ಎನ್.ಎಚ್.7 ಪರಿಹಾರ ವಿವಾದ: ಇಂದು ಸಭೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ವಿವಾದವನ್ನುಂಟು ಮಾಡಿರುವ ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ಕೃಷಿ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರವನ್ನು ಒದಗಿಸುವ ಸಲುವಾಗಿ ಚರ್ಚಿಸಲು ಜಿಲ್ಲಾಡಳಿತ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿದೆ.
ಈಗಾಗಲೇ ಜಿಲ್ಲಾಧಿಕಾರಿಗಳು ತಮ್ಮ ಗಮನ ಸೆಳೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೀಡಿದ ಸೂಚನೆಯಂತೆ ಪ್ರಾದೇಶಿಕ ಆಯುಕ್ತರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿ ಮತ್ತು ಮಾಜಿ ಶಾಸಕರು, ರೈತ ಮುಖಂಡರನ್ನು ಒಳಗೊಂಡಂತೆ ಭೂ ಪರಿಹಾರ ವಿವಾದದ ಚರ್ಚೆ ಸಭೆಯನ್ನು ಡಿ.20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಲ್ಪ ಪರಿಹಾರ, ರೈತರ ಅಸಮಾಧಾನ: 2007 ರಲ್ಲಿ ಚಿಕ್ಕಬಳ್ಳಾಪುರ, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲೂಕಿನ ರೈತರು ರಾಷ್ಟ್ರೀಯ ಹೆದ್ದಾರಿ 7 ರ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ತಮ್ಮ ಕೃಷಿ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ವಾಧೀನಕ್ಕೆ ಬಿಟ್ಟು ಕೊಟ್ಟಿದ್ದರು. ಸುಮಾರು 570 ರೈತರಲ್ಲಿ ಮೊದಲು ಕೆಲವರಿಗೆ ಪರಿಹಾರವನ್ನು ವಿತರಣೆ ಮಾಡಲಾಯಿತಾದರೂ ಅಲ್ಪ ಹಣದಿಂದ ಅನೇಕ ಮಂದಿ ರೈತರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಕೋಟ್ಯಂತರ ರು. ಬೆಲೆ ಬಾಳುವ ಎಕರೆ ಭೂಮಿಗೆ ಸಾವಿರಾರು ರು. ಗಳಲ್ಲಿ ಪರಿಹಾರವನ್ನು ನೀಡಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿ, ಮಾರುಕಟ್ಟೆ ಬೆಲೆಯನ್ನು ನೋಡಿಕೊಂಡು ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ್ದರು.
ಇದರ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಅಡ್ಡಿ ಆತಂಕಗಳು ಎದುರಾಗಿದ್ದು ಜಿಲ್ಲಾಡಳಿತ ಮತ್ತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಿಂದೆ ಸಭೆಯನ್ನು ನಡೆಸಿ ರೈತರನ್ನು ಸಮಾಧಾನಪಡಿಸಿದ್ದರು. ಇದಕ್ಕೆ ತಕ್ಕಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಹ ತಲೆಯಾಡಿಸಿದ್ದರಿಂದ ರೈತರು ಶಾಂತರಾಗಿ ಕಾಮಗಾರಿಯನ್ನು ನಡೆಯಲು ಅನುವು ಮಾಡಿಕೊಟ್ಟಿದ್ದರು.ಅದರಂತೆ ಸುಸಜ್ಜಿತ ರಸ್ತೆ ನಿರ್ಮಾಣವಾಯಿತಾದರೂ ಸಹ ಇಲ್ಲಿಯವರೆಗೂ ರೈತರಿಗೆ ಸಮರ್ಪಕವಾಗಿ ಪರಿಹಾರ ಮಾತ್ರ ಸಿಕ್ಕಿಲ್ಲ.ಇದು ಜಿಲ್ಲೆಯಲ್ಲಿ ವಿವಾದದ ಕಿಡಿಯನ್ನು ಹೊತ್ತಿಸಿದೆ.
ಜಿಲ್ಲಾಧಿಕಾರಿ ಭರವಸೆ: ತ್ವರಿತ ಪರಿಹಾರ ವಿತರಣೆಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ,ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ,ದೇವನಹಳ್ಳಿ ವಾಹನ ಸಂಚಾರ ಕರ ವಸೂಲಿ ಗೇಟ್ ಬಂದ್,ಮುಖ್ಯಮಂತ್ರಿ, ಸಚಿವರುಗಳಿಗೆ ಮನವಿ, ಕೆಲ ಜನಪ್ರತಿನಿಧಿಗಳಿಗೆ ಘೇರಾವ್ ಸೇರಿದಂತೆ ಪ್ರತಿಭಟನೆ,ಧರಣಿ ಸೇರಿದಂತೆ ಹೋರಾಟಗಳು ನಾನಾ ರೀತಿಯಲ್ಲಿ ನಡೆದವು. ಇತ್ತೀಚೆಗೆ ಜಿಲ್ಲಾಧಿಕಾರಿ ಆರ್.ವಿಶಾಲ್ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇತ್ಯರ್ಥಪಡಿಸಲು ಮುಂದಾಗಿದ್ದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಹಕರಿಸಿರಲಿಲ್ಲ.
ಎಕರೆಗೆ ತಲಾ 20 ಲಕ್ಷ ರು. ನೀಡುವಂತೆ ಡಿಸಿ ಕೊಟ್ಟಿರುವ ಆದೇಶವನ್ನು ಪಾಲಿಸಲಾಗುವುದಿಲ್ಲ. ಅಲ್ಲದೇ ಜಿಲ್ಲಾಡಳಿತ ಕರೆಯುವ ಸಭೆಗೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದು ರೈತರು ಆಕ್ರೋಶಗೊಳ್ಳುವಂತೆ ಮಾಡಿತ್ತು.ಆ ನಂತರ ಜಿಲ್ಲಾಧಿಕಾರಿ ವಿಶಾಲ್ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ಗಮನ ಸೆಳೆದಿದ್ದು ಈ ಹಿನ್ನೆಲೆಯಲ್ಲಿ ಡಿ.20 ರಂದು ಬೆಂಗಳೂರಿನಲ್ಲಿ ಸಭೆ ಏರ್ಪಡಿಸಿದೆ.
ಮುಂದಿನ ನಡೆ ಬಗ್ಗೆ ತೀರ್ಮಾನ: ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ,ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಸೇರಿದಂತೆ ಮೂರ್ನಾಲ್ಕು ರೈತರು ಸಭೆಯಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ರೈತರು ಮಾಹಿತಿ ನೀಡಿದರು. ಅಗತ್ಯವಿರುವ ದಾಖಲೆಗಳನ್ನು ತಂದು ಸವಿವರವಾಗಿ ತಮ್ಮ ಜೊತೆ ಸಮಸ್ಯೆಗಳನ್ನು ಹೇಳಿಕೊಳ್ಳಬೇಕೆಂತಲೂ ಅವರು ತಿಳಿಸಿದ್ದಾರೆ ಎನ್ನಲಾಗಿದ್ದು ಸಭೆಯಲ್ಲಿ ನಡೆಯುವ ಚರ್ಚೆಯ ನಂತರ ತಮ್ಮ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ರೈತರು ತಿಳಿಸಿದ್ದಾರೆ. ಸಭೆಯನ್ನು ಪದೇ ಪದೇ ಕರೆಯುವುದಕ್ಕಿಂತ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ಪ್ರಸ್ತುತ ಭೂಮಿಯ ಬೆಲೆ ಗಗನಕ್ಕೇರುತ್ತಿದ್ದು ತ್ವರಿತವಾಗಿ ಪರಿಹಾರವನ್ನು ನೀಡದಿದ್ದರೆ ಭೂಮಿಯನ್ನು ಕೊಂಡುಕೊಳ್ಳಲು ರೈತರಿಗೆ ಸಾಧ್ಯವಾಗುವುದಿಲ್ಲ. ಪ್ರಸ್ತುತ ನೀಡುತ್ತಿರುವ ಪರಿಹಾರವೇ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.
ಗುರುವಾರ ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಭೈರೇಗೌಡ, ಮಳ್ಳೂರು ಹರೀಶ್, ನಾರಾಯಣಸ್ವಾಮಿ, ನಾಗರಾಜ್, ಆನಂದ್ಸೇರಿದಂತೆ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಭೂ ಪರಿಹಾರವನ್ನು ಒದಗಿಸುವ ಸಲುವಾಗಿ ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಡಿ.20 ರಂದು ಸಭೆ ನಡೆಸಿ ಚರ್ಚಿಸಲಾಗುತ್ತಿದೆ. ಸಭೆಯ ನಂತರ ಮುಂದೆ ಕ್ರಮ ಕೈಗೊಳ್ಳಬೇಕಾಗಿರುವುದರ ಬಗ್ಗೆ ತಿಳಿದು ಬರಲಿದೆ.
-ಡಾ. ಆರ್.ವಿಶಾಲ್, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ