ಅದ್ಧ್ದೂರಿ ಸಾಯಿನಾಥ ಪಲ್ಲಕ್ಕಿ ಉತ್ಸವ
ಮಾಲೂರು: ಶಿರಡಿ ಸಾಯಿ ಸೇವಾ ಟ್ರಸ್ಟ್ ದತ್ತಾತ್ರೇಯ ಜಯಂತಿ ಪ್ರಯುಕ್ತ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಸಾಯಿನಾಥ ಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಚಾಲನೆ ನೀಡಿದ ಪಲ್ಲಕ್ಕಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ಪ್ರತಿಮನೆಯ ಮುಂದೆ ನೀರು ಚೆಲ್ಲಿ ಸಾಯಿನಾಥಸ್ವಾಮಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಮಹಿಳಾ ಭಕ್ಟ ಮಂಡಳಿವರು ಜತೆಯಲ್ಲಿ ಭಜನೆಯಲ್ಲಿ ಭಾಗವಹಿಸಿದ್ದರು.
ಪಟ್ಟಣದ ಮಾರಿಕಾಂಬ, ಗಾಂಧಿ, ಮಹಾರಾಜ, ಡಾ.ರಾಜ್ ವೃತ್ತಗಳಲ್ಲಿ ಪಟಾಕಿ ಸಿಡಿಸಲಾಯಿತು.ಟ್ರಸ್ಟ್ ಗೌರವಾಧ್ಯಕ್ಷ ಕೃಷ್ಣಪ್ಪ,ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ, ನರಸಿಂಹಯ್ಯ,ಮಂಜುನಾಥ್,ಸುಬ್ರಮಣ್ಯ,ಗಜೇಂದ್ರ,ಮಣಿ, ಲಕ್ಷ್ಮಿ,ಭಾಗ್ಯಮ್ಮ,ಧರಣಿ,ಸೆಲ್ವಮ್ಮ,ಭಾಗ್ಯ,ಭಾರತಮ್ಮ,ರಜನಿ,ಶ್ರೀದೇವಿ,ಮುನಿಕೃಷ್ಣಪ್ಪ, ವೆಂಕಟೇಶಪ್ಪ,ಸುರೇಶ್,ವಿಜಯಮ್ಮ ಇದ್ದರು.
ಸಾದೇನಹಳ್ಳಿ ಶಾಲೆ; ಆರೋಗ್ಯ ಶಿಬಿರ
ಗೌರಿಬಿದನೂರು: ಮಕ್ಕಳು ಚಿಕ್ಕಂದಿನಿಂದಲೆ ವಿದ್ಯೆ ಎಂಬ ಆಸ್ತಿಯನ್ನು ಶ್ರದ್ಧೆ ಶಿಸ್ತಿನಿಂದ ಸಂಪಾದಿಸಬೇಕು. ವಿದ್ಯೆ ಬದುಕಿಗೆ ಆಯುಧ. ಗ್ರಾಮಿಣ ಮಕ್ಕಳು ಕಲಿಕೆಯಲ್ಲಿ ಮುಂದೆ ಬರಲಿ ಎಂದು ದಾನಿ ಸೋಮಶೇಖರ್ ಹೇಳಿದರು. ಮಂಚೇನಹಳ್ಳಿ ಹೋಬಳಿಯ ಸಾದೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಲಿಕಾ ಸಾಮಗ್ರಿ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು. ಕಾಡಚಿಕ್ಕನಹಳ್ಳಿ, ಕಾಮಗಾನಹಳ್ಳಿ, ಅದ್ದೇಕೋಪ್ಪ ಗ್ರಾಮಗಳ ಶಾಲಾ ಮಕ್ಕಳಿಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಸುದರ್ಶನ್, ಲೋಕೇಶ್, ವೆಂಕಟೇಶ್, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಸಿ.ವೆಂಕಟರೆಡ್ಡಿ, ಪ್ರತೀಶ್ ಹಾಗೂ ಶಾಲೆ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಎನ್‌ಟಿಎನ್ ಸ್ವಾಮಿಗೆ ಡಾಕ್ಟರೇಟ್
ಮಾಲೂರು: ತಾಲೂಕಿನ ನಾಗೊಂಡಹಳ್ಳಿಯ ಎನ್.ಟಿ.ನಾರಾಯಣಸ್ವಾಮಿಗೆ ತಮ್ಮ ಇಂಪ್ಯಾಕ್ಟ್ ಆಫ್ ಸೆಲ್ಫ್ ಗ್ರೂಪ್ಸ್ ಆನ್ ಸೋಸಿಯೋ ಎಕಾನಮಿಕ್ ಲೈಫ್ ಆಫ್ ವುಮೆನ್-ಎಕೆಸಸ್ಟಡಿ ಆಫ್ ಕೋಲಾರ್ ಡಿಸ್ಟ್ರಿಕ್ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಗ್ರಾಮೀಣಾಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಟಿ.ಎಚ್.ಮೂರ್ತಿ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಪ್ರಸ್ತುತ ಗ್ರಾಮೀಣಾಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣಸ್ವಾಮಿ ಅವರು ಡಾ. ಅಂಬೇಡ್ಕರ್ ವಿವಿದೋದ್ದೇಶ ಗ್ರಾಮೀಣಾಭಿವೃದ್ಧಿ ಪರಿಸರ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರ ಈ ಸಾಧನೆಗೆ ತಾಲೂಕಿನ ವಿವಿದ ದಲಿತ ಸಂಘಟನೆಗಳು,ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದೆ.
'ವಿವಿಧ ಸೇವೆಗಳಿಗೆ ರೋಟರಿ ಆದ್ಯತೆ'
ಮುಳಬಾಗಲು: ಬಡವರ ಆರ್ಥಿಕ, ಆರೋಗ್ಯ, ಶಿಕ್ಷಣ ಹಾಗೂ ಶೈಕ್ಷಣಿಕ ಪ್ರಗತಿಗೆ ರೋಟರಿ ಕ್ಲಬ್ ತನ್ನದೇ ಆದ ಚಾಪು ಮೂಡಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ರೋಟರಿಯನ್ ಮಧುರಾ ತಿಳಿಸಿದರು. ಅವರು ಅಮರಜ್ಯೋತಿ ಶಾಲೆಯಲ್ಲಿ ಭಾನುವಾರ ನಡೆದ ರೋಟರಿ ಅಂತಾರಾರಾಷ್ಟ್ರೀಯ ಜಿಲ್ಲೆ ಐಸಿಜಿಎಫ್ ಸಮ್ಮೇಳನದಲ್ಲಿ ಮಾತನಾಡಿದರು. ತನ್ನ ಪರಿಧಿಯಲ್ಲಿ ಬರುವ ಸೇವಾ ಕಾರ್ಯಕ್ರಮಗಳಲ್ಲಿ ಹೊಸತನ ಮೂಡಿಸಲು ರೋಟರಿ ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಈಚೆಗೆ ಸ್ಲಮ್ಮುಕ್ಕಳನ್ನು ಉತ್ತಮ ಶಾಲೆಗಳಿಗೆ ಸೇರಿಸಿ, ಅವರಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡುವುದು ಒಂದಾಗಿದೆ ಎಂದರು. ಐಸಿಜಿಎಫ್ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕೇವಲ ಮೂರು ವರ್ಷದಲ್ಲಿ ರೋಟರಿ ಸಂಸ್ಧೆ ಮುಳಬಾಗಲುನಲ್ಲಿ ಸ್ವಂತ ಕಟ್ಟಡವನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಈಗಾಗಲೇ ಶಾಲೆಗಳಿಗೆ ನಿಘಂಟುಗಳು, ಡೆಸ್ಕ್, ಕಂಪ್ಯೂಟರ್‌ಗಳನ್ನು ವಿತರಿಸಲಾಗಿದ್ದು, ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿವಸಗಳಲ್ಲಿ ರೋಟರಿ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲಿದೆ ಎಂದರು. ರೋಟರಿ ಜಿಲ್ಲಾ ಗವರ್ನರ್ ಕೆ.ಎಸ್. ನಾಗೇಂದ್ರ ಮಾತನಾಡಿ, ಮುಂದಿನ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಹತ್ತು ಸಾವಿರ ಸೋಲರ್ ದೀಪಗಳನ್ನು ವಿತರಿಸಲಾಗುವುದು ಎಂದರು. ಬೆಂಗಳೂರಿನ ಶಾರದ ವಿದ್ಯಾಪೀಠ ಹಾಗೂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ, ಡಯಾಲಿಸಿಸ್ ಚಿಕಿತ್ಸೆಗೆ ಅರ್ಹ ಬಡರೋಗಿಗಳಿಗೆ ನೆರವಾಗಲು ಯೋಜನೆ ರೂಪಿಸಲಾಗಿದೆ ಎಂದರು. ಜಿಲ್ಲಾ ಗವರ್ನರ್ ಶುಕ್ಲಬೋಸ್, ಶಂಕರ್ ಕುಲಕರ್ಣಿ, ರಾಘವೇಂದ್ರ, ಅಶೋಕ್ ಕುಮಾರ್, ರೋಟರಿ ಮುಳಬಾಗಿಲು ವಲಯದ ಅಧ್ಯಕ್ಷ ಪ್ರಭಾಕರ ಗುಪ್ತ, ಕಾರ್ಯದರ್ಶಿ ಪಿ.ಎಸ್. ರಮೇಶ್ ಮುಂತಾದವರು ಭಾಗವಹಿಸಿದ್ದರು. ಪಿಚ್ಚಹಳ್ಳಿ ಶಿವಪ್ರಸಾದ್ ಅವರಿಂದ ಸಾಂಸ್ಕೃತಿಕ ಗಾಯನ ಏರ್ಪಡಿಸಲಾಗಿತ್ತು.
ಚಿಂತಾಮಣಿ: ಕರವೇ ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ಇಲ್ಲಿನ ಕರವೇ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಆದೇಶ ಮೇರೆಗೆ ತಾ. ಅಧ್ಯಕ್ಷ ಎನ್.ಅಂಬರೀಶ್ ಅಧ್ಯಕ್ಷತೆಯಲ್ಲಿ ತಾಲೂಕು ಮತ್ತು ನಗರ ಘಟಕದ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಎಂ.ಶ್ರೀರಾಮರೆಡ್ಡಿ ಗೌರವಾಧ್ಯಕ್ಷ, ಎಸ್.ರವೀಂದ್ರ ಅಧ್ಯಕ್ಷ, ಎಸ್.ರಾಮಕೃಷ್ಣ ಉಪಾಧ್ಯಕ್ಷ, ಎಂ.ಎಸ್.ಶ್ರೀನಿವಾಸರೆಡ್ಡಿ ಪ್ರಧಾನ ಕಾರ್ಯದರ್ಶಿ,ಎನ್.ಮಂಜುನಾಥ್ ಕಾರ್ಯದರ್ಶಿ, ಜಿ.ವೆಂಕಟೇಶ್ ಸಹ ಕಾರ್ಯದರ್ಶಿ ,ಎಂ.ನಾರಾಯಣಸ್ವಾಮಿ ಸಂಘಟನಾ ಕಾರ್ಯದರ್ಶಿ, ಎನ್.ರವೀಂದ್ರ ಖಜಾಂಚಿ,ಎಂ.ಎಲ್.ಶ್ರೀನಿವಾಸರೆಡ್ಡಿ ಸಂಚಾಲಕರು, ಎನ್.ರಮೇಶ್ ಸಹ ಸಂಚಾಲಕರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆಂಪರೆಡ್ಡಿ, ತಾಲೂಕು ಉಪಾಧ್ಯಕ್ಷ ಕೃಷ್ಣಾರೆಡ್ಡಿ,ಸಂಘಟನಾ ಕಾರ್ಯದರ್ಶಿ ಸಿ.ಡಿ.ಶಂಕರ್,ಕಾರ್ಯದರ್ಶಿ ಮಾ.ಷ.ಚಂದ್ರಕುಮಾರ್,ಸಂಚಾಲಕ ಮುನಿರೆಡ್ಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕರಿಗೆ ನವೆಂಬರ್ ಸಂಬಳ ಇನ್ನೂ ಸಿಕ್ಕಿಲ್ಲ
ಮಾಲೂರು: ಡಿಸೆಂಬರ್ ತಿಂಗಳ ಹದಿನೈದು ದಿನ ಮುಗಿದಿದ್ದರೂ ನವೆಂಬರ್ ತಿಂಗಳ ಶಿಕ್ಷಕರ ವೇತನ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ ನೇತೃತ್ವದಲ್ಲಿ ಕಾರ್ಯನಿರ್ವಹಣಾಧಿಕಾರಿಯನ್ನು ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಗುಂಡಪ್ಪ ಅವರು ತಿಂಗಳು ಮುಗಿದು ಹದಿನೈದು ದಿನಗಳಾದರೂ ನವೆಂಬರ್ ತಿಂಗಳ ವೇತನ ಶಿಕ್ಷಕರಿಗೆ ಬಿಡುಗಡೆ ಮಾಡದ ಕಾರಣ ಶಿಕ್ಷಕರು ದೈನಂದಿನ ಖರ್ಚಿಗಾಗಿ ಪರದಾಡುವಂತಾಗಿದೆ. ಇದುವರೆಗೂ ಈ ತರಹ ಸಮಸ್ಯೆ ಆಗಿಲ್ಲದ ಕಾರಣ ತಾಲೂಕು ಪಂಚಾಯ್ತಿಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಸರ್ಕಾರದ ಹಣಕಾಸು ಕಾರ್ಯದರ್ಶಿಗಳಿಗೆ ಗಮನಕ್ಕೆ ತರಬೇಕೆಂದು ಒತ್ತಾಯಿಸಿದ ಗುಂಡಪ್ಪ ಅತಿ ಶೀಘ್ರವಾಗಿ ವೇತನ ಸಮಸ್ಯೆಯನ್ನು ಬಗೆಹರಿಸುವ ಜತೆಯಲ್ಲಿ ಶಿಕ್ಷಕರಿಗೆ ಡಿಸೆಂಬರ್ ತಿಂಗಳಲ್ಲಿ ಗಳಿಕೆ ರಜಾ ನಗದೀಕರಣ ಮತ್ತು ವೈದ್ಯಕೀಯ ವೆಚ್ಚದ ಹಣವನ್ನು ಬಿಡುಗಡೆ ಮಾಡಿಸಬೇಕೆಂದು ಮನವಿ ಮಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿನಾರಾಯಣ್,ಅಶ್ವಥ್ ನಾರಾಯಣ್ ಶೆಟ್ಟಿ, ಅಶ್ವಥ್ ನಾರಾಯಣ್ ಗೌಡ, ಮುನಿರಾಜು ಇತರ ಶಿಕ್ಷಕರು ಇದ್ದರು.