ಕಲಿಕೋತ್ಸವ ಕಾರ್ಯಕ್ರಮ
ಟೇಕಲ್: ಮಕ್ಕಳಲ್ಲಿನ ಕಲಿಕೆ ಹಾಗೂ ಕಲಿಕೆಯ ಖಾತರಿಯನ್ನು ಹಬ್ಬದೋಪಾದಿಯಲ್ಲಿ ಆಚರಿಸುವುದೇ ಕಲಿಕೋತ್ಸವ ಎಂದು ಮಾಲೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಕೆ. ವೆಂಕಟೇಶ್ ತಿಳಿಸಿದರು. ಕೆ.ಜಿ. ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆ.ಜಿ. ಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಾಲೆಯು ಸಮುದಾಯದ ಆಸ್ತಿ ತಮ್ಮ ಮಕ್ಕಳು ಕಲಿಯಲಿ, ಕಲಿತು ಉತ್ತಮ ವ್ಯಕ್ತಿಗಳಾಗಲಿ ಎಂದು ಸಮುದಾಯ ಮಕ್ಕಳನ್ನು ಶಾಲೆಗೆ ಕಳುಹಿಸುತ್ತದೆ ಎಂದು ತಿಳಿಸಿದರು. ಸಿಆರ್ಪಿ ವಿ.ಎಂ. ಮಂಜಪ್ಪ ಮಾತನಾಡಿ, ಕಲಿಕೋತ್ಸವದಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗಗಳಿದ್ದು ಭಾಗವಹಿಸುವವರಿಗೆ, ವಿಜೇತರಿಗೂ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ನೀಡಲಾಗುತ್ತದೆ ಎಂದರು. ಮುಖ್ಯ ಶಿಕ್ಷಕ ಕೆ.ಎಸ್. ವೆಂಕಟೇಶಪ್ಪ, ಎಸ್. ಪ್ರಭಾಕರ್, ಮಲ್ಲಿಕಾರ್ಜ್ಜುನ್, ಸುಬ್ರಮಣಿ, ವೈ.ಕೆ. ರವಿಂದ್ರ ಇದ್ದರು.
ಪಿಂಚಣಿ ಅದಾಲತ್ ಕಾರ್ಯಕ್ರಮ
ಕೆಜಿಎಫ್: ಸರ್ಕಾರದ ವಿವಿಧ ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅರ್ಹಫಲಾನುಭವಿಗಳಿಗೆ ಮುಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋಲಾರ ಉಪ ವಿಭಾಗಾಧಿಕಾರಿ ಮಂಜುನಾಥ್ ಹೇಳಿದರು.ಪಾರಂಡಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಧ್ಯಾ ಸುರಕ್ಷಾ ಯೋಜನೆ, ನಿರ್ಗತಿಕರ ವಿಧವಾ ವೇತನ, ಅಂಗವಿಕಲ ವೇತನ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ ಪಡೆಯಲು ಅರ್ಹಫಲಾನುಭವಿಗಳು ಅರ್ಜಿ ಸಲ್ಲಿಸಿ ತಮ್ಮ ಹಕ್ಕು ಪತ್ರ ಪಡೆಯಲು ಸೂಚಿಸಿದರು. ಶಾಸಕಿ ವೈ. ರಾಮಕ್ಕ ಮಾತನಾಡಿ, ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕಿದೆ ಎಂದರು. ಜಿಪಂ ಸದಸ್ಯ ಆಯಮು, ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಬಂಗಾರಪೇಟೆ ತಹಸೀಲ್ದಾರ್ ಉಷಾ ಮಾತನಾಡಿದರು. ವಿಶೇಷ ತಹಸೀಲ್ದಾರ್ ವೆಂಕಟರಾಮಯ್ಯ ಇದ್ದರು.
ಕ್ಲಸ್ಟರ್ ಮಟ್ಟದ ಕಲಿಕೋತ್ಸವ
ಟೇಕಲ್: ಶಿಕ್ಷಕರ ಪ್ರಗತಿ ಮಕ್ಕಳ ಮೇಲೆ ಯಾವ ರೀತಿ ಪರಿಣಾಮಕಾರಿ ಎಂಬುದು ಕಲಿಕೋತ್ಸವ ಕಾರ್ಯಕ್ರಮದಿಂದ ತಿಳಿಯಬಹುದು ಎಂದು ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಪುಷ್ಪಲತಾ ಅಭಿಪ್ರಾಯಪಟ್ಟರು. ಕಾಲೇಜು ಆವರಣದಲ್ಲಿ ಟೇಕಲ್ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯಪುಸ್ತಕ ಆಧಾರಿತ ಕ್ರಮದಲ್ಲಿ ಈ ಕಲಿಕೋತ್ಸವ ನಡೆಸಲಾಗುತ್ತಿದ್ದು ಗುಣಾತ್ಮಕ ಉತ್ಕೃಷ್ಟ ಕಲಿಕೆಯಿಂದ ಸರ್ಕಾರಿ ಶಾಲೆಗಳನ್ನು ಆಕರ್ಷಿಸುವ ಇಲಾಖೆಯ ವಿನೂತನ ಕಾರ್ಯಕ್ರಮವಾಗಿದೆ ಎಂದರು. ಸಿಆರ್ಪಿ ವೀರಭದ್ರಯ್ಯ ಮಾತನಾಡಿ, ಮಕ್ಕಳ ಕಲಿಕೆಗೆ ಇದು ಪೂರಕವಾಗಿದ್ದು ಶಾಲೆಗಳ ಕಲಿಕಾ ಸಾಧನೆಗಳಿಗೆ ಪಾರದರ್ಶಕತೆ ತರಲು ಮಕ್ಕಳ ಸಾಧನೆ ಸ್ಪಷ್ಟಪಡಿಸಲು ಇದು ಸಹಾಯಕವಾಗುತ್ತದೆ ಎಂದರು. ಎ.ಕೆ. ವೆಂಕಟೇಶ್ ಮಾತನಾಡಿದರು.
ಸೈಕಲ್ ವಿತರಣೆ
ಚಿಂತಾಮಣಿ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆಯಲ್ಲಿ ಶನಿವಾರ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸಮ್ಮುಖದಲ್ಲಿ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮ ನಡೆಯಿತು.
ಪೊಲೀಸ್ ವಾರ್ಷಿಕ ಕ್ರೀಡಾಕೂಟ
ಕೆಜಿಎಫ್; ಪೊಲೀಸರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೋಲಾರದ ಸತ್ರ ನ್ಯಾಯಾಧೀಶ ಎಸ್. ರೇಣುಕಾಪ್ರಸಾದ್ ಅವರು ಹೇಳಿದರು.ಶನಿವಾರ ಕೆಜಿಎಫ್ನ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ 2 ದಿನಗಳ ಕೆಜಿಎಫ್ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಮತ್ತು ಪೊಲೀಸ್ ಮಕ್ಕಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾ ಕೂಟದಲ್ಲಿ ಭಾಗವಹಿಸುವ ಪೊಲೀಸರು ಮತ್ತು ಅವರ ಕುಟುಂಬ ವರ್ಗದವರಿಗೆ ಶುಭ ಕೋರಿದರು. ಈ ವೇಳೆ ಕೆಜಿಎಫ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಮಾದಾಪುರ, ಬಸವರಾಜ್, ಆರ್.ಪಿ. ನಂದೀಶ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಕಟೋಚ್ ಸೆಫಟ್, ಡಿವೈಎಸ್ಪಿ ವಿವೇಕಾನಂದ, ಎಲ್ಲಾ ವೃತ್ತ ನಿರೀಕ್ಷಕರು, ಪಿಎಸ್ಐಗಳು, ಅದಿಕಾರಿಗಳು, ಸಿಬ್ಬಂದಿ ಇದ್ದರು. ಎರಡು ದಿನಗಳ ಕಾಲ ನಡೆಯಲಿರುವ ಪೊಲೀಸ್ ಕ್ರೀಡಾ ಕೂಟದಲ್ಲಿ ಪೊಲೀಸರ ಮಕ್ಕಳಿಂದ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾಲೇಜಿಗೆ ಭೇಟಿ ನೀಡಿದ ವಿದಾನ ಪರಿಷತ್ ಸದಸ್ಯ
ಮಾಲೂರು: ವಿದಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಶನಿವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಶಾಲೆ ಹಾಗೂ ಶಿಕ್ಷಕರ ಸಮಸ್ಯೆ ಅಲಿಸಿದರು. ಈ ಸಂಧರ್ಭದಲ್ಲಿ ಶಾಲೆಯಲ್ಲಿ ಕಂಪ್ಯೋಟರ್ ತರಬೇತಿದಾರರು ಇಲ್ಲದೆ ಕಂಪ್ಯೋಟರ್ ಕೊಠಡಿಯನ್ನು ಮುಚ್ಚಿರುವ ಬಗ್ಗೆ ಮಾಹಿತಿ ಪಡೆದ ವಿಧಾನ ಪರಿಷತ್ ಸದಸ್ಯರು ಮಾತನಾಡಿ, ಮಾಹಿತಿ ಸಿಂಧು ಯೋಜನೆಯಡಿ ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಿಗೆ ಕಂಪ್ಯೋಟರ್ ವಿತರಣೆ ಯೋಜನೆಯೇ ಗೋಲ್ಮಾಲ್ ಆಗಿದ್ದು, ರಾಜ್ಯದ ಯಾವ ಶಾಲೆಗಳಲ್ಲೂ ಒಂದೇ ಒಂದು ಕಂಪ್ಯೋಟರ್ ಕೆಲಸ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ವಿಶೇಷ ಗಮನ ಹರಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಇದೇ ವೇಳೆ ಸಮಸ್ಯೆಗಳನ್ನು ಅರುಹಿದ ಶಿಕ್ಷಕರು ವರ್ಗಾವಣೆ ಕಾಯ್ದೆಯಿಂದ ಅಗುತ್ತಿರುವ ಸಮಸ್ಯೆಗಳನ್ನು ತಿಳಿಸಿದರು.
ಭಗವದ್ಗೀತೆ ಭಾರತೀಯ ಸಮಾಜದ ಅವಿಭಾಜ್ಯ ಅಂಗ
ಮುಳಬಾಗಲು: ಭಗವದ್ಗೀತೆ ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಜೀವನ ನಿರ್ದೇಶಿಸುವ ದಿಕ್ಸೂಚಿ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು. ಪಟ್ಟಣದ ಗೀತಾ ಮಂದಿರದಲ್ಲಿ ಶುಕ್ರವಾರ ಹನುಮಜಯಂತಿ ಪ್ರಯುಕ್ತ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಉದ್ಫಾಟಿ ಮಾತನಾಡಿ, ಭಗವದ್ಗೀತೆ ಪಠಣ ಮಾಡುತ್ತಿರುವುದರಿಂದ ಮನಶಾಂತಿ ದೊರೆಯುವುದು ಎಂದರು. ಅಗರಂ ಶ್ರೀನಿವಾಸ ಆಶ್ರಮದ ನಿಶ್ರೇಯಸಾನಂದ ಸ್ವಾಮೀಜಿ ಆಶೀವಾರ್ಚನ ನೀಡಿದರು. ವಿವಿಧ ರಂಗಗಳಲ್ಲಿ ದುಡಿದ ಕೆ. ಪ್ರಕಾಶ್, ನಾಗರಾಜ್,ನಾಗೇಶ್ ಬಾಬು, ಜಮ್ಮನಹಳ್ಳಿ ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಆರನೇ ತರಗತಿಯಿಂದ ಪಿಯುಸಿ ವರೆಗೂ ವಿದ್ಯಾರ್ಥಿಗಳಿಗೆ ಭಗವದ್ಗೀತೆ ರಸಪ್ರಶ್ನೆ ಪ್ರಬಂದ, ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿ. ರಾಮಲಿಂಗಾರೆಡ್ಡಿ, ಆರ್.ಎಸ್. ಕೃಷ್ಣಯ್ಯಶೆಟ್ಟಿ, ಚಿಕ್ಕರೆಡ್ಡಪ್ಪಶೆಟ್ಟಿ, ಮಾಣೆಕ್ಯಂ, ಪ್ರಭಾಕರ್, ಜಗಮೋಹನ್ರೆಡ್ಡಿ, ಯಾಮಣ್ಣ, ಸೋಮಪ್ಪ ಇದ್ದರು.
'ಖಾಸಗಿ ಶಿಕ್ಷಣ ಸಂಸ್ಥೆ ಏಜೆಂಟರಂತೆ ವರ್ತಿಸುತ್ತಿರುವ ಕಾಂಗ್ರೆಸ್'
ಬಾಗೇಪಲ್ಲಿ: ರಾಜ್ಯ ಖಾಸಗಿ ಶಿಕ್ಷಣ ಸಂಸ್ಧೆಗಳ ಏಜೆಂಟರಂತೆ ಕಾಂಗ್ರೆಸ್ ಮುಖಂಡರು ವರ್ತಿಸುತ್ತಿದ್ದಾರೆಂದು ಎಸ್.ಎಫ್.ಐ ಸಂಚಾಲಕ ಅನಂತ ನಾಯ್ಕ್ ಆರೋಪಿಸಿದರು. ಪಟ್ಟಣದ ಕನ್ಯಕಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 17ನೇ ತಾಲೂಕು ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಕಾರದ ನೂತನ ಸಿಇಟಿ ಕಾಯ್ದೆ ಅಪಾಯಕಾರಿಯಾಗಿದ್ದು ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ಜಾರಿ ಮಾಡಬಾರದು ಎಂದು ಒತ್ತಾಯಿಸಿದರು. ಈ ಸಂಬಂಧ ಚರ್ಚೆಯ ಸಮಯದಲ್ಲಿ ಕಾಯ್ದೆ ತುಂಬಾ ಅಪಾಯಕಾರಿ ಕಾಯ್ದೆಯಾಗಿದ್ದು ಈ ಕಾಯ್ದೆಯನ್ನು ಜಾರಿಗೊಳಿಸುವುದು ಬೇಡವೆಂದು ಆಗ ಶಾಸಕರಾಗಿದ್ದ ಜಿ.ವಿ ಶ್ರೀರಾಮರೆಡ್ಡಿ ಒತ್ತಾಯಿಸಿದ್ದರು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿರುವುದು ನಾಚಿಕೇಗೇಡಿನ ಸಂಗತಿ ಎಂದರು. ಡಾ. ಅನಿಲ್, ಮುನಿವೆಂಕಟಪ್ಪ, ಮುನೀಂದ್ರ, ರಘುನಾಥರೆಡ್ಡಿ, ಚನ್ನರಾಯಪ್ಪ, ಪಿಎಸ್ ರಮೇಶ್ ಪಿ.ಎಸ್. ಶಿವಣ್ಣ ಇದ್ದರು.
ಅಹವಾಲು ಸ್ವೀಕಾರ
ಚಿಕ್ಕಬಳ್ಳಾಪುರ ನಗರದಲ್ಲಿರುವ ತಾ.ಪಂ.ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ನಡೆಸಿದರು
ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಲು ಸೂಚನೆ
ಬಾಗೇಪಲ್ಲಿ: ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟ ಇಲ್ಲದಿದ್ದರೆ ಅಯಾ ಇಲಾಖೆಗಳ ಅಧಿಕಾರಿಗಳನ್ನೇ ನೇರ ಹೊಣೆಯನ್ನಾಗಿಸುವುದಾಗಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಎಚ್ಚರಿಕೆ ನೀಡಿದರು.
ತಾಲೂಕಿನ ಗೂಳೂರು ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿ, ಕೆಲವೇ ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದ್ದು, ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟ ಕಾಪಾಡಿಕೊಂಡ ಬರಬೇಕಾದಂತಹ ಜವಾಬ್ದಾರಿ ಅಧಿಕಾರಿಗಳ ಮೇಲೆ ಇದೆ ಎಂದರು. ತಹಸೀಲ್ದಾರ್ ಎಂ.ಎ. ಪದ್ಮ,ಲೋಕೋಪಯೋಗಿ ಇಲಾಖೆ ಎಇಇ ಜೆ. ಕೃಷ್ಣಮೂರ್ತಿ, ಪಿ.ವಿ. ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವೆಂಕಟೇಶ್, ವೃತ್ತ ನಿರೀಕ್ಷಕ ಸಿ. ವಸಂತ್ ಇದ್ದರು.
ಕೆ.ವಿ.ಇಂಗ್ಲಿಷ್ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ
ಚಿಕ್ಕಬಳ್ಳಾಪುರ: ಇಡೀ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಏಸುಕ್ರಿಸ್ತರ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಡಾ.ಹೇಮಂತ್ ನಾಗರತ್ನಂ ತಿಳಿಸಿದರು.
ಅವರು ನಗರದ ಹೊರವಲಯದಲ್ಲಿರುವ ಸಿವಿವಿ ಕ್ಯಾಂಪಸ್ನ ಕೆ.ವಿ.ಇಂಗ್ಲಿಷ್ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಪ್ರೀತಿ ಬಾಂಧವ್ಯ ಸ್ನೇಹವನ್ನು ಬೆಳೆಸಬೇಕೆಂದರು. ಡಾ.ದೀಪ್ತಿ ಪ್ರಿಯ ಮಾತನಾಡಿ, ಮಕ್ಕಳ ಮನಸ್ಸು ಮೊಗ್ಗಿನ ರೀತಿ ಇದ್ದು, ಅದು ಅರಳುವಾಗ ಅದರ ಪರಿಮಳ ನೋಟ ಎಷ್ಟು ಸುಂದರವಾಗಿರುತ್ತದೆಯೋ, ಅದೇ ರೀತಿ ಶಿಕ್ಷಕರು ಮಕ್ಕಳಿಗೆ ಪ್ರೀತಿ ನಡತೆ, ಶಿಸ್ತನ್ನು ಕಲಿಸಬೇಕೆಂದರು. ಕೆ.ವಿ.ಇಂಗ್ಲೀಷ್ ಶಾಲೆಯ ಪ್ರಾಂಶುಪಾಲ ತ್ಯಾಗರಾಜ್, ಶಾಲಾ ಮಕ್ಕಳಿಗೆ ಏಸು ಕ್ರಿಸ್ತರ ಮೂಲ ಸಂದೇಶ ತಿಳಿಸಿದರು. ಕೆ.ವಿ.ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಶಿಕ್ಷಕ ಸುಮಶೇಖರ್, ರೂಪ, ಕಾಂತಮಣಿ, ರೂಪಶ್ರೀ, ಮೀನಶರ್ಮ, ಸೌಮ್ಯ ಇದ್ದರು.
ಜಿಲ್ಲಾ ಮಟ್ಟದ ಇಂಚರ-2013 ಕಾರ್ಯಕ್ರಮ
ಚಿಕ್ಕಬಳ್ಳಾಪುರ: ಯುವ ಶ್ರವಣ ನ್ಯೂನ್ಯತೆಯುಳ್ಳ ವ್ಯಕ್ತಿಗಳು ಮತ್ತು ಅವರ ಪೋಷಕರ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್ನಲ್ಲಿರುವ ಕೆ.ವಿ.ಶಿಕ್ಷಣ ಸಂಸ್ಥೆಯಲ್ಲಿ ಡಿ.24 ರಿಂದ 27 ರವರೆಗೆ ನಾಲ್ಕು ದಿನಗಳ ಜಿಲ್ಲಾ ಮಟ್ಟದ ಇಂಚರ-2013 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಸಂಚಾಲಕ ಹೀರೇಮಠ್ ತಿಳಿಸಿದ್ದಾರೆ. ನಗರದ ಕೈಗಾರಿಕಾ ತರಬೇತಿ ಕೇಂದ್ರ ಕಚೇರಿಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿರುವ ಸುಮಾರು 25,257 ಮಂದಿ ಅಂಗವಿಕಲರಲ್ಲಿ 5 ರಿಂದ 6 ಸಾವಿರ ರು.ವರೆಗೆ ವಾಕ್ ಮತ್ತು ಶ್ರವಣ ದೋಷವುಳ್ಳ ವಿಕಲಚೇತನರಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ನುರಿತತಜ್ಞರು, ಸಂಪನ್ಮೂಲ ವ್ಯಕ್ತಿಗಳು ಭಾಗಹಿಸುತ್ತಿದ್ದು ಕೌಶಲ್ಯ, ಕೆಲಸ ನಿರ್ವಹಣೆ, ಸಿಗುವ ಅವಕಾಶಗಳು, ಸದ್ಬಳಕೆ ಕುರಿತು ಅರಿವು ಮೂಡಿಸಲಿದ್ದಾರೆ ಎಂದರು.
ಲಸಿಕೆ ಹಾಕಿಸುವುದರಿಂದ ಕಾಲುಬಾಯಿ ಹತೋಟಿಗೆ
ಶಿಡ್ಲಘಟ್ಟ: ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಿ ಕಾಲುಬಾಯಿ ಜ್ವರ ತಡೆಗಟ್ಟಬೇಕೆಂದು ಶಾಸಕ ರಾಜಣ್ಣ ಹೇಳಿದರು. ಬೆಳ್ಳೂಟಿ ಗೇಟ್ ಬಳಿಯಿರುವ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾಲುಬಾಯಿ ಜ್ವರ ಹಾಗೂ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿ, ಸರ್ಕಾರ ಕಾಲುಬಾಯಿ ಜ್ವರಕ್ಕೆ ಲಸಿಕೆಯನ್ನು ಉಚಿತವಾಗಿ ವರ್ಷಕ್ಕೆರಡು ಬಾರಿ ಹಾಕುತ್ತಿದ್ದು ಲಸಿಕೆ ಹಾಕಿಸಬೇಕೆಂದು ಳಿಸಿದರು. ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಯ ವಿಜ್ಞಾನಿ ಡಾ. ರವೀಂದ್ರ ಹೆಗಡೆ ಮಾತನಾಡಿ, ಪ್ರತಿವವರ್ಷ ಲಸಿಕೆ ಹಾಕಿಸುವುದರ ಮೂಲಕ ರೋಗ ನಿಯಂತ್ರಣ ಮಾಡಬಹುದು. ರೋಗ ಬಂದ ರಾಸುವಿನ ಬಾಯಿಯಿಂದ ರೋಗಾಣುಗಳು ಗಾಳಿಯ ಮುಖಾಂತರ ಬೇರೆ ರಾಸುಗಳಿಗೆ ಹರಡುವುದರಿಂದ, ರೋಗ ಬಂದ ರಾಸುಗಳನ್ನು ಬೇರೆ ಕಡೆ ಕಟ್ಟಿ ಹಾಕಿ ಆರೈಕೆ ಮಾಡಬೇಕು ಎಂದರು.
ದರ್ಗಾ ಹುಂಡಿಯ ಹಣ ಎಣಿಕೆ
ಚಿಂತಾಮಣಿ: ನಿಮ್ಮಕಾಯಲಹಳ್ಳಿ ಗ್ರಾಮದ ಸೈಯದ್ ಖಾಕೀಷಾ ವಲಿ ದರ್ಗಾ ಹುಂಡಿಯ ಹಣವನ್ನು ಕೆನರಾ ಬ್ಯಾಂಕ್ ವ್ಯವಸ್ಥಾಪಕರ ಸಮ್ಮುಖದಲ್ಲಿ, ಪೊಲೀಸ್ ಬಂದೋಬಸ್ತ್ನಲ್ಲಿ ಎಣಿಕೆ ಕಾರ್ಯ ನಡೆಯಿತು. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಮ್ಮಕಾಯಲಹಳ್ಳಿ ಗ್ರಾಮದ ಸೈಯದ್ ಖಾಕೀಷಾ ವಲಿ ದರ್ಗಾದ ಹುಂಡಿ ಹಣವನ್ನು ದರ್ಗಾ ಸಮಿತಿಯ ಸದಸ್ಯರ ಹಾಗೂ ವಕ್ಫ್ ಬೋರ್ಡಿನ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಹುಂಡಿಯ ಒಟ್ಟು ಹಣದ ಮೊತ್ತ 5 ಲಕ್ಷ 67 ಸಾವಿರ 950 ರುಪಾಯಿ ಒಟ್ಟು ಹಣ ಎಂದು ತಿಳಿಸಿದ್ದಾರೆ. ಎಣಿಕೆ ಕಾರ್ಯಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಟ್ಲಹಳ್ಳಿ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರವೀಣ್ಕುಮಾರ್ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.
ಅಸಮರ್ಪಕ ವಿದ್ಯುತ್ ಸರಬರಾಜು: ಪ್ರತಿಭಟನೆ
ಚಿಂತಾಮಣಿ: ಅಸಮರ್ಪಕ ವಿದ್ಯುತ್ ಸರಬರಾಜುನಿಂದ ನಾಗರಿಕರಿಗೆ ಕಿರಿ ಕಿರಿ ಉಂಟುಮಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ಧೋರಣೆ ಖಂಡಿಸಿ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಬೆಸ್ಕಾಂ ನಗರ ಉಪ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ ರೈತರಿಗೆ ಅನಾನುಕೂಲ ಆಗುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವವುದನ್ನು ಖಂಡಿಸಿ ಶನಿವಾರ ಅಧಿಕಾರಿಗಳ ವಿರುದ್ಧ ದಿಕ್ಕಾರಗಳನ್ನು ಕೂಗಿದರು. ಜಾನುವಾರುಗಳಿಗೆ ನೀರಿಲ್ಲದೆ ಹಾಹಾಕಾರ ತಲೆದೂರಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ಸಮೀಪಿಸುತ್ತಿದ್ದು, ಓದಲು ತುಂಬಾ ಸಮಸ್ಯೆಯಾಗಿದೆ. ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ನಗರ ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅನಿಲ್ ಕುಮಾರ್ಗೆ ಮನವಿ ನೀಡಿದರು.
ಮಕ್ಕಳ ಹಬ್ಬ
ಚಿಕ್ಕಬಳ್ಳಾಪುರ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯ ಆವರಣದಲ್ಲಿ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುವ ಸಲುವಾಗಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಹಬ್ಬ ಸಂಭ್ರಮದಿಂದ ನೆರವೇರಿತು.
ಯುವ ನಾಯಕತ್ವ ಪ್ರಶಿಕ್ಷಣ ಶಿಬಿರ
ಚಿಕ್ಕಬಳ್ಳಾಪುರ: ತಾಲೂಕಿನ ಚದಲಪುರ ಬಳಿ ಇರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಯುವನಾಯಕತ್ವ ಪ್ರಶಿಕ್ಷಣದ (Youth Leadership Training Programme) ಬಗ್ಗೆ 8 ದಿನದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಕೆನರಾಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಜೀವನ ಕಲಾ ಸಂಸ್ಥೆ (ಆರ್ಟ್ ಆಫ್ ಲೀವಿಂಗ್) ಆಶ್ರಯದಲ್ಲಿ ಆಯೋಜಿಸಿರುವ ಶಿಬಿರದ ಪ್ರಮುಖ ಉದ್ದೇಶ ಯುವಜನತೆಯ ಜೀವನ ಶೈಲಿ ಹಾಗೂ ಹಳ್ಳಿಗಳನ್ನು ಅಭಿವೃದ್ಧಿ ಸಾಧಿಸುವುದಾಗಿದೆ. 18 ರಿಂದ 35 ವರ್ಷದೊಳಗಿನ ಅವಿವಾಹಿತರು ಡಿ.28 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಬಸವನಗುಡಿ ರಸ್ತೆಯಲ್ಲಿರುವ ವೇದಾಪಾಠಶಾಲೆಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ತಮ್ಮ ಇತ್ತೀಚಿನ 2 ಭಾವಚಿತ್ರ ಮತ್ತು ಪಿಯುಸಿ ನಕಲು ಅಂಕಪಟ್ಟಿಯೊಂದಿಗೆ ಹಾಜರಾಗಬೇಕು. ಮಾಹಿತಿಗಾಗಿ ಹನುಮಂತೇಶ್ ಮೊ-9916327559, 9731931775, ರೇಷ್ಮ 9916284299 ಸಪರ್ಕಿಸಿ.
ಪುನರ್ವಸತಿ ಕಲ್ಪಿಸಲು ಸಾಲ, ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ; ದೌರ್ಜನ್ಯಕ್ಕೆ ಗುರಿಯಾದ ಸಂತ್ರಸ್ಥರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಂತ್ರಸ್ಥರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪುನರ್ವಸತಿ ಕಲ್ಪಿಸಲು ಸಾಲ ಮತ್ತು ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಪಡೆದು ಜಿಲ್ಲಾಧಿಕಾರಿಗಳ ಮುಖಾಂತರ ಅಭ್ಯರ್ಥಿಗಳು ಪ್ರಸ್ತಾವನೆಯನ್ನು ನೇರವಾಗಿ ವ್ಯವಸ್ಥಾಪಕ ನಿರ್ದೇಶಕರು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು ವಿಳಾಸಕ್ಕೆ ಕಳುಹಿಸಬೇಕು. ಹಿಂದೆ ಸಹಾಯ ಧನ ಪಡೆಯಲು ಅ.5 ರಿಂದ 10 ರ ವರಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಕೇವಲ ಆರು ಅರ್ಜಿಗಳು ಮಾತ್ರ ಬಂದಿವೆ. ಈ ಹಿನ್ನೆಲೆಯಲ್ಲಿ ಡಿ.30 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಿದ್ದು ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಆಡಳಿತ ಭವನ, ಚಿಕ್ಕಬಳ್ಳಾಪುರ. ದೂ-08156-277116 ಅನ್ನು ಸಂಪರ್ಕಿಸಿ.