕೆ ಮತ್ತು ದರ್ಪ ಕಾರಣವೆಂದು ದೂರಿದರು.
ಹಿಂದೂ ಮುಸ್ಲಿಂ ಸೌಹಾರ್ದ ಜೀವನ: ಕೋಲಾರದಲ್ಲಿ ಹಿಂದೂ ಮತ್ತು ಮುಸ್ಲಿಂ ಬಂಧುಗಳು ಸ್ನೇಹ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ, ನಗರಸಭೆ ಸದಸ್ಯ ಸಲ್ಲಾವುದ್ದೀನ್ಬಾಬು ಉದ್ದೇಶಪೂರ್ವಕವಾಗಿ ನಗರದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ.
ಇವರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದೆ ಅಂತರಗಂಗೆ ಜಾತ್ರೆಯಲ್ಲಿ ಭಾಗವಹಿಸಿದ್ದ 50 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಿದ ಬಜರಂಗ ದಳ ಮತ್ತು ಬಿಜೆಪಿ ಮುಖಂಡರ ಮೇಲೆ ಸೇಡಿನ ಕ್ರಮ ಅನುಸರಿಸುತ್ತಿದ್ದಾರೆಂದು ಪ್ರತಿಭಟನಾಕಾರರು ಮಾಜಿ ಶಾಸಕ ಸಂಪಂಗಿ ಅವರ ಗಮನಕ್ಕೆ ತಂದರು.
ನಗರಸಭೆ ಆಯುಕ್ತರು ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸೌಹಾರ್ದತೆಗೆ ಯತ್ನಿಸಿದ್ದರು. ಆದರೆ, ಸಿಪಿಐ ಶಿವಕುಮಾರ್, ಎಎಸ್ಪಿ ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ಪ್ರಕರಣ ದಾಖಲು ಮಾಡಿ ದಬ್ಬಾಳಿಕೆ ನಡೆಸಿದ ಫಲವಾಗಿ ಇಂದು ಒಬ್ಬರು ಸಾವನ್ನಪ್ಪುವಂತಾಗಿದ್ದು ಇದಕ್ಕೆ ಕಾರಣರಾದವರನ್ನು ಅಮಾನತು ಪಡಿಸಬೇಕೆಂದು ಒತ್ತಾಯಿಸಿದರು.
ಬಜರಂಗ ದಳ ಮತ್ತು ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ದಮನ ಮಾಡಲು ಯತ್ನಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿಗೆ ಸೋಮವಾರ ದೂರು ಸಲ್ಲಿಸುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ವೈ.ಸಂಪಂಗಿ ತಿಳಿಸಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.
ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ, ನೀಲಿ ಜೈಶಂಕರ್, ವಿಜಯಕುಮಾರ್, ಗಾಂಧಿನಗರ ವೆಂಕಟೇಶ್, ವೆಂಕಟೇಶ್ ಮೌರ್ಯ, ಮು.ರಾಘವೇಂದ್ರ, ವೆಂಕಟೇಗೌಡ, ಕೆಂಬೋಡಿ ನಾರಾಯಣಸ್ವಾಮಿ,ಸಲೀಂ ಪಾಷ, ಸೈಯದ್ ಇಷ್ತಾಕ್ ಅಹಮದ್ ಸೇರಿದಂತೆ ಅನೇಕರು ಇದ್ದರು.