ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಯಾಜಿಂಕೆಯಾಗಿರುವ ವಿದ್ಯುತ್

Srinivasa Murthy VN
Updated On : 20 Dec 2013, 12:12 pm

-ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ:
ಕಳೆದ ಐದಾರು ದಿನಗಳಿಂದಲೂ ತಾಲೂಕು ವ್ಯಾಪ್ತಿಯಲ್ಲಿ ಅರ್ಧ ಗಂಟೆ ಸಹ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ಸಾರ್ವಜನಿಕರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆ ಮುಂದಿನ ದಿನಗಳಲ್ಲೂ ಮುಂದುವರೆದರೆ ಉಗ್ರ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ ಸಂದೇಶವನ್ನು ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ.
ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.ಆಗ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಕೈಗೊಂಡು ನಾಡಿನ ರೈತರಿಗೆ ಪುಕ್ಕಟೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಭರವಸೆ ಕೊಟ್ಟ ಸರ್ಕಾರಕ್ಕೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕೆ ವ್ಯಕ್ತಪಡಿಸಿದ್ದರು.
ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿರುವ ಈ ಸಂದರ್ಭದಲ್ಲೂ ವಿದ್ಯುತ್ ಸಮಸ್ಯೆ ತೀವ್ರ ಬಿಗಡಾಯಿಸಿರುವುದು ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿದೆ.
ಇದೆಂತಹ ಸರಬರಾಜು: ಮೊದಲು ಬೆಳಿಗ್ಗೆ 5.30 ಕ್ಕೆ ಕರೆಂಟ್ ಕಟ್. ಮತ್ತೆ 6 ಗಂಟೆಗೆ ಬರುತ್ತದೆಯಾದರೂ 6.30 ಗೆ ಇರುವುದಿಲ್ಲ. ಆ ನಂತರ ಮಧ್ಯಾಹ್ಮ 11 ಗಂಟೆಗೆ ಬಂದರೆ, ಕೇವಲ 15 ನಿಮಿಷದಲ್ಲಿ ಮಾಯವಾಗಿ ಬಿಡುತ್ತದೆ. ಮತ್ತೆ 4 ಗಂಟೆಗೆ ಬಂದು ಅರ್ಧ ಗಂಟೆ ಸಮಯ ಕಳೆಯುವಷ್ಟರಲ್ಲಿ ಹೋಗುತ್ತದೆ. ಆ ನಂತರ ಬರುವುದು 8 ಗಂಟೆಯ ಮೇಲೆ.
ಅಂದ್ರೆ ದಿನದ 24 ಗಂಟೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಇರುವುದಿಲ್ಲ. ಇದರ ನಡುವೆ ಒಮ್ಮೆ ವಿದ್ಯುತ್ ಸರಬರಾಜು ಪ್ರಾರಂಭವಾಗುತ್ತಿದ್ದಂತೆ ಎಲ್ಲರೂ ಒಂದು ಸಮನೆ ವಿದ್ಯುತ್ ಬಳಕೆಗೆ ಮುಂದಾಗುವುದರಿಂದ ಒತ್ತಡ ಹೆಚ್ಚಾಗಿ ಅನೇಕ ಬಾರಿ ಟ್ರಿಪ್ ಆಗುತ್ತಿದ್ದು ಬಂದಂತೆ ಬಂದು ಕಣ್ಮರೆಯಾಗುವ ಮಾಯ ಜಿಂಕೆಯಾಗಿದೆ ಕರೆಂಟ್.
ಸಂಜೆಯಾಗುತ್ತಿದ್ದಂತೆ ತಾಲೂಕು ಕಗ್ಗತ್ತಲು:  ಸಂಜೆಯಾಗುತ್ತಿದ್ದಂತೆ ತಾಲೂಕು ಕಗ್ಗತ್ತಲಿನ ಪ್ರದೇಶವಾಗಿ ಪರಿವರ್ತನೆಯಾಗುತ್ತಿದ್ದು ವಿದ್ಯುತ್ ಇರುವುದಕ್ಕಿಂತಕ ಇಲ್ಲದಿರುವ ಸಮಯವೇ ಹೆಚ್ಚಾಗಿದೆ.ಇಷ್ಟೆಲ್ಲದರ ನಡುವೆ ವಿದ್ಯುತ್ ಸಮಸ್ಯೆ ಇರುವುದರ ಬಗ್ಗೆ,ಅಧಿಕೃತ ಲೋಡ್ ಶೆಡ್ಡಿಂಗ್ ಸಮಯದ ಬಗ್ಗೆ ಬೆಸ್ಕಾಂ ಇಲಾಖೆ ಜನರಿಗೆ ಮಾಹಿತಿಯನ್ನೇ ನೀಡುತ್ತಿಲ್ಲ.
ಬೆಸ್ಕಾಂ ಇಲಾಖೆಯ ದೂರು ವಿಭಾಗದ ಕಚೇರಿಯ 08156-70166 ಸಂಖ್ಯೆಗೆ ದೂರವಾಣಿ ಕರೆ ಮಾಡಿ ಸಾರ್ವಜನಿಕರು ಸುಸ್ತಾಗುತ್ತಿದ್ದಾರೆ.ಅಲ್ಲಿಂದ ಇನ್ನೂ ಅರ್ಧ ಗಂಟೆಯಲ್ಲಿ ಬರುತ್ತದೆ ಎಂಬ ಸಿಬ್ಬಂದಿ ಉತ್ತರದಿಂದ ವಿದ್ಯುತ್‌ಗಾಗಿ ಬೇರೆ ಕೆಲಸಗಳನ್ನು ಬಿಟ್ಟು ಕಾದು ಕೂರುತ್ತಿದ್ದಾರೆ.
ಕೆಲವರು ಗೌರಿಬಿದನೂರಿನಿಂದ ಕೋಟ್ಯಂತರ ರು. ವೆಚ್ಚ ಟ್ರಾನ್ಸ್‌ಫಾರ್ಮರ್‌ಗಳನ್ನು ತಂದು ಅಳವಡಿಸಲಾಗುತ್ತಿದೆ.ಈ ಕಾಮಗಾರಿಯಿಂದ ವಿದ್ಯುತ್ ಅಸಮರ್ಪಕವಾಗಿ ಸರಬರಾಜಾಗುತ್ತಿದೆ ಎಂದು ಹೇಳಿದರೆ, ದೊಡ್ಡಬಳ್ಳಾಪುರದಿಂದ ವಿದ್ಯುತ್ ಸರಬರಾಜಾಗುವ ಉಪ ಕೇಂದ್ರದಲ್ಲಿ ಉದ್ಭವವಾಗಿರುವ ಸಮಸ್ಯೆಯಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ನೀಡುತ್ತಿದ್ದು ನಾವೇನು ಮಾಡಲಿಕ್ಕೆ ಆಗುತ್ತಿಲ್ಲ ಎಂಬುದು ಸಿಬ್ಬಂದಿ ಉತ್ತರ.
ಸಾರ್ವಜನಿಕರ ಆಕ್ರೋಶ: ವಿದ್ಯುತ್ ಚೆಲ್ಲಾಟ ಸಾರ್ವಜನಿಕರಿಗೆ ಪ್ರಾಣ ಸಂಕಟವಾಗಿದೆ. ಚಲನಚಿತ್ರ ಮಂದಿರ, ಜೆರಾಕ್ಸ್ ಅಂಗಡಿ, ಪ್ರಿಂಟರ್ಸ್ ಮತ್ತು ಸೈಬರ್ ಸೆಂಟರ್ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿನ ವ್ಯಾಪಾರ ವಹಿವಾಟಿನ ಮೇಲೆ ವಿದ್ಯುತ್ ಸಮಸ್ಯೆ ದೊಡ್ಡ ಹೊಡೆತವನ್ನು ನೀಡುತ್ತಿದೆ.ಯುಪಿಎಸ್‌ಗಳು ಚಾರ್ಜ್ ಆಗುತ್ತಿಲ್ಲ. ಯಂತ್ರಗಳು ಕೆಲಸ ಮಾಡುತ್ತಿಲ್ಲ.
ದುಬಾರಿ ಕರೆಂಟ್ ಬಿಲ್:  ವಿದ್ಯುತ್ ಇಲ್ಲದಿದ್ದರೂ ಬೆಸ್ಕಾಂ ಇಲಾಖೆ ಕಳುಹಿಸುವ ದುಬಾರಿ ಕರೆಂಟ್ ಬಿಲ್ ನಡುವೆ ಜನರೇಟುರುಗಳಿಗೆ ಈಗ ಹೆಚ್ಚಿಗೆ ಹಣ ಸುರಿಯಬೇಕಾಗಿದೆ. ಇದರಿಂದ ಗ್ರಾಹಕರು ಹೆಚ್ಚಿನ ಬೆಲೆಯನ್ನು ತೆರೆಯಬೇಕಾದ ವಾತಾವರಣ ನಿರ್ಮಾಣವಾಗಿದ್ದು ಪ್ರಮುಖವಾಗಿ ಹೋಟೆಲ್‌ಗಳಲ್ಲಿ ಕಂಡು ಬರುತ್ತಿದೆ.
ನಗರ ಪ್ರದೇಶಗಳಲ್ಲಿಯೇ ಪರಿಸ್ಥಿತಿ ಹೀಗಿರಬೇಕಾದರೆ ಹಳ್ಳಿಗಳಲ್ಲಿನ ದುಸ್ಥಿತಿಯ ಬಗ್ಗೆ ಹೇಳುವುದೇ ಬೇಡ.ಹಳ್ಳಿಗಳಲ್ಲಿ ಮೇಣದ ಬತ್ತಿಗಳೇ ಹೆಚ್ಚಿಗೆ ಬಳಕೆಯಾಗುತ್ತಿವೆ. ಮೊದಲೇ ನೀರಾವರಿ ಸೌಲಭ್ಯಗಳಿಂದ ತತ್ತರಿಸುತ್ತಿರುವ ಇಲ್ಲಿ ರೈತರು ತಮ್ಮ ತೋಟಗಳಿಗೆ ಕೊಳವೆ ಬಾವಿಗಳಿಂದ ನೀರನ್ನು ಹರಿಸಲು ಸಾಧ್ಯವಾಗದೇ ಬೆಳೆ ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ.
ಯಲುವಹಳ್ಳಿ, ನಾಯನಹಳ್ಳಿ, ಜಾತವಾರ, ಮಂಡಿಕಲ್, ಪೆರೇಸಂದ್ರ ಸೇರಿದಂತೆ ಅನೇಕ ಕಡೆ ದೂರುಗಳು ಕೇಳಿ ಬರುತ್ತಿದ್ದು ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿರುವ ವಿದ್ಯುತ್ ಚೆಲ್ಲಾಟಕ್ಕೆ ಅಧಿಕಾರಿಗಳೇ ಕೈ ಚೆಲ್ಲಿ ಕುಳಿತುಕೊಂಡಿದ್ದಾರೆ.
ಎಚ್ಚರಿಕೆ ಸಂದೇಶ: ಇನ್ನೂ ಬೇಸಿಗೆಗಾಲ ದೂರವಿದ್ದು ಚಳಿಗಾಲವಾದ ಡಿಸೆಂಬರ್ ತಿಂಗಳಿನಲ್ಲಿಯೇ ಇಂತಹ ವಾತಾವರಣವಿರುವುದಾದರೆ ಮುಂದಿನ ದಿನಗಳಲ್ಲಿನ ಸಮಸ್ಯೆಯ ಬಗ್ಗೆ ಊಹಿಸಿದರೆ ಭಯವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು.ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಸೇರಿದಂತೆ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement