'ಸರ್ಕಾರದ ನೀತಿ: ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ'
ಗೌರೀಬಿದನೂರು: ರಾಜ್ಯದಲ್ಲಿ ಸಿಇಟಿ ನೂತನ ಕಾಯಿದೆ ಜಾರಿಗೊಳಿಸಲು ಮುಂದಾಗಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವುದರ ವಿರುದ್ಧ ಎಬಿವಿಪಿ ಪ್ರತಿಭಟನೆ ನಡೆಸಿತು.
ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಮುಖಂಡ ನವೀನ್ಕುಮಾರ್, 2006ರ ಕಾಯಿದೆ ಅನುಷ್ಠಾನ ಗೊಳಿಸಿದರೆ ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಸರ್ಕಾರಿ ಕೋಟಾದಲ್ಲಿ ಸಿಗುವ ಸೀಟುಗಳಿಂದ ವಂಚಿತರಾಗಿ ಖಾಸಗಿ ಕಾಲೇಜುಗಳ ಮೊರೆಹೋಗಿ ಲಕ್ಷಾಂತರ ರು. ಶುಲ್ಕ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 210 ಇಂಜಿನಿಯರಿಂಗ್ ಕಾಲೇಜುಗಳು, 29 ವೈದ್ಯಕೀಯ ಕಾಲೇಜುಗಳಿದ್ದು ಇದರಲ್ಲಿ 5000 ಸೀಟುಗಳಿಗೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಲಿದೆ ಉಳಿದ 75 ಸಾವಿರ ಸೀಟುಗಳಿಗೆ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಸುವುದರಿಂದ ಕಳ್ಳನ ಕೈಗೆ ಕೀಲಿಕೊಟ್ಟಂತೆ ಆಗುತ್ತದೆ. ಇದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದ್ದು ಸಾಮಾಜಿಕ ನ್ಯಾಯ ಕಿತ್ತುಕೊಳ್ಳುವ ಹುನ್ನಾರಕ್ಕೆ ದಾರಿಮಾಡಿಕೊಟ್ಟಂತೆ ಆಗುತ್ತದೆ ಈ ವಿಧ್ಯಾರ್ಥಿ ವಿರೋಧಿ ಕಾಯಿದೆಯನ್ನು ಎ.ಬಿ.ವಿ.ಪಿ ತೀರ್ವವಾಗಿ ಖಂಡಿಸುತ್ತದೆ ಈ ಕಾಯ್ದೆಯನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.