ಅಂಬೇಡ್ಕರ್ ಕಾಲೋನಿ ಮನೆ ಎತ್ತಂಗಡಿಗೆ ನೋಟಿಸ್
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ರೇಲ್ವೆ ನಿಲ್ದಾಣ ಸಮೀಪ ಕಳೆದ ಅನೇಕ ದಶಕಗಳಿಂದಲೂ ವಾಸ ಮಾಡುತ್ತಿರುವ ಚಾಮರಾಜಪೇಟೆ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಮತ್ತೆ ಆತಂಕ ಶುರುವಾಗಿದೆ. ಈ ತಿಂಗಳೊಳಗೆ ಜಾಗ ಖಾಲಿ ಮಾಡದಿದ್ದರೆ ಮುಂದಿನ ಕ್ರಮ ನಾವೇ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯ ನೋಟಿಸ್ ಸರ್ಕಾರದಿಂದ ಗುರುವಾರ ನಿವಾಸಿಗಳಿಗೆ ಬಂದಿರುವುದು ಇದಕ್ಕೆ ಕಾರಣ.
ಬಗೆಹರಿಯದ ವಿವಾದಗಳಿಂದ ಅತ್ತ ಚಿಕ್ಕಬಳ್ಳಾಪುರದ ರೇಲ್ವೆ ನಿಲ್ದಾಣ ಅಭಿವೃದ್ಧಿಯು ತ್ವರಿತ ಗತಿಯಲ್ಲಿ ನಡೆಯುತ್ತಿಲ್ಲ. ಇನ್ನೂ ಜಾಗ ಕಳೆದುಕೊಳ್ಳುವ ನಿವಾಸಿಗಳಿಗೆ ಸ್ಪಷ್ಟ ಉತ್ತರದೊಂದಿಗೆ ಸಮಾಧಾನಪಡಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವೂ ಆಗುತ್ತಿಲ್ಲ. ಈ ಹಿನ್ನೆಲೆ ಮುಂದೆ ಏನಾಗುತ್ತದೆಯೋ ಎಂದು ಎದುರು ನೋಡುತ್ತಿರುವ ನಿವಾಸಿಗಳ ಆತಂಕವು ನೀಗುತ್ತಿಲ್ಲ. ಮುಂದಿನ ದಿನಗಳಲ್ಲಿ ವಿವಾದವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಹಂತಕ್ಕೆ ಹೋಗುತ್ತಿದೆ.
ಈ ವಿವಾದವೇನು?: ನಗರದ ಚಾಮರಾಜಪೇಟೆ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳಿದ್ದು, ಇವುಗಳಲ್ಲಿ ಮೊದಲ ಹಂತದಲ್ಲಿ 178 ಮನೆಗಳನ್ನು ರೇಲ್ವೆ ಹಳಿ ನಿರ್ಮಾಣಕ್ಕಾಗಿ ಖಾಲಿ ಮಾಡಿಸಬೇಕಾಗುತ್ತದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 2ನೇ ಹಂತದಲ್ಲಿ ಮತ್ತಷ್ಟು ಮನೆಗಳನ್ನು ಕೆಡವಲಾಗುತ್ತದೆ ಎನ್ನಲಾಗಿದೆ.
ಇದರನ್ವಯ ಅಧಿಕಾರಿಗಳು ಕಳೆದ ಎರಡ್ಮೂರು ವರ್ಷಗಳ ಹಿಂದೆಯೇ ಕಾರ್ಯಪ್ರವೃತ್ತರಾಗಿ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಬಂದಿದ್ದರು. ಆ ಸಂದರ್ಭ ವಿರೋಧ ವ್ಯಕ್ತವಾಗಿ ಜಿಲ್ಲಾ ಕೇಂದ್ರದಲ್ಲಿ ಧರಣಿ, ಪ್ರತಿಭಟನೆಗಳು ನಡೆದವು. ನಗರಸಭೆ ಮನೆಗಳಿಗೆ ಖಾತೆ ಮಾಡಿಕೊಟ್ಟಿದೆ. ಕಾಲೋನಿಗೆ ವಿದ್ಯುತ್ ಸಂಪರ್ಕ, ಶಾಲೆ, ಗ್ರಂಥಾಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿದೆ. ಇಲ್ಲಿ ಅನೇಕ ವರ್ಷಗಳಿಂದಲೂ ದೀನ ದಲಿತರು ವಾಸಿಸಿಕೊಂಡು ಬಂದಿದ್ದಾರೆ. ಒಕ್ಕಲೆಬ್ಬಿಸಿದರೆ ಜನ ಬೀದಿ ಪಾಲಾಗಬೇಕಾಗುತ್ತದೆ. ಕೂಲಿ ನಾಲಿ ಮಾಡಿಕೊಂಡವರ ಗತಿ ಏನಾಗಬೇಕು. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮತ್ತು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿರವರಿಗೆ ಮುತ್ತಿಗೆ ಹಾಕಲಾಗಿತ್ತು.
ಆಗ ಕೇಂದ್ರ ರೇಲ್ವೆ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಅವರನ್ನು ಸಹ ಬಿಟ್ಟಿರಲಿಲ್ಲ. ಇದರಿಂದ ಅಲ್ಲಿನ ನಿವಾಸಿಗಳನ್ನು ಒಳಗೊಂಡಂತೆ ಸಭೆ ಕರೆದು ಚರ್ಚೆ ನಡೆಸಲಾಗಿದೆ.
ಒಂದು ರೇಲ್ವೆ ನಿಲ್ದಾಣವನ್ನು ಬೇರೆಡೆಗೆ ಬದಲಾಯಿಸುವುದು. ಇಲ್ಲವೇ ಮನೆಯನ್ನು ಕಳೆದುಕೊಳ್ಳುವವರಿಗೆ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಬೇರೆಡೆ ಮನೆಗಳನ್ನು ಕಟ್ಟಿಸಿಕೊಡಲು ನಿರ್ಧರಿಸಲಾಯಿತು.
ಈ ಭರವಸೆಯನ್ನೇ ಬಂಡವಾಳವನ್ನಾಗಿಸಿಕೊಂಡು ಸಚಿವರು ಇಲ್ಲಿನ ನಿವಾಸಿಗಳನ್ನು ಖುಷಿಪಡಿಸಿಕೊಂಡು ಬಂದರಷ್ಟೇ. ಆದರೆ, ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲು ಇಲ್ಲಿಯವರೆಗೂ ಆಗಲಿಲ್ಲ. ಹಾಗೆಯೇ ಇಲ್ಲಿನ ದಲಿತ ಮುಖಂಡರುಗಳಿಂದ ಉದ್ಭವಿಸಿದ ಭಿನ್ನಾಭಿಪ್ರಾಯಗಳು ರೇಲ್ವೆ ನಿಲ್ದಾಣ ಸ್ಥಳಾಂತರ ವಿವಾದ ಹೆಸರಿನಲ್ಲಿ ಕಾಲವನ್ನು ತಳ್ಳಿಕೊಂಡು ಹೋಗಲು ಒಂದು ಪ್ರಮುಖ ಕಾರಣವಾಯಿತು. ಇದೀಗ ರೇಲ್ವೆ ನಿಲ್ದಾಣ ಸ್ಥಳಾಂತರವಿಲ್ಲ ಎನ್ನುವುದು ಸ್ಪಷ್ಟವಾಗಿದೆಯೇ ಹೊರತು ಒಕ್ಕೆಲೆಬ್ಬಿಸುವ ನಿವಾಸಿಗಳ ಸಂಕಷ್ಟಕ್ಕೆ ಪರಿಹಾರ ಏನೂ ಎನ್ನುವುದು ನಿರ್ಧಾರವಾಗಿಲ್ಲ.
ನಿವಾಸಿಗಳಿಗೆ ನೋಟಿಸ್: 20-12-2012ರಲ್ಲಿ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ ರೇಲ್ವೆ ಇಲಾಖೆಗೆ ಸೇರಿರುವ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದನ್ನು ತೆರವುಗೊಳಿಸಬೇಕೆಂದು ಆದೇಶ ನೀಡಿದೆ. ಇದರನ್ವಯ ಜಿಲ್ಲಾಧಿಕಾರಿ ಕಾರ್ಯಾಲಯ ಕ್ರಮ ಕೈಗೊಂಡು, ಈ ತಿಂಗಳಾಂತ್ಯದೊಳಗೆ ಮನೆಗಳನ್ನು ಖಾಲಿ ಮಾಡಬೇಕೆಂದು ನಿವಾಸಿಗಳಿಗೆ ನೋಟಿಸ್ ನೀಡಿದೆ. ಇಲ್ಲದಿದ್ದಲ್ಲಿ ಉಪ ವಿಭಾಗಾಧಿಕಾರಿಗಳ ಮೂಲಕ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಈಗಾಗಲೇ 148 ಮನೆಗಳಿಗೆ ನೋಟಿಸ್ ಬಂದಿದ್ದು, ಯಾರೂ ಸಹ ಸ್ವೀಕರಿಸಿಲ್ಲ. ಹಾಗೆಯೇ ವಾಪಸ್ ಕಳುಹಿಸಿದ್ದಾರೆ. ಈ ನಡುವೆ ತೆರವು ಕಾರ್ಯಾಚರಣೆ ಕೈಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ.