ಕೇಂದ್ರ ಯೋಜನೆಯಡಿ ಅಂತರ್ಜಲಕ್ಕೆ ಗಾಳ
-ಪಾ.ಶ್ರೀ.ಅನಂತರಾಮ್
ಕೋಲಾರ: ಅಂತರ್ಜಲ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಗೆ ಕೇಂದ್ರ ಸರ್ಕಾರ ನೀಡಿರುವ ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮ ವರದಾನವಾಗಿದೆ.
ಕರ್ನಾಟಕದ 15 ಅಂತರ್ಜಲ ಅತಿ ಶೋಷಿತ ಮತ್ತು ನೀರಿನ ಗುಣಮಟ್ಟದ ತೊಂದರೆ ಇರುವ ಬ್ಲಾಕ್‌ಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪೈಲಟ್ ಯೋಜನೆ ಜಾರಿಗೊಳಿಸಿದ್ದು ಈ ಪೈಕಿ ಮಳೆಯಾಧಾರಿತ ಮುಳಬಾಗಿಲು ತಾಲೂಕು ಸಹ ಒಂದಾಗಿದೆ.
ರಾಜ್ಯ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು ಸುಮಾರು 14 ಕೋಟಿ ರು.ವೆಚ್ಚದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಯೋಜನೆಗೆ ಆಪ್ರೋ ಸ್ವಯಂ ಸೇವಾ ಸಂಸ್ಥೆಯು ತಾಂತ್ರಿಕ ಸಲಹೆ ನೀಡುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಮುಳಬಾಗಿಲು ತಾಲೂಕಿನ 30 ಗ್ರಾಮ ಪಂಚಾಯಿತಿಗಳಿಗೆ ಸೇರಿದ ಆಯ್ದ ಗ್ರಾಮಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಆಪ್ರೋ ಸ್ವಯಂ ಸೇವಾ ಸಂಸ್ಥೆಯು ದೊಡ್ಡ ಸಾಹಸಕ್ಕೆ ಕೈ ಹಾಕಿದೆ.
ಚೆಕ್ ಡ್ಯಾಂ ನಿರ್ಮಾಣ ಅಂತರ್ಜಲ ಮಟ್ಟ ಹೆಚ್ಚಾಳಕ್ಕೆ ತಂತ್ರಜ್ಞಾನ ಅಳವಡಿಸಿ ಕೊಳವೆ ಬಾವಿ ಹಾಗೂ ಇಂಗು ಗುಂಡಿಗಳ ನಿರ್ಮಾಣ ಕಾಮಗಾರಿಗಳು ಶರವೇಗದಲ್ಲಿ ನಡೆಸಲಾಗುತ್ತಿದೆ.
ಪೈಲಟ್ ಯೋಜನೆ ಟೀಮ್‌ಲೀಡರ್ ಎಂ.ಎಸ್.ರವಿ ಪ್ರಕಾಶ್ ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳಿಂದಾಗುವ ಪ್ರಯೋಜನ ತಿಳಿಸಲು ಮಂಗಳವಾರ ಪತ್ರಕರ್ತರನ್ನು ಯೋಜನೆ ಅನುಷ್ಠಾನದಲ್ಲಿರುವ ಮುಳಬಾಗಿಲು ತಾಲೂಕಿನ ತಾಯಲೂರು,ಅಂಬಿಕಲ್ಲು, ಹೆಬ್ಬಣಿ, ಊರುಕುಂಟೆ ಮಿಟ್ಟೂರು ಮತ್ತು ತಾಯಾಲೂರು ಗ್ರಾಮಗಳಿಗೆ ಕರೆದೊಯ್ದು ಕಾರ್ಯಕ್ರಮಗಳ ಪರಿಚಯ ಮಾಡಿಸಿದರು.
ಪ್ರಾಯೋಗಿಕವಾಗಿ 5 ಗ್ರಾಪಂಗಳ ವ್ಯಾಪ್ತಿಯಲ್ಲಿ ಚೆಕ್ ಡ್ಯಾಮ್, ಇಂಗು ಗುಂಡಿ ನಿರ್ಮಾಣ, ಆಬ್ಸರ್‌ವೇಷನ್ ಕೊಳವೆ ಬಾವಿಗಳನ್ನು ತೋರಿಸಿ ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೆ ಅಗತ್ಯವಾದಷ್ಟು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೈಲಟ್ ಯೋಜನೆ ಅನುಷ್ಠಾನಕ್ಕೆ ಅವಕಾಶ ಮಾಡಿದೆ. ಶೇಕಡ 30ರಷ್ಟು ನೀರು ಸಂಗ್ರಹಣೆ ಹಾಗೂ ಶೇಕಡ 20ರಷ್ಟು ಗುಣಮಟ್ಟದ ನೀರವನ್ನು ಜನರಿಗೆ ನೀಡಬೇಕೆಂಬುದು ಯೋಜನೆಯ ಉದ್ದೇಶವಾಗಿದ್ದು ನೀರಿನ ಮೂಲಗಳ ಸುಸ್ಥಿರತೆಯನ್ನು ನೆರೇಗಾ, ವಾಟರ್‌ಶೆಡ್ ಹಾಗೂ ಗ್ರಾಮೀಣ ನೀರು ಸರಬರಾಜು ಯೋಜನೆಗಳ ಕಾರ್ಯಕ್ರಮಗಳ ಮೂಲಕ ಕಾಪಾಡಿಕೊಳ್ಳುವುದು ಸೇರಿದಂತೆ ಈ ಯೋಜನೆಗಳನ್ನು ಗ್ರಾಪಂ ನೇತೃತ್ವದಲ್ಲಿ ಹಾಗೂ ಜನರ ಸಹಭಾಗಿತ್ವದಿಂದ ಸಮಗ್ರ ನಿರ್ವಹಣೆ ಮಾಡಿ ಕುಡಿಯುವ ನೀರಿಗೆ ಭದ್ರತಾ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು. ಐದು ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಪಂಚಾಯಿತಿಗೆ 2 ರಂತೆ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ಪ್ರತಿ ಚೆಕ್ ಡ್ಯಾಂಗೆ ಸುಮಾರು 5 ಲಕ್ಷ ರು. ವೆಚ್ಚ ಮಾಡಲಾಗಿದೆ,ಸುಮಾರು 186 ಕೊಳವೆ ಬಾವಿಗಳಿಗೆ ಹೊಸ ತತಂತ್ರಜ್ಞಾನ ಅಳವಡಿಸಲಾಗಿದ್ದು, ಇದರಲ್ಲಿ ನೀರಿನ ಮಟ್ಟ, ಪ್ರತಿ ಸೆಕೆಂಡಿಗೆ ಲಭ್ಯವಾಗುವ ನೀರಿನ ಪ್ರಾಮಾಣ, ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟದ ವಿವರ ಇತ್ಯಾದಿ ಲಭ್ಯವಾಗುವುದರಿಂದ ಅಭಾವ ಉಂಟಾದಾಗ ನೀರಿನ ನಿರ್ವಹಣೆ ಹೇಗೆ ಮಾಡಬಹುದೆಂದು ತಿಳಿಯಲು ಸಹಾಯವಾಗಲಿದೆ ಎಂದರು. ಈ ಪದ್ದತಿಯನ್ನು ಈಗಾಗಲೇ ಚಿಕ್ಕಮಗಳೂರು, ಉಡುಪಿಯಲ್ಲಿ ಅಳವಡಿಸಿದ್ದು ಇದೇ ಮಾದರಿಯಲ್ಲಿ ಕೊಳವೆ ಬಾವಿಗಳಿಗೆ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಿಸಲು ಇಂಗು ಗುಡಿಗಳನ್ನು ನಿರ್ಮಿಸಿದ್ದು, ಈ ಮಾದರಿಯನ್ನು ಮುಳಬಾಗಲು ತಾಲೂಕಿನ 5 ಗ್ರಾಮಗಳಲ್ಲಿ ಅಳವಡಿಸಲಾಗುತ್ತಿದೆ ಎಂದರು.
ಟಿ.ಅಗರದಲ್ಲಿ ಇಂಗು ಕೆರೆ ನಿರ್ಮಾಣ ಮಾಡಲಾಗುತ್ತಿದೆ. ಸುತ್ತಮುತ್ತಲ ಪ್ರದೇಶದಿಂದ ಹರಿದು ಬರುವ ಮಳೆ ನೀರನ್ನು ಇಲ್ಲಿ ಶೇಖರಣೆ ಮಾಡಲು ಗುಂಡಿಗಳ ನಿರ್ಮಾಣ ಮಾಡುವುದರಿಂದ ಕೊಳವೆ ಬಾವಿಗಳು, ತೆರದ ಬಾವಿಗಳು ಪುನಶ್ಚೇತನ ಹೊಂದಲು ಸಹಾಯವಾಗಲಿದೆ ಎಂದು ಹೇಳಿದರು.
ಎಮ್ಮೆನತ್ತ ಗ್ರಾಮದಲ್ಲಿ ಸುಮಾರು 5 ಲಕ್ಷ ರು.ಗಳ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದ್ದು ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರು ಸಂಗ್ರಹಣೆ ಮಾಡಲು ಅನುಕೂಲವಾಗಿದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಪ್ರಯೋಜನವಾಗುತ್ತಿದೆ ಎಂದು ಚೆಕ್ ಡ್ಯಾಂ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು.