ಪರೀಕ್ಷಾ ಭಯ ನಿವಾರಿಸಲು ಶಿಬಿರ
ಚಿಕ್ಕಬಳ್ಳಾಪುರ: ಮಾರ್ಚ್ ತಿಂಗಳಲ್ಲಿ ನಡೆಯುವ 10 ನೇ ತರಗತಿ ಪರೀಕ್ಷೆಗೆ ಮಕ್ಕಳನ್ನು ಮಾನಸಿಕ ಮತ್ತು ದೈಹಿಕವಾಗಿ ಸಿದ್ಧಗೊಳಿಸುವುದರ ಜತೆಗೆ ಪರೀಕ್ಷಾ ಭಯವನ್ನು ದೂರ ಮಾಡುವ ಸಲುವಾಗಿ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಟ್ರೈಯನ್ ಯುವರ್ ಬ್ರೈನ್ ಕ್ರಿಯೇಟರ್ ಮೆಮೋರಿ ಸ್ಟಡಿ ಸ್ಕಿಲ್ಸ್ ಡೆವೆಲಪ್‌ಮೆಂಟ್ ಶಿಬಿರ ನಡೆಯಿತು.
ತರಬೇತುದಾರ ವೈ.ಎನ್. ಶ್ರೀನಿವಾಸ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳೇ ಮಾನದಂಡವಾಗಿ ನೋಡುತ್ತಿರುವ ಇಂತಹ ಸನ್ನಿವೇಶದಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಬಹಳ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ. ಜ್ಞಾಪಕ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯ ಸಕಾರಾತ್ಮಕ ಮನೋಭಾವದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಕಾರಣ. ಕಳೆದ 10 ವರ್ಷಗಳ ಹಿಂದೆ ಪ್ರಪಂಚದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯರು ಬುದ್ದಿವಂತಿಕೆಯಲ್ಲಿ 3 ನೇ ಸ್ಥಾನದಲ್ಲಿ ಹಾಗೂ ಸೃಜನಾತ್ಮಕ ಜ್ಞಾಪಕ ಶಕ್ತಿಯಲ್ಲಿ ಮೊದಲನೇ ಸ್ಥಾನದಲ್ಲಿ ಎಂದು ವರದಿಗಳು ತಿಳಿಸಿದ್ದು ಪ್ರತಿಯೊಬ್ಬರ ಮೆದುಳಿನಲ್ಲಿ 100 ಬಿಲಿಯನ್ ನ್ಯೂರಾನ್ ಗಳಿರುತ್ತವೆ. ಪ್ರತಿ ನ್ಯೂರಾನ್ ಒಂದು ಚಿಕ್ಕ ಗಣಕ ಯಂತ್ರಕ್ಕೆ ಸಮನಾಗಿರುತ್ತದೆ.ಇತ್ತೀಚೆಗೆ ಸಂಶೋಧನೆಗಳಿಂದ ತಿಳಿದು ಬಂದಿರುವುದೆನೆಂದರೆ ಗಣಕ ಯಂತ್ರ ಸಾಮರ್ಥ್ಯವುಳ್ಳ ಮೆದುಳಿಗೆ ಶೇ.1 ರಷ್ಟು ಸಹ ಶೇ.99.99 ರಷ್ಟನ್ನು ಜನ ತಮ್ಮ ಜೀವಿತಾವಧಿಯಲ್ಲಿ ಉಪಯೋಗಿಸಿಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ ಎಂದರು.
ನಂತರ ವಿದ್ಯಾರ್ಥಿಗಳೊಡನೆ ಸಮಾಲೋಚಿಸಿ ಕಲಿಕಾ ವಿಷಯದಲ್ಲಿ ಮೆದುಳು ಯಾವ ರೀತಿಯಲ್ಲಿ ಜ್‌ಞಾಪಕದಲ್ಲಿರಿಸಿಕೊಳ್ಳುತ್ತದೆ. ಕಲಿತ ವಿಷಯಗಳನ್ನು ಪುನರ್ ಮನನ ಮಾಡಿಕೊಳ್ಳಲು ಇರುವ ವೈಜ್ಞಾನಿಕ ಮಾರ್ಗಗಳು ಹಾಗೂ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷೆಯನ್ನು ಸಕಾರಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳುವ ಹಲವು ಮಾರ್ಗಗಳನ್ನು ಹಾಗೂ ಸ್ಟಡಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಪಂಚಗಿರಿ ಬೋಧನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾಮಕರಂದಂ ಮಾತನಾಡಿ, ವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆಗೆ ಸಿದ್ದರಾದರೆ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ ಎಂದು ತಿಳಿಸಿದರು. 10 ನೇ ತರಗತಿಯ ಮುಖ್ಯ ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸಲು ಹಾಗೂ ಪರೀಕ್ಷೆಗೆ ಮಕ್ಕಳು ಯಾವ ರೀತಿ ಸಿದ್ದರಾಗಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಒಳ್ಳೆಯ ಫಲಿತಾಂಶ ಬರುತ್ತಿದೆ.ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಲೂ ಈ ಕಾರ್ಯಕ್ರಮ ಉತ್ತಮ ಮಾರ್ಗಸೂಚಿಯಾಗಿದೆ ಎಂದರು. ಶಿಕ್ಷಕ ಆನಂದ್, ಡಿ.ವಿ.ಮುನಿರಾಜು, ಜಿ. ನಾಗಮ್ಮ ಮುಂತಾದವರಿದ್ದರು.