ಪಾಠ ಹೇಳಲು ಟೀಚರ್ ಬರ್ತಿಲ್ಲ
ಕ.ಪ್ರ.ವಾರ್ತೆ ಕೋಲಾರ ಡಿ.21
ನಮಗೂ ಈಗ ಎಲ್ಲರಂತೆ ಬದುಕಿ ಬಾಳ್ಬೇಕು ಅಂತ ಆಸೆ ಇದೆ, ದಯವಿಟ್ಟು ನಮಗೆ ಓದು-ಬರಹ ಕಲಿಯಲು ಅವಕಾಶ ಮಾಡಿಕೊಡಿ...
ಹೀಗೆಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಕುಂದ ಬಳಿ ಮೊರೆ ಹೋದವರು ಕಾನೂನು ಅರಿವಿಲ್ಲದೆ ತಪ್ಪು ಮಾಡಿ ಜೈಲು ಸೇರಿರುವ ವಿಚಾರಣಾಧೀನ ಖೈದಿಗಳು.
ಜಿಲ್ಲೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಹೇಗೆ ಸಾಗಿದೆ ಎಂಬುದನ್ನು ತಿಳಿಯಲು ಶನಿವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಸಿ.ಜಿ. ಹುನಕುಂದ ಅವರು, ಕೋಲಾರ ನಗರದ ಕೋಟೆ ಪ್ರದೇಶದಲ್ಲಿರುವ ಉಪ ಬಂಧೀಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ವಿಚಾರಣಾಧೀನ ಖೈದಿಗಳು, ನಮಗೆ ಕುಡಿಯುವ ಶುದ್ಧವಾದ ನೀರು ಸಿಗುತ್ತಿಲ್ಲ, ಮನೆಯಿಂದ ಊಟ ತರಿಸಿಕೊಳ್ಳುವುದಕ್ಕೆ ಅನುಮತಿ ನೀಡುತ್ತಿಲ್ಲ, ಒಂದು ಕೊಠಡಿಯಲ್ಲಿ 5 ಜನರು ಮಾತ್ರ ಇರಬೇಕೆಂದು ನಿಯಮವಿದ್ದರೂ 9 ಮಂದಿಯನ್ನು ಇರಿಸಲಾಗಿದೆ ಎಂಬ ದೂರುಗಳನ್ನು ನೀಡಿದರು.
ಇದಕ್ಕೆ ಭಿನ್ನವಾಗಿ ಕೆಲ ಖೈದಿಗಳು, ಸಾರ್..ನಾವು ಕಾನೂನು ಅರಿವಿಲ್ಲದೆ ತಪ್ಪು ಮಾಡಿ ಇಲ್ಲಿಗೆ ಬಂದಿದ್ದೇವೆ, ಈಗ ನಮ್ಮ ತಪ್ಪು ಅರ್ಥವಾಗಿದೆ, ಮುಂದೆ ಯಾವುದೇ ಕಾರಣಕ್ಕೂ ತಪ್ಪು ಮಾಡಲ್ಲ, ಸಮಾಜದಲ್ಲಿ ಗೌರವ ಸಂಪಾದಿಸಲು ಪ್ರಯತ್ನಿಸುವುದಾಗಿ ಹೇಳಿ, ಮಾನವ ಹಕ್ಕುಗಳ ಆಯೋಗದ ಸದಸ್ಯರಲ್ಲಿ ಅಚ್ಚರಿ ಮೂಡಿಸಿದರು.
ಇಷ್ಟಕ್ಕೆ ಸುಮ್ಮನಾಗದ ಖೈದಿಗಳು, ನಮಗೆ ಓದು-ಬರಹ ಕಲಿಯಬೇಕೆಂದು ಆಸೆಯಾಗಿದೆ, ಜೈಲಿನಲ್ಲಿ ಖೈದಿಗಳಿಗೆ ಪಾಠ ಹೇಳಿಕೊಡುವುದಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕ ಇತ್ತ ತಲೆ ಹಾಕುತ್ತಿಲ್ಲ, ಖೈದಿಗಳು ಪಾಠ ಕಲಿಯಬಾರದು, ಬುದ್ಧಿವಂತರು ಆಗಬಾರದೆಂಬ ನಿಯಮವೇನಾದರೂ ಇದೆಯೇ ಎಂದು ಕೇಳಿದರು.
ಖೈದಿಗಳು ಕೇಳಿದ ಪ್ರಶ್ನೆ ಮತ್ತು ಅವರಲ್ಲಿ ಕಲಿಯಬೇಕೆಂಬ ಬಗ್ಗೆ ಇದ್ದ ತುಡಿತ ಗಮನಿಸಿದ ಸಿ.ಜಿ. ಹುನಕುಂದ, ಎಷ್ಟು ದಿನಗಳಿಂದ ಟೀಚರ್ ಬರ್ತಿಲ್ಲ, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಗಳ ಗಮನಕ್ಕೆ ತಂದ್ದೀರಾ, ಖೈದಿಗಳಿಗೆ ಪಾಠ ಹೇಳಿಕೊಡುವುದಕ್ಕೆ ಪರ್ಯಾಯ ವ್ಯವಸ್ಥೆ ಏನಾಗಿದೆ ಎಂದು ಜೈಲಿನ ಅಧಿಕಾರಿ ಗಂಗಪ್ಪನವರನ್ನು ಕೇಳಿದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಕುಂದ ಅವರ ಪ್ರಶ್ನೆ ಹಾಗೂ ಖೈದಿಗಳ ದೂರಿನಿಂದ ಕಕ್ಕಾಬಿಕ್ಕಿಯಾದ ಜೈಲರ್ ಗಂಗಪ್ಪ, ಖೈದಿಗಳಿಗೆ ವಾರದಲ್ಲಿ ಎರಡು ದಿನ ಪಾಠ ಹೇಳಿಕೊಡುವುದಕ್ಕೆ ಶಿಕ್ಷಕರು ನಿಯೋಜನೆಯಾಗಿದ್ದಾರೆ, ಈ ವಾರ ಮಾತ್ರ ಬಂದಿಲ್ಲವೆಂದು ಸಮಜಾಯಿಷಿ ಹೇಳಿದರು.
ಶುದ್ಧ ನೀರು ನೀಡಿ: ಇದನ್ನು ಒಪ್ಪದ ಸಿ.ಜಿ. ಹುನಕುಂದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಬಳಿ ಮಾತನಾಡಿ ಕೂಡಲೇ ಟೇಚರ್ ಬರುವುದಕ್ಕೆ ಕ್ರಮ ಕೈಗೊಳ್ಳಿ, ಮತ್ತೊಮ್ಮೆ ಖೈದಿಗಳಿಂದ ದೂರು ಬರದಂತೆ ಎಚ್ಚರವಹಿಸಿ ಎಂದು ತಾಕೀತು ಮಾಡಿದರು.
ಜೈಲಿನ ನಿಯಮದ ಪ್ರಕಾರ ಖೈದಿಗಳಿಗೆ ಮನೆಗಳಿಂದ ಊಟ ಸರಬರಾಜು ಮಾಡಲು ಅವಕಾಶವಿಲ್ಲ. ಒಂದು ವೇಳೆ ನ್ಯಾಯಾಲಯ ಅನುಮತಿ ನೀಡಿದರೆ ಮನೆಯ ಊಟ ಸವಿಯಬಹುದು, ಈ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಖೈದಿಯೊಬ್ಬರ ಆಗ್ರಹಕ್ಕೆ ಸ್ಪಷ್ಟನೆ ನೀಡಿದರು.
ಜೈಲಿನಲ್ಲಿ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ, ನಾವೇ ಸ್ವಂತ ಹಣದಿಂದ ನೀರು ತರಿಸಿಕೊಳ್ಳುತ್ತಿದ್ದೇವೆಂದು ಖೈದಿಗಳು ತಿಳಿಸಿದಾಗ, ಸರ್ಕಾರ ಶುದ್ಧವಾದ ನೀರು ಒದಗಿಸಲು ಹಣ ನೀಡುವುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಜೈಲರ್ ಗಂಗಪ್ಪನವರಿಗೆ ಸೂಚಿಸಿದರು.
ಖೈದಿಗಳಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ, ಖೈದಿಗಳ ಮನ ಪರಿವರ್ತನೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ ಎಂದು ಸಲಹೆ ನೀಡಿದರು.
ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೋಗಿಗಳು ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ, ಎಕ್ಸರೇ, ಸಿಟಿ ಸ್ಕ್ಯಾನರ್ ಸೌಲಭ್ಯವಿಲ್ಲ, ಖಾಸಗಿ ಪ್ರಾಯೋಗಾಲಯಗಳಲ್ಲಿ ಕೆಲ ಪರೀಕ್ಷೆಗಳನ್ನು ಮಾಡಿಸಲು ವೈದ್ಯರು ಚೀಟಿ ಬರೆದುಕೊಡುತ್ತಾರೆಂದು ದೂರಿದರು.
ಇದರಿಂದ ಬೇಸತ್ತ ಸಿ.ಜಿ. ಹುನಕುಂದ, ಸರ್ಕಾರಿ ಆಸ್ಪತ್ರೆಗಳು ಇರುವುದೇ ಬಡ ರೋಗಿಗಳ ಉದ್ಧಾರಕ್ಕಾಗಿ, ಇಲ್ಲಿ ಎಲ್ಲ ರೀತಿಯ ಸೇವಾ ಸೌಕರ್ಯಗಳು ಇರಬೇಕು, ಒಂದು ವೇಳೆ ಕೊರತೆ ಇದ್ದರೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿ ಕೂಡಲೇ ರೋಗಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ವೈದ್ಯರಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿನ ಖೈದಿಗಳ ವಾರ್ಡಿನಲ್ಲಿ ಪೊಲೀಸ್ ಕಡ್ಡಾಯವಾಗಿ ಇದ್ದು ಅಲ್ಲಿನ ಆಗು ಹೋಗುಗಳನ್ನು ಗಮನಿಸಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಆದರೆ, ಖೈದಿಗಳ ವಾರ್ಡಿನಲ್ಲಿ ಪೊಲೀಸ್ ಇಲ್ಲದಿರುವುದನ್ನು ಗಮನಿಸಿ ಕುಪಿತರಾದ ಹುನಕುಂದ ಅವರು, ಖೈದಿ ವಾರ್ಡಿನಿಂದ ಹೊರ ಹೋಗಿದ್ದ ಪೊಲೀಸ್ ಬಂದ ನಂತರ ತರಾಟೆಗೆ ತೆಗೆದುಕೊಂಡು ಇನ್ನು ಕರ್ತವ್ಯ ಲೋಪವಾಗದಂತೆ ಎಚ್ಚರವಹಿಸಬೇಕೆಂದು ಬುದ್ಧಿವಾದ ಹೇಳಿದರು.
ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ ಕೆಂಡಾಮಂಡಲರಾದ ಸದಸ್ಯರು ಆಸ್ಪತ್ರೆಯಲ್ಲಿ ಅನಾರೋಗ್ಯವಿದ್ದರೆ ರೋಗಿಗಳ ಪಾಡೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗದ ರಿಜಿಸ್ಟ್ರಾರ್ ಮಲ್ಲೇಶಪ್ಪ, ತಹಸೀಲ್ದಾರ್ ನಾಗರಾಜ್ ಇದ್ದರು.