ಅಖಂಡ ಕೋಲಾರ ಜಿಲ್ಲೆಗೆ ಸಮಾಧಾನದ ಉಡುಗೊರೆ
-ಪಾ.ಶ್ರೀ. ಅನಂತರಾಮ್
ಕೋಲಾರ: ಕೇಂದ್ರ ರೇಲ್ವೆ ಸಚಿವ ಪವನ್ಕುಮಾರ್ ಬನ್ಸಾಲ್ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ರೇಲ್ವೆ ಬಜೆಟ್ನಲ್ಲಿ ಸಮಾಧಾನಕರ ಉಡುಗೊರೆಗಳನ್ನು ನೀಡಿರುವುದಕ್ಕೆ ಜನತೆಯಿಂದ ಹರ್ಷ ವ್ಯಕ್ತವಾಗಿದೆ.
ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳ ಇಲಾಖೆಗಳ ಸಚಿವ ಕೆ.ಹೆಚ್. ಮುನಿಯಪ್ಪನವರು ಈ ಹಿಂದೆ ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾಗ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಕೆಲವು ಯೋಜನೆಗಳನ್ನು ಮಂಜೂರು ಮಾಡಿಸಿದ್ದರು. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕೋಲಾರಕ್ಕೆ ಅತಿ ಹೆಚ್ಚು ಲಾಭವಾಗದಿದ್ದರೂ ಅವಿಭಜಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಬಜೆಟ್ನಲ್ಲಿ ಬಂಪರ್ ಉಡುಗೂರೆ ಸಿಕ್ಕಿದೆ ಎಂದೇ ಹೇಳಬಹುದಾಗಿದೆ.
ಶ್ರೀನಿವಾಸಪುರ-ಮದನಪಲ್ಲಿ ಮಾರ್ಗ: ಶ್ರೀನಿವಾಸಪುರ-ಮದನಪಲ್ಲಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೆಲವು ವರ್ಷಗಳಿಂದ ಕೇಂದ್ರದ ಮುಂದಿದ್ದ ಬೇಡಿಕೆಯನ್ನು ರೇಲ್ವೆ ಸಚಿವರು ಈಡೇರಿಸಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದ ವರದಿಯನ್ನು ಯೋಜನಾ ಇಲಾಖೆಯಿಂದ ತರಿಸಿಕೊಂಡು ಬಜೆಟ್ನಲ್ಲಿ ಪ್ರಕಟಿಸಿರುವುದು ಗಡಿ ಭಾಗವಾದ ಶ್ರೀನಿವಾಸಪುರ ಹಾಗೂ ಆಂಧ್ರ ಪ್ರದೇಶದ ಮದನಪಲ್ಲಿಯ ಜನರಿಗೆ ಖುಷಿ ನೀಡಿದಂತಾಗಿದ್ದು, ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರ ರೈತರಿಗೆ ಆಂಧ್ರ ಪ್ರದೇಶಕ್ಕೆ ಮಾವು ಸಾಗಾಣೆ ಮಾಡುವುದಕ್ಕೆ ಉತ್ತಮ ಸೌಕರ್ಯ ಸಿಗುವಂತಾಗಿದೆ.
ಇಷ್ಟೇ ಇಲ್ಲದೆ, ಚಿಂತಾಮಣಿಯಿಂದ ಶ್ರೀನಿವಾಸಪುರಕ್ಕೆ ರೈಲು ಮಾರ್ಗ ಇರುವುದರಿಂದ ಅಲ್ಲಿನ ರೈತರು ಹಾಗೂ ಪ್ರಯಾಣಿಕರು ಶ್ರೀನಿವಾಸಪುರ ಮೂಲಕ ಮದನಪಲ್ಲಿ ಹಾಗೂ ಅಲ್ಲಿಂದ ಆಂಧ್ರ ಪ್ರದೇಶದ ವಿವಿಧ ಕಡೆಗಳಿಗೆ ಓಡಾಡುವುದಕ್ಕೂ ಅನುಕೂಲವಾಗಲಿದೆ.
ಬೆಂಗಳೂರಿಗೆ ಪ್ರತಿದಿನ ಪ್ಯಾಸೆಂಜರ್: ಕೆಜಿಎಫ್ನ ಮಾರಿಕುಪ್ಪಿಂನಿಂದ ಬೆಂಗಳೂರಿಗೆ ಈಗಾಗಲೇ ಕೆಲವು ರೈಲುಗಳು ಸಂಚರಿಸುತ್ತಿದ್ದು ಮತ್ತೊಂದು ಹೊಸ ಲೋಕಲ್ ಪ್ಯಾಸೆಂಜರ್ ರೈಲು ಬೆಂಗಳೂರಿಗೆ ಪ್ರತಿದಿನ ಓಡಾಡುವುದಕ್ಕೆ ಬಜೆಟ್ನಲ್ಲಿ ಘೋಷಣೆ ಮಾಡಿರುವುದರಿಂದ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ.
ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೇಲ್ವೆ ಕೋಚಚ್ನಿರ್ಮಾಣ ಹಾಗೂ ನಿರ್ವಹಣಾ ಘಟಕಕ್ಕೆ ಕಳೆದ ಸಾಲಿನ ಬಜೆಟ್ನಲ್ಲೇ ಅನುಮೋದನೆ ಸಿಕ್ಕಿದ್ದು ಪ್ರಸಕ್ತ ಸಾಲಿನ ಬಜೆಟಟ್ನಲ್ಲಿ ಸಚಿವ ಪವನ್ಕುಮಾರ್ ಬನ್ಸಾಲ್ ಅವರು ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿರುವುದರಿಂದ ಜಿಲ್ಲೆಯ ನಿರುದ್ಯೋಗಿಗಳ ಪಾಲಿಗೆ ರೇಲ್ವೆ ಕೋಚ್ ವರದಾನವಾಗುವ ಲಕ್ಷಣಗಳು ಕಾಣ ಬರುತ್ತಿದೆ.
ಮುನಿಯಪ್ಪ ಲೆಕ್ಕಾಚಾರ: ರೇಲ್ವೆ ಕೋಚ್ ನಿರ್ಮಾಣ ಕಾಮಗಾರಿಗೆ ಬೇಕಾದ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಾಗಿದೆ. ಜಿಲ್ಲಾ ಆಡಳಿತ ಈಗಾಗಲೇ ಕೋಚ್ ನಿರ್ಮಾಣಕ್ಕೆ ಸೂಕ್ತವೆನ್ನಲಾದ ಪ್ರದೇಶವನ್ನುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದೆ, ಈ ವರದಿಯನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ರೇಲ್ವೆ ಇಲಾಖೆಗೆ ಭೂಮಿಯನ್ನು ಹಸ್ತಾಂತರ ಮಾಡಿದಲ್ಲಿ ವಿಧಾನಸಭೆಗೆ ಚುನಾವಣೆಘೋಷಣೆ ಆಗುವ ಮುನ್ನವೇ ಶಂಕುಸ್ಥಾಪನೆ ನೆರವೇರಿಸಬಹುದೆಂದು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಲೆಕ್ಕಾಚಾರ ಹಾಕುತ್ತಿದ್ದಾರೆ.
ಇದರ ಜತೆ ಕೋಲಾರ ಮತ್ತು ವೈಟ್ಫೀಲ್ಡ್ ರೈಲು ಮಾರ್ಗಕ್ಕೂ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೂ ಒಂದು ರೀತಿಯಲ್ಲಿ ಬಂಪರ್ ಉಡುಗೊರೆ ಸಿಕ್ಕಿದಂತಾಗಿದೆ.
ಬಹುದಿನಗಳಿಂದ ನಿರೀಕ್ಷೆ ಮಾಡಲಾಗುತ್ತಿದ್ದ ಚಿಕ್ಕಬಳ್ಳಾಪುರ-ಗೌರಿಬಿದನೂರು ರೈಲು ಮಾರ್ಗಕ್ಕೆ ಬಜೆಟ್ನಲ್ಲಿ ಭರವಸೆ ನೀಡಲಾಗಿದೆ.
ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವೆ ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿರುವುದರಿಂದ ಸಾಯಿಬಾಬಾನ ಭಕ್ತರು ಪುಟ್ಟಪರ್ತಿಗೆ ಯಾವುದೇ ಸಮಸ್ಯೆಗಳು ಇಲ್ಲದೆ ಪ್ರಯಾಣ ಮಾಡಿ ಸಾಯಿಬಾಬಾರ ಸಮಾಧಿ ಹಾಗೂ ಮಂದಿರದ ದರ್ಶನಭಾಗ್ಯ ಪಡೆಯುವುದಕ್ಕೆ ಅನುಕೂಲವಾಗಲಿದೆ.
ಶಿಡ್ಲಘಟ್ಟ-ಚಿಂತಾಮಣಿ ಬ್ರಾಡ್ಗೇಡ್: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ-ಚಿಂತಾಮಣಿ ನಡುವೆ ಬಾಕಿ ಇರುವ ಸಣ್ಣ ಪ್ರಮಾಣದ ಬ್ರಾಡ್ಗೇಡ್ ರೈಲು ಮಾರ್ಗ ನಿರ್ಮಾಣಕ್ಕೂ ಬಜೆಟ್ನಲ್ಲಿ ಅನುಮೋದನೆ ಸಿಕ್ಕಿರುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ರೇಲ್ವೆ ಬಜೆಟ್ನಲ್ಲಿ ಘೋಷಣೆಯಾಗಿರುವ ಎಲ್ಲಾ ಯೋಜನೆಗಳು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಬರಲಿ ಎಂಬುದೇ ಎರಡೂ ಜಿಲ್ಲೆಯ ಜನರ ಒತ್ತಾಸೆಯಾಗಿದೆ.
ಈ ಯೋಜನೆಗೆ ಸಂಬಂಧಿಸಿದ ವರದಿಯನ್ನು ಯೋಜನಾ ಇಲಾಖೆಯಿಂದ ತರಿಸಿಕೊಂಡು ಬಜೆಟ್ನಲ್ಲಿ ಪ್ರಕಟಿಸಿರುವುದು ಗಡಿ ಭಾಗವಾದ ಶ್ರೀನಿವಾಸಪುರ ಹಾಗೂ ಆಂಧ್ರ ಪ್ರದೇಶದ ಮದನಪಲ್ಲಿಯ ಜನರಿಗೆ ಖುಷಿ ನೀಡಿದಂತಾಗಿದ್ದು, ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರ ರೈತರಿಗೆ ಆಂಧ್ರ ಪ್ರದೇಶಕ್ಕೆ ಮಾವು ಸಾಗಾಣೆ ಮಾಡುವುದಕ್ಕೆ ಉತ್ತಮ ಸೌಕರ್ಯ ಸಿಗುವಂತಾಗಿದೆ.