ಗ್ರಾಮ ಠಾಣಾ ಜಮೀನು ಸರ್ವೇಗೆ ವಿರೋಧ
ಚಿಂತಾಮಣಿ: ಜೋಗ್ಯಾನಹಳ್ಳಿ ಗ್ರಾಮ ಠಾಣಾ ಜಮೀನು ಅಳತೆ ಕಾರ್ಯಕ್ಕೆ ಪರ ವಿರೋಧದಿಂದ ಗುಂಪು ಜಮಾವಣೆಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಜಮೀನಿಗೆ ಹದ್ದುಬಸ್ತು ಕಲ್ಲುಗಳನ್ನು ಹಾಕಲಾಯಿತು.
ತಾಲೂಕಿನ ಮುರುಗಮಲ್ಲ ಹೋಬಳಿ ಜೋಗ್ಯಾನಹಳ್ಳಿ ಗ್ರಾಮದ ಸರ್ವೇ ನಂ.24 ರ ಗ್ರಾಮಠಾಣೆ ಜಮೀನು ಅಳತೆ ಮಾಡುವ ಕಾರ್ಯ ಸೋಮವಾರ 11 ಗಂಟೆಗೆ ನಿಗದಿ ಪಡಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷರಾದ ಗೌರಮ್ಮನಾಗೇಶ್, ಉಪಾಧ್ಯಕ್ಷ ನಾಗರಾಜ್, ತಾಲೂಕು ಪಂಚಾಯ್ತಿ ವ್ಯವಸ್ಥಾಪಕ ಕೃಷ್ಣಪ್ಪ ಹಾಗೂ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಕಾರ್ಯದರ್ಶಿ ಮತ್ತು ಸರ್ವೇ ಅಧಿಕಾರಿಗಳು ಗ್ರಾಮ ಠಾಣಾ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಜೆಸಿಬಿ ಯಂತ್ರ,ಕೂಲಿಗಾರರು ಹದ್ದುಬಸ್ತು ಕಲ್ಲುಗಳನ್ನು ನಾಟಿಕೊಂಡು ಮುಂದಾದಾಗ ಹಲವರು ಗುಂಪು ಕಟ್ಟಿಕೊಂಡು ಪರ-ವಿರೋಧ ಉಂಟಾಗಿ ಮಾತಿನ ಚಕಮುಖಿಗೆ ಮುಂದಾದಾಗ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಗುಂಪು ಸೇರದಂತೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗದಂತೆ ಸರ್ವೇ ಕಾರ್ಯವನ್ನು ಸುಗಮವಾಗಿ ನಡೆಸಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಜೋಗ್ಯಾನಹಳ್ಳಿ ಗ್ರಾಮದ ಸರ್ವೇ ನಂ.24 ರ ಗ್ರಾಮಠಾಣಾ ಜಮೀನಿನ ಅಳತೆ ಮಾಡುವ ಕಾರ್ಯಕ್ಕೆ ಹಲವು ಬಾರಿ ದಿನಾಂಕ ನಿಗದಿ ಪಡಿಸಿದರೂ ರಾಜಕೀಯದಿಂದ ಪರ-ವಿರೋಧ ಉಂಟಾಗಿ ರಾಜಕೀಯ ಮುಖಂಡರ ಪ್ರತಿಷ್ಠೆಯಾಗಿದ್ದ ಈ ಕಾರ್ಯಕ್ಕೆ ಹಲವು ಅಡ್ಡಿ ಆತಂಕ ಎದುರಾಗಬಹುದೆಂಬ ಗುಪ್ತಾಚಾರದ ಮಾಹಿತಿ ಮೇರೆಗೆ ಡಿವೈಎಸ್ಪಿ ಸಣ್ಣತಿಮ್ಮಪ್ಪ ಮಾರ್ಗದರ್ಶನದಲ್ಲಿ ಚಿಂತಾಮಣಿ ನಗರ,ಗ್ರಾಮಾಂತರ ತಾಲೂಕಿನ ಕೆಂಚಾರ್ಲಹಳ್ಳಿ,ಬಟ್ಲಹಳ್ಳಿ,ಶಿಡ್ಲಘಟ್ಟ ತಾ. ಗ್ರಾಮಾಂತರ ಹಾಗೂ ಪಟ್ಟಣ ಮತ್ತು ದಿಬ್ಬೂರಹಳ್ಳಿ ಠಾಣೆಗಳಿಂದ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.
ಸ್ಥಳದಲ್ಲಿ ವೃತ್ತ ನಿರೀಕ್ಷಕರಾದ ನಂಜಪ್ಪ,ವೆಂಕಟೇಶಮೂರ್ತಿ, ಎಸ್ಐ ರಾಘವೇಂದ್ರ,ಪ್ರವೀಣಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.