ರಸ್ತೆ ಮಧ್ಯದಲ್ಲೇ ಒಕ್ಕಣೆ: ಶಾಸಕ ಬೇಸರ
ಬಂಗಾರಪೇಟೆ: ರಸ್ತೆಗಳ ಮಧ್ಯದಲ್ಲಿ ರೈತರು ಒಕ್ಕಣೆ ಮಾಡುವುದನ್ನು ಕೈಬಿಟ್ಟು ಸಾಮೂಹಿಕ ಒಕ್ಕಣೆ ನಿರ್ಮಿಸಿಕೊಂಡರೆ ಸರ್ಕಾರದಿಂದ ಸಬ್ಸಿಡಿ ಕೊಡಲಾಗುವುದೆಂದು ಕೃಷಿ ಇಲಾಖೆ ಹೇಳುತ್ತಿದ್ದರೂ ರೈತರು ಲೆಕ್ಕಿಸದೆ ರಸ್ತೆಯಲ್ಲೆ ರಾಗಿ,ಬತ್ತ ಮತ್ತಿತರೆ ಬೆಳೆಯನ್ನು ಸುರಿದು ಅದರಿಂದ ಧಾನ್ಯಗಳನ್ನು ಬೇರ್ಪಡಿಸಲು ಮುಂದಾಗುತ್ತಿರುವುದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶಕ್ಕೆ ಕಾರಣವಾಗಿದೆ. ಒಕ್ಕಣೆಯಿಂದ ಪ್ರತಿದಿನ ಒಂದಲ್ಲಾ ಒಂದು ರಸ್ತೆ ಅಫಘಾತಗಳು ಸಂಭವಿಸುತ್ತಲೇ ಇವೆ ಅಲ್ಲದೆ ಧಾನ್ಯಗಳ ಮೇಲೆ ಬಸ್,ಲಾರಿ ಇತರೇ ವಾಹನಗಳು ಹರಿದು ಕಲುಷಿತಗೊಳ್ಳುತ್ತಿದೆ. ಇದನ್ನೇ ಮತ್ತೆ ನಾವು ತಿನ್ನಬೇಕು.ಈ ಅನಿಷ್ಟ ಪದ್ದತಿಗೆ ತಿಲಾಂಜಲಿ ಹಾಡಲು ಸರ್ಕಾರ ರೈತರು ತಮ್ಮ ಜಮೀನುಗಳಲ್ಲಿ ಕಣ ನಿರ್ಮಿಸಿಕೊಳ್ಳಲು ಆಸಕ್ತಿ ತೋರಿದರೆ ಅಥವಾ ಗುಂಪು ಕಣಕ್ಕೆ ಮುಂದಾರೂ ಸರ್ಕಾರ ರಿಯಾಯಿತಿ ನೀಡಲು ಮುಂದಾಗಿದೆ.ಆದರೆ ರೈತರು ಈ ಬಗ್ಗೆ ಒಲವು ತೋರದೆ ಹಳೇ ಪದ್ದತಿಯಲ್ಲೇ ಮುಂದುವರೆದಿದ್ದಾರೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರದ ಅನುಕೂಲಗಳನ್ನು ಉಪಯೋಗಿಸಿಕೊಳ್ಳಿ ಎಂದು ಸಾರಿ ಸಾರಿ ಹೇಳುತ್ತಿದ್ದರೂ ಯಾರು ಗಮನ ಕೊಡುತ್ತಿಲ್ಲ.ಕಾಮಸಮುದ್ರ ಹೋಬಳಿಯ ಹಲವು ಗ್ರಾಮಗಳಲ್ಲಿ ಆನೆಗಳ ಹಾವಳಿಯಿಂದ ತತ್ತರಿಸಿರುವ ರೈತರಿಗೆ ಧೇರ್ಯ ಹೇಳಲು ಇತ್ತೀಚಿಗೆ ಭೇಟಿ ನೀಡಿದಾಗ ಮುಷ್ಟ್ರಹಳ್ಳಿ ಗ್ರಾಮದಲ್ಲಿ ರಸ್ತೆ ಮಧ್ಯ ರಾಗಿ ಪೈರುಗಳನ್ನು ಸುರಿದಿರುವುದನ್ನು ಕಂಡು ಸಿಡಿಮಿಡಿಕೊಂಡು ನೇರವಾಗಿ ಕಾರ್ ನಿಲ್ಲಿಸಿ ರೈತನನ್ನು ತರಾಟೆಗೆ ತೆಗೆದುಕೊಂಡರು.ಶಾಸಕರ ಸೂಚನೆಗೆ ಹೆದರಿ ಕ್ಷಣದಲ್ಲಿ ರಸ್ತೆಯಲ್ಲಿದ್ದ ರಾಗಿ ಪೈರುಗಳನ್ನು ಸ್ಥಳಾಂತರಗೊಳಿಸಿದರು. ಶಾಸಕರು ಗ್ರಾಮದಿಂದ ಹೋಗುತ್ತಿದ್ದಂತೆ ಮತ್ತೆ ಅದೇ ಸ್ಥಳದಲ್ಲಿ ತಂದು ಸುರಿದರು.ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಈ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸಬೇಕೆಂದು ಶಾಸಕರು ಕಟ್ಟುನಿಟ್ಟಾಗಿ ಸೂಚಿಸಿದರು ಇದು ಎಷ್ಟರ ಮಟ್ಟಿ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕು.
ಬಸ್ ಹರಿದು ಇಬ್ಬರು ಸಾವು
ಮಾಲೂರು: ಅತಿ ವೇಗದಿಂದ ಬಂದ ಸರ್ಕಾರಿ ಬಸ್ಸೊಂದು ರಸ್ತೆ ಬದಿ ಹೋಗುತ್ತಿದ್ದ ದ್ವಿಚಕ್ರ ವಾಹನ ಮೇಲೆ ಹರಿದ ಪರಿಣಾಮ ದ್ವಿಚಕ್ರ ಸವಾರರಿಬ್ಬರು ಸತ್ತ ಘಟನೆ ಭಾನುವಾರ ಸಂಜೆ ಇಲ್ಲಿನ ಕೋಲಾರ ರಸ್ತೆಯ ದೊಡ್ಡಶಿವಾರ ಗೇಟ್ ಬಳಿ ನಡೆದಿದೆ. ಮೃತರನ್ನು ಗುಡ್ನಹಳ್ಳಿಯ ಮಂಜುನಾಥ್(23) ಹಾಗೂ ರಾಮು(35)ಎಂದು ಗುರುತಿಸಲಾಗಿದೆ. ಗುಡ್ನಹಳ್ಳಿ ಗ್ರಾಮದ ನಂಜುಂಡಪ್ಪ ಮಗನಾದ ಮಂಜುನಾಥ್ ತನ್ನ ಅಕ್ಕನ ಗಂಡನ ಜತೆಯಲ್ಲಿ ಕೋಲಾರ ಕಡೆ ಹೋಗುತ್ತಿದ್ದಾಗ ಬಾಯಿಕೊಂಡಕ್ಕೆ ಹೋಗಿ ಬರುತ್ತಿದ್ದ ಸಿಸಿ ಟ್ರಿಪ್ನ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ್ ಸ್ಥಳದಲ್ಲಿಯೇ ಸತ್ತಿದ್ದು, ಕೋಲಾರ ಆಸ್ವತ್ರೆಗೆ ಸಾಗಿಸುವ ಮಧ್ಯೆದಲ್ಲಿ ರಾಮು ಸಹ ಸಾವನ್ನಪ್ಪಿದ್ದಾನೆ. ಘಟನೆ ಸ್ಥಳಕ್ಕೆ ಜಿಲ್ಲಾ ಎಸ್ಪಿ ರಾಮ್ನಿವಾಸ್ ಸಪಟ್ ಹಾಗೂ ಇನ್ಸ್ಪೆಕ್ಟರ್ ಶಿವುಕುಮಾರ್ ಭೇಟಿ ನೀಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗ-ಅಳಿಯನ ಸಾವು, ಕರವೇ ಸಾಂತ್ವನ: ಗುಡ್ನಹಳ್ಳಿ ಗ್ರಾಮದ ನಂಜುಂಡಪ್ಪ ಮಗ ಹಾಗೂ ಮಗಳ ಗಂಡ ಇಬ್ಬರು ಸರ್ಕಾರಿ ಬಸ್ನ ಮಾರಿಗೆ ಬಲಿಯಾಗಿದ್ದು, ಗುಡ್ನಹಳ್ಳಿ ಗ್ರಾಮ ಸಂಪೂರ್ಣ ಮೌನ ಆಚರಿಸಿದೆ. ವಯಸ್ಸಿನ ಮಗ ಹಾಗೂ ಇತ್ತೀಚೆಗೆ ಮಗಳನ್ನು ಮದುವೆಯಾಗಿದ್ದ ಆಳಿಯನನ್ನು ಕಳೆದುಕೊಂಡಿರುವ ನಂಜುಂಡಪ್ಪ ಮನೆಗೆ ಭೇಟಿ ನೀಡಿದ ಜಿಲ್ಲಾ ಎಸ್ಪಿ ರಾಮ್ನಿವಾಸ್ ಸಪೇಟ್ ಹಾಗೂ ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ ರವರು ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಶಿಬಿರ ಉದ್ಘಾಟನೆ
ಬಾಗೇಪಲ್ಲಿ: ವಿದ್ಯಾರ್ಥಿಗಳು ಆಟಪಾಠದ ಜೊತೆ ಜೊತೆಗೆ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕರೆ ನೀಡಿದರು. ಸದ್ದಪಲ್ಲಿ ತಾಂಡದಲ್ಲಿ ನ್ಯಾಷನಲ್ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಎನ್ಎಸ್ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಅಪ್ಪಿಗೆ ಮಾತೃ ವಿಯೋಗ
ಕೋಲಾರ: ಬಿಜೆಪಿ ನಗರ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಅಪ್ಪಿ(ಆನಂದ್) ಅವರ ತಾಯಿ ರುಕ್ಕಮ್ಮ(68) ಭಾನುವಾರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮೃತರಿಗೆ ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ನಗರದಲ್ಲಿ ನೆರವೇರಿತು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಮಾಜಿ ಶಾಸಕ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಡಾ.ಶಿವಣ್ಣ, ಯುವ ಮೋರ್ಚಾ ಓಂಶಕ್ತಿ ಚಲಪತಿ, ಮುಖಂಡ ನೀಲಿ ಜೈಶಂಕರ್, ಮು.ರಾಘವೇಂದ್ರ, ಬಾಲಾಜಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಅಂತಿಮ ದರ್ಶನ ಪಡೆದರು.
ನೇಣು ಬಿಗಿದುವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಬರ್ಟ್ಸನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಗಣೇಶ್ಪುರಂ ನಿವಾಸಿ ಆರುಮುಗಂ(50) ಎಂಬುವರೆ ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಕೆಲ ದಿನಗಳಿಂದ ಜೀವನ ಸಾಗಿಸಲು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದು ಮಾನಸಿಕ ತೊಂದರೆಗೆ ಒಳಪಟ್ಟಿದ್ದ ಇವರು ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ರಾಬರ್ಟ್ಸನ್ಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.