ವಿದ್ಯುತ್ ಸಮಸ್ಯೆ: ಗ್ರಾಹಕರು ಕಂಗಾಲು
-ಪಾ.ಶ್ರೀ. ಅನಂತರಾಮ್
ಕೋಲಾರ: ವಿರೋಧ ಪಕ್ಷದಲ್ಲಿದ್ದಾಗ ಕರೆಂಟ್ ಕಟ್ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದ ಮೇಲೆ ಗ್ರಾಹಕರ ಸಮಸ್ಯೆ ನಿವಾರಣೆ ಮಾಡಬಹುದೆಂದು ನಿರೀಕ್ಷೆ ಹುಸಿಯಾಗಿದೆ.
ಇನ್ನು ಬಿಜೆಪಿ ಸರ್ಕಾರದಿಂದ ವಿದ್ಯುತ್ ಸಮಸ್ಯೆ ಬಗೆಹರಿಸಲು ಸಾಧ್ಯವೇ ಇಲ್ಲವೆಂದು ಹೇಳುತ್ತಿದ್ದ ಜೆಡಿಎಸ್ ಸಹ ಮೌನಕ್ಕೆ ಶರಣಾಗಿದೆ. ವಿರೋಧಿಗಳ ಟೀಕೆಯ ನಡುವೆಯೂ ಐದು ವರ್ಷಗಳ ಆಡಳಿತದ ರುಚಿ ಸವಿದ ಬಿಜೆಪಿಯು ಸಹ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡದಿರುವುದರಿಂದ ಗ್ರಾಹಕರು ತಮ್ಮ ಸಮಸ್ಯೆ ಯಾರ ಬಳಿ ಹೇಳಬೇಕೆಂಬುದು ತಿಳಿಯಲಾಗದೆ ಕಂಗಾಲು ಆಗಿದ್ದಾರೆ.
ಕೆಪಿಟಿಸಿಎಲ್ ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀಡುತ್ತಿರುವ ವಿದ್ಯುತ್ ಪ್ರಮಾಣ ಆನೆ ಹೊಟ್ಟೆಗೆ ಆರು ಕಾಸು ಮಜ್ಜಿಗೆ ಎಂಬಂತಾಗಿದೆ.
ಅಗ್ಗದ ಪ್ರಚಾರಕ್ಕಾಗಿ ನಿರಂತರ ಜ್ಯೋತಿ, ರೈತರಿಗೆ ಉಚಿತ ವಿದ್ಯುತ್ ಹೀಗೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ವಿದ್ಯುತ್ ಉತ್ಪಾದನೆಯ ಕಡೆ ಗಮನ ನೀಡದೆ ಸಂಕಷ್ಟ ಎದುರಿಸುತ್ತಿರುವುದಲ್ಲದೆ ಗ್ರಾಹಕರನ್ನು ಕತ್ತಲೆಯಲ್ಲಿ ಮುಳುಗಿಸಿದೆ.
ಅವೈಜ್ಞಾನಿಕ ಲೋಡ್ ಶೆಡ್ಡಿಂಗ್: ಅವೈಜ್ಞಾನಿಕ ಲೋಡ್ ಶೆಡ್ಡಿಂಗ್, ವೇಳಾಪಟ್ಟಿ ಇಲ್ಲದೆ ಅಸಮರ್ಪಕ ವಿದ್ಯುತ್ ಪೂರೈಕೆ, ಬೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಹಾಗೂ ಅನುಭವ ಇಲ್ಲದ ನೌಕರರ ಕಾರ್ಯವೈಖರಿ ಜೊತೆಗೆ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ.
ಕೋಲಾರ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ, ನೀರಾವರಿ ಸೌಕರ್ಯವಿಲ್ಲದ ಬಯಲು ಸೀಮೆ ಎಂಬುದು ಗೊತ್ತಿದ್ದರೂ ರೈತರು ಭೂಮಿಯಲ್ಲಿ ಲಭ್ಯವಿರುವ ಅಂತರ್ಜಲ ನಂಬಿ ತರಕಾರಿ, ಹೂವು, ಹಣ್ಣು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದ ಭರವಸೆಗಳನ್ನು ನಂಬಿ ಅನೇಕ ಉದ್ಯಮಿಗಳು ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಇನ್ನು ಅನೇಕರು ಉದ್ದಿಮೆ ಪ್ರಾರಂಭಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಕೋಲಾರ ಜಿಲ್ಲೆಯ ವ್ಯಾಪ್ತಿಯ 12 ಬೆಸ್ಕಾಂ ಸ್ಟೇಷನ್ಗಳು ಸೇರಿದಂತೆ ನಗರ, ಪಟ್ಟಣಕ್ಕೆ ಕನಿಷ್ಠ 120 ಮೆಗಾ ವ್ಯಾಟ್ ವಿದ್ಯುತ್ ಬೇಕಾಗಿದ್ದರೂ ಕೆಪಿಟಿಸಿಎಲ್ ನೀಡುತ್ತಿರುವುದು ಕೇವಲ 40 ರಿಂದ 50 ಮಾತ್ರ, ಕೆಲವು ಸಂದರ್ಭಗಳಲ್ಲಿ ಜಿಲ್ಲೆಗೆ 30,32 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡುವುದರಿಂದ ಗ್ರಾಹಕರು ಪರದಾಡುವಂತಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು ವಿದ್ಯುತ್ತಿಗೂ ನಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮೌನಕ್ಕೆ ಶರಣಾಗಿರುವುದು ಗ್ರಾಹಕರ ಸಹನೆಯನ್ನು ಪರೀಕ್ಷಿಸುವಂತಾಗಿದೆ. ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಸರ್ಕಾರ ಕ್ಯಾರೆ ಅನ್ನುತ್ತಿಲ್ಲ. ಇದಕ್ಕೆ ಜನತೆಯಲ್ಲಿನ ಸಂಘಟನೆಯ ಕೊರತೆಯು ಕಾರಣವಾಗಿರುವುದರಿಂದ ಸರ್ಕಾರ ಜನತೆಯ ಗೋಳನ್ನು ದೌರ್ಬಲ್ಯವೆಂದು ಭಾವಿಸಿ ಕುಂಭಕರ್ಣನಂತೆ ನಿದ್ರೆಗೆ ಜಾರಿದೆ.
ತಲೆ ಕಡೆಸಿಕೊಳ್ಳದ ಜನಪ್ರತಿನಿಧಿಗಳು: ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಶಾಸಕರಾಗಲಿ ವಿದ್ಯುತ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ರಾಜ್ಯದಲ್ಲೇ ಸಮಸ್ಯೆ ಇರುವಾಗ ನಾವೇನು ಮಾಡಲು ಸಾಧ್ಯವೆಂದು ಸುಮ್ಮನಾಗಿದ್ದಾರೆ. ಗ್ರಾಹಕರು ಮತ್ತು ಕೆಲ ಸಂಘಟನೆಗಳ ಕೈಗೆ ಸಿಕ್ಕಿ ಬೆಸ್ಕಾಂ ಅಧಿಕಾರಿಗಳು ಸುಸ್ತಾಗಿದ್ದಾರೆ, ಕೆಟ್ಟ ಬೈಗುಳಗಳಿಂದ ಕೋಲಾರ ಖಾಲಿ ಮಾಡಿ ಬೇರೆಡೆಗೆ ಹೋಗಲು ಯತ್ನಿಸುತ್ತಿದ್ದಾರೆ.
ಪ್ರತಿ ಎರಡು ಗಂಟೆಗೆ ಒಮ್ಮೆ ಕನಿಷ್ಠ ಒಂದು ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ, ಕೆಲ ಸಾರಿ ಅರ್ಧಗಂಟೆಗೆ ಒಮ್ಮೆ ಕರೆಂಟ್ ಮಾಡುವುದರಿಂದ ಕೈಗಾರಿಕೆಗಳಲ್ಲಿ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ. ನರಸಾಪುರದಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ಕೈಗಾರಿಕೆಗಳಲ್ಲಿ ಉತ್ಪಾದನೆ ಕುಂಠಿತಗೊಂಡಿದೆ, ಕಾರ್ಮಿಕರು ಕೆಲಸವಿಲ್ಲದೆ ಪ್ರಾಂಗಣದಲ್ಲಿ ಸಹದ್ಯೋಗಿಗಳೊಂದಿಗೆ ಕುಳಿತು ಹರಟೆ ಹೊಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.
ಉದ್ಯಮಿಗಳು ಇತ್ತ ಲೇಆಫ್ ಘೋಷಣೆ ಮಾಡಲಾಗದೆ, ಅತ್ತ ಕಾರ್ಮಿಕರಿಗೆ ಸಂಬಳಕ್ಕೆ ಬೇಕಾಗುವಷ್ಟು ಉತ್ಪಾದನೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಳಿ ಸಾಕಾಣೆ ಮಾಡುವವರು ಸಹ ಅಸಮರ್ಪಕ ವಿದ್ಯುತ್ ಪೂರೈಯಿಂದಾಗಿ ಲಕ್ಷಾಂತರ ರು. ನಷ್ಟ ಅನುಭವಿಸಿ ಸಾಲದ ಶೂಲಕ್ಕೆ ಸಿಲುಕಿದ್ದಾರೆ. ರೇಷ್ಮೆ ಬೆಳೆಗಾರರು, ರೇಷ್ಮೆ ನೂಲು ಬಿಚಾವಣೆ ಮಾಡುವವರು, ಗಿರಣಿ ಮಾಲೀಕರು ವಿದ್ಯುತ್ಗಾಗಿ ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ.
ಅಧಿಕಾರಿಗಳ ಅಳಲು: ಉಡುಪಿಯಲ್ಲಿ ಎರಡು ಘಟಕ ಕೆಟ್ಟಿದೆ, ರಾಯಚೂರಿನಲ್ಲಿ ಕದ್ದಿಲ ಅಭಾವದಿಂದ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ಒರಿಸ್ಸಾದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ 2500 ಮೆಗಾವ್ಯಾಟ್ ವಿದ್ಯುತ್ ಕೊರತೆಯಿಂದಾಗಿ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದ್ದು ಕೆಪಿಟಿಸಿಎಲ್ ನೀಡುವ ವಿದ್ಯುತ್ನಲ್ಲಿ ಇಡೀ ಕೋಲಾರ ಜಿಲ್ಲೆಗೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಾರದಿಂದ ಕತ್ತಲಲ್ಲಿ ಮುಳುಗಿದ ಬಂಗಾರಪೇಟೆ ತಾ.
ಬಂಗಾರಪೇಟೆ: ಪಟ್ಟಣ ಸೇರಿದಂತೆ ಕ್ಷೇತ್ರ ಸಂಪೂರ್ಣ ವಾರದಿಂದ ಕತ್ತಲಲ್ಲಿ ಮುಳುಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಬೆಸ್ಕಾಂ ಕಚೇರಿ ಮುಂದೆ ಮೇಣದ ಬತ್ತಿ ಹಚ್ಚುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿ ಎಲ್ಲರ ಗಮನ ಸೆಳೆದರು.
ಕಳೆದ ವಾರದಿಂದ ಕ್ಷೇತ್ರದಲ್ಲಿ 24ಗಂಟೆಯಲ್ಲಿ ವಿದ್ಯುತ್ ಇರುವುದು ಕೇವಲ 4ಗಂಟೆ ಮಾತ್ರ ಉಳಿದ 20ಗಂಟೆ ಪಟ್ಟಣ ಕತ್ತಲಲ್ಲಿ ಮುಳುಗಿದೆ. ಇದರಿಂದ ನಾನಾ ಸಂಕಷ್ಟಗಳು ಜನರು ಎದುರಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಓದಲು ಆಗುತ್ತಿಲ್ಲ. ಸಮಯಕ್ಕೆ ಶಾಲೆಗಳಿಗೂ ಓಗಲು ಆಗುತ್ತಿಲ್ಲ. ಕುಡಿಯಲು ನೀರಿಗೂ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದೆ ಮೋಟಾರ್ನಿಂದ ಮೇಲೆತ್ತಲೂ ಆಗದೆ ಜನರು ತತ್ತರಿಸಿ ಹೋಗಿದ್ದಾರೆ. ವಿದ್ಯುತ್ ನಂಬಿ ಹಲವು ಮಂದಿ ವ್ಯಾಪಾರಸ್ಥರು ಜೀವನ ನಡೆಸುತ್ತಿದ್ದಾರೆ. ಅವರಿಗೆ ವಿದ್ಯುತ್ ಕೈಕೊಟ್ಟ ಕಾರಣ ಅವರ ವ್ಯಾಪಾರಕ್ಕೂ ಅಡ್ಡಿಯಾಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಜನಸಾಮಾನ್ಯರಿಗೆ ಅನುಕೂಲಗಳ ಬದಲು ಅನಾನುಕೂಲವೇ ಅಧಿಕವಾಗಿದೆ ಎಂದು ಟೀಕಿಸಿದರು.
ಸಮರ್ಪಕವಾಗಿ ವಿದ್ಯುತ್ ಕೊಡಲು ಸಾಧ್ಯವಿಲ್ಲದ ಸರ್ಕಾರ ಬಡವರಿಗೆ ಅನ್ನ ಭಾಗ್ಯ, ಶಾಧಿ ಭಾಗ್ಯ, ಕ್ಷೀರಭಾಗ್ಯದಂತಹ ಭಾಗ್ಯಗಳನ್ನು ಕೊಟ್ಟರೆ ಏನು ಉಪಯೋಗ ಎಂದು ತರಾಟೆಗೆ ತೆಗೆದುಕೊಂಡು ಮೊದಲು ವಿದ್ಯುತ್ ಭಾಗ್ಯ ನೀಡಲಿ ನಂತರ ಇತರೇ ಭಾಗ್ಯಗಳನ್ನು ಒದಗಿಸಲಿ ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಸಹ ಧಿಕ್ಕಾರಗಳನ್ನು ಕೂಗಿ ಮೇಣದ ಬತ್ತಿಗಳನ್ನು ಹಚ್ಚಿ ಪ್ರತಿಭಟಿಸಿ ಬೆಸ್ಕಾಂ ಎಇಇ ಚಲಪತಿ ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದರು. ನಂತರ ಸ್ಥಳಕ್ಕೆ ಬಂದ ಎಇಇ ಚಲಪತಿ ನಮ್ಮ ಕೈಯಲ್ಲಿ ಏನು ಇಲ್ಲ ಜಿಲ್ಲೆಗೆ ರಾಜ್ಯದಿಂದ ಬರಬೇಕಿರುವ ವಿದ್ಯುತ್ ಬರುತ್ತಿಲ್ಲ ಎಂದು ಕೈಚಲ್ಲಿದರು. ವಿದ್ಯುತ್ ಸಮಸ್ಯೆ ಇದ್ದರೆ ವೇಳಾ ಪಟ್ಟ ನಿಗದಿಪಡಿಸಿ ಅರದಂತೆ ಕಡಿತಗೊಳಿಸಿ ಅದು ಬೇಕಾಬಿಟ್ಟಿಯಾಗಿ ಕಡಿತಗೊಳಿಸುವುದರಲ್ಲಿ ಅರ್ಥವಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ನೇತೃತ್ವವನ್ನು ಪುರಸಭೆ ಸದಸ್ಯ ಹಾಗೂ ಬಜರಂಗದಳ ಮುಖಂಡ ಬಿ.ಸಿ.ಶ್ರೀನಿವಾಸಮೂರ್ತಿ, ಮಹೇಶ್, ನಾಗೇಂದ್ರ, ಅರುಣ್, ರಾಮಮೂರ್ತಿ, ಮಾರುತಿರಾಜ್ ವಹಿಸಿದ್ದರು.