ಕೆಜಿಎಫ್ ಬಂದ್ ಭಾಗಶಃ
ಕೆಜಿಎಫ್: ಭೂ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ವೈ.ರಾಮಕ್ಕ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕೆಜಿಎಫ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳು ಬುಧವಾರ ಕರೆ ನೀಡಿದ್ದ ಕೆಜಿಎಫ್ ಬಂದ್ ಬಹುತೇಕ ಯಶಸ್ವಿಯಾಗಿದೆ.
ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅಡಂಪಲ್ಲಿ ಗ್ರಾಮದ ನಿವಾಸಿ ಬೀರಪ್ಪ ಎಂಬುವರಿಗೆ ಸೇರಿದ 1.23 ಎಕರೆ ಜಮೀನಿಗೆ ನಕಲಿ ದಾಖಲಾತಿ ಸೃಷ್ಟಿಸಿ ಮಾರಾಟ ಮಾಡಿರುವ ಜಮೀನನ್ನು ಶಾಸಕಿ ವೈ.ರಾಮಕ್ಕ ಖರೀದಿಸಿರುವ ಆರೋಪದಡಿ ಶಾಸಕಿ ವೈ.ರಾಮಕ್ಕ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಬೇತಮಂಗಲ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಹಿನ್ನಲೆಯಲ್ಲಿ ಈ ಪ್ರಕರಣಲ್ಲೆ ಸಂಬಂಧಿಸಿ ಕೆಜಿಎಫ್ ಶಾಸಕಿ ವೈ.ರಾಮಕ್ಕ ಅವರನ್ನು ಕೂಡಲೇ ಪೊಲೀಸರು ಬಂಧಿಸಬೇಕು ಮತ್ತು ರಾಮಕ್ಕ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎಸ್.ರಾಜೇಂದ್ರನ್ ಮತ್ತು ಎಂ.ಭಕ್ತವತ್ಸಲಂ ನೇತೃತ್ವದಲ್ಲಿ ವಿವಿಧ ಪಕ್ಷಗಳು ಒಗ್ಗೂಡಿ ಬುಧವಾರ ಕೆಜಿಎಫ್ ಬಂದ್‌ಗೆ ಕರೆ ನೀಡಿದ್ದವು.
ಪ್ರಮುಖ ಪಕ್ಷಗಳ ಪ್ರತಿಭಟನೆ: ಜೆಡಿಎಸ್ ಮುಖಂಡ ಮಾಜಿ ಶಾಸಕ ಎಂ.ಭಕ್ತವತ್ಸಲಂ, ಆರ್‌ಪಿಐ ಮಾಜಿ ಶಾಸ ಎಸ್.ರಾಜೇಂದ್ರನ್, ಕಾಂಗ್ರೆಸ್‌ನ ಜಿ.ಎಸ್‌ಕಾರ್ತಿಕ್,ಎಐಎಡಿಎಂಕೆ ಮುಖಂಡ ಅನ್ಬು, ಡಿಎಂಕೆ ಮುಖಂಡ ಕರುಣಾನಿಧಿ ಸೇರಿದಂತೆ ಇತರೆ ಪಕ್ಷಗಳ ಮುಖಂಡರು ಬುಧವಾರ ಬೆಳಗ್ಗೆ ಮಾರಿಕುಪ್ಪಂ ನಿಂದ ಬೆಂಗಳೂರಿಗೆ ತೆರಳುವ ಸ್ವರ್ಣ ಪ್ಯಾಸೆಂಜರ್ ರೈಲು ತಡೆಗೆ ಮುಂದಾಗಿದ್ದು ಪೊಲೀಸರು ಹಾಗೂ ರೇಲ್ವೆ ಇಲಾಖೆ ಅಧಿಕಾರಿಗಳು ರೈಲು ತಡೆಗೆ ಅನುಮತಿ ನಿರಾಕರಿಸಿದ್ದರಿಂದ ರೈಲು ಹೊರಡುವವರೆಗೆ ಶಾಸಕಿ ರಾಮಕ್ಕ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು.
ವಿವಿಧ ರಸ್ತೆಗಳಲ್ಲಿ ಮೆರವಣಿಗೆ: ರೇಲ್ವೆ ನಿಲ್ದಾಣದಿಂದ ಎಲ್ಲಾ ಸರ್ವ ಪಕ್ಷಗಳ ಮುಖಂಡರು ಮೆರವಣಿಗೆ ಹೊರಟು ನಗರದ ಅಂಬೇಡ್ಕರ್ ರಸ್ತೆ, ಸೂರಜ್‌ಮುಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್‌ರಸ್ತೆ, ಗೀತಾ ರಸ್ತೆ, ಸ್ವರ್ಣನಗರ, ಪಾರಂಡಹಳ್ಳಿ, ಆಂಡ್ರಸನ್‌ಪೇಟೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಕೂಡಲೇ ಶಾಸಕಿ ವೈ.ರಾಮಕ್ಕ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು.
ವಿದ್ಯಾರ್ಥಿಗಳಿಗೆ ತೊಂದರೆ: ದ್ವಿತೀಯ ಪಿಯುಸಿ ಸಪ್ಲಿಮೆಂಟ್ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆಗೆ ಹಾಜರಾಗಲು ಗ್ರಾಮಾಂತರ ಪ್ರದೇಶಗಳಿಂದ ಮತ್ತು ಇತರೆ ನಗರಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್‌ಗಳು ಮತ್ತು ಆಟೋಗಳಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ರಾಜ್ಯ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು, ಆಟೋ ರಿಕ್ಷಾಗಳ ಸಂಚಾರ ಸ್ಥಗಿತಗೊಂಡಿತ್ತು. ಕೇಂದ್ರ ಸರ್ಕಾರದ ಬೆಮೆಲ್ ಕಾರ್ಖಾನೆಗೆ ರಜೆಯನ್ನು ಘೋಷಿಸಲಾಗಿತ್ತು, ಶಾಲೆಗೆ ಮಕ್ಕಳು ಬಾರದ ಕಾರಣ ರಜೆ ನೀಡಲಾಗಿತ್ತು. ಗ್ರಾಹಕರಿಲ್ಲದೆ ಬ್ಯಾಂಕ್‌ಗಳು ಮುಚ್ಚಲಾಗಿತ್ತು. ಎಂ.ಜಿ.ಮಾರುಕಟ್ಟೆ ಸೇರಿದಂತೆ ನಗರದ ಎಲ್ಲಾ ವ್ಯಾಪಾರದ ವಹಿವಾಟುಗಳು ಬಂದ್ ಆಗಿದ್ದವು. ಕಕ್ಷಿದಾರರಿಲ್ಲದೆ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಲಾಗಿತ್ತು.
ಪ್ರಯಾಣಿಕರ ಪರದಾಟ: ಬೆಂಗಳೂರು, ಕೋಲಾರ, ಕುಪ್ಪಂ, ವಿಕೋಟ, ಮುಳಬಾಗಿಲು ಕಡೆಗೆ ಹೋಗಲು ಸಾರ್ವಜನಿಕರು ಪರದಾಡುವಂತಾಗಿತ್ತು.
ನಗರದೊಳಗೆ ಪ್ರವೇಶಿಸಿದ ಟೆಂಪೋ, ಲಾರಿ, ಲಗ್ಗೇಜ್ ಆಟೋ ಮತ್ತು ಪ್ರಯಾಣಿಕರ ಆಟೋಗಳನ್ನು ತಡೆದು ಚಾಲಕ ಮೇಲೆ ಹಲ್ಲೆ ನಡೆಸಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಮಧ್ಯೆ ಪ್ರವೇಶಿಸಿದ್ದು, ಪೊಲೀಸರ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು ಇದರಿಂದ ನಗರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಬೇತಮಂಗಲ, ಗ್ರಾಮೀಣ ಭಾಗಕ್ಕಿಲ್ಲ: ಕೆಜಿಎಫ್ ಕ್ಷೇತ್ರದ ನಗರ ಭಾಗದ ಜನತೆಗೆ ತಟ್ಟಿದ ಬಂದ್ ಬಿಸಿ ಗ್ರಾಮೀಣ ಪ್ರದೇಶಗಳಾದ ಬೇತಮಂಗಲ, ಸುಂದರಪಾಳ್ಯ, ಕ್ಯಾಸಂಬಳ್ಳ ಗ್ರಾಮಗಳಿಗೆ ತಟ್ಟಲಿಲ್ಲ. ಬಸ್ ಸಂಚಾರ, ಆಟೋ ಸೇರಿದಂತೆ ಇತರೆ ಎಲ್ಲಾ ವಾಹನಗಳ ಸಂಚಾರಗಳು ಮತ್ತು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಸಲಾಯಿತು. ಶಾಲಾ ಕಾಲೇಜು, ಬ್ಯಾಂಕ್‌ಗಳು, ಗ್ರಾಮ ಪಂಚಾಯಿತಿ ಕಚೇರಿಗಳು ಕಾರ್ಯ ನಿರ್ವಹಿಸಿದವು.