ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಬೋಗಸ್ ತಡೆಗೆ ರಾಜ್ಯಾದ್ಯಂತ ಬಯೋವುಟ್ರಿಕ್ ಜಾರಿ'

Srinivasa Murthy VN
Updated On : 4 Jul 2013, 12:38 pm

ಕೋಲಾರ: ರಾಜ್ಯದಲ್ಲಿ ಈ ಹಿಂದೆ ವಿತರಣೆ ಆಗಿರುವ 98 ಲಕ್ಷ ಪಡಿತರ ಚೀಟಿಗಳಲ್ಲಿ ಸಾಕಷ್ಟು ಬೋಗಸ್ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಬಯೋವುಟ್ರಿಕ್ ಪದ್ಧತಿಯನ್ನು ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಿ ಬೋಗಸ್ ಕಾರ್ಡುಗಳನ್ನು ರದ್ದುಪಡಿಸಲು ಉದ್ದೇಶಿಸಲಾಗಿದೆ ಎಂದು ಆಹಾರ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಬುಧವಾರ ಕೋಲಾರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಆರು ಜಿಲ್ಲೆಗಳಾದ ತುಮಕೂರು, ಚಿಕ್ಕಮಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾಂ ಹಾಗೂ ಬೆಂಗಳೂರು ವಿಭಾಗದಲ್ಲಿ ಈಗಾಗಲೇ ಬಯೋವುಟ್ರಿಕ್ ಪದ್ಧತಿ ಜಾರಿಗೆ ತರಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಈ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಈ ಹಿಂದಿನ ಸರ್ಕಾರ ಮನಸ್ಸು ಮಾಡಿದ್ದರೆ ಬಯೋವುಟ್ರಿಕ್ ಪದ್ಧತಿಯನ್ನು ಜಾರಿ ಮಾಡಿ ಬೋಗಸ್ ಕಾರ್ಡುಗಳನ್ನು ರದ್ದು ಮಾಡಬಹುದಾಗಿತ್ತು. ಅರ್ಹರಿಗೆ ಬಿಪಿಎಲ್ ಕಾರ್ಡು ಹಾಗೂ ಆಹಾರ ಪದಾರ್ಥಗಳು ಸರಿಯಾಗಿ ಸಿಗಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ಅನಧಿಕೃತ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುವ ಸಲುವಾಗಿ ಬಯೋವುಟ್ರಿಕ್ ಸಾಧನವನ್ನು ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸುವುದಕ್ಕೆ ಯತ್ನ ನಡೆಸಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬಿಪಿಎಲ್ ಕಾರ್ಡುದಾರರಿಗೆ 1ಕ್ಕೆ 1 ಕೆಜಿ ಅಕ್ಕಿ ಯಶಸ್ವಿಯಾಗಬೇಕಾದರೆ ಬೋಗಸ್ ಕಾರ್ಡುಗಳಿಗೆ ಕಡಿವಾಣ ಅಗತ್ಯ. ಸೋರಿಕೆ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಕೆಲವರು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದರೂ ನ್ಯಾಯಬೆಲೆ ಅಂಗಡಿಗಳಿಗೆ ಬರುತ್ತಿಲ್ಲ. ಇವರಿಗೆ ನಿಗದಿಯಾದ ಆಹಾರವನ್ನು ಬೇರೆಯವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಅಗ್ಗದ ದರದಲ್ಲಿ ಸಿಗುವ ಆಹಾರವನ್ನು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಸರ್ಕಾರಕ್ಕೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಮೂರು ತಿಂಗಳಲ್ಲಿ ಬೋಗಸ್ ಕಾರ್ಡುಗಳನ್ನು ಪತ್ತೆ ಮಾಡಿ ಅನರ್ಹಗೊಳಿಸಬೇಕು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಸರ್ಕಾರದ ಯೋಜನೆ ಯಶಸ್ವಿಗೊಳಿಸಬೇಕೆಂದು ತಾಕೀತು ಮಾಡಿದರು.
ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಇರುವ ಸಮಸ್ಯೆ ನಿವಾರಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ ರೀತಿ ತಾವುಗಳು ಇಲಾಖೆಯಲ್ಲಿ ಸೋರಿಕೆ ತಡೆಗಟ್ಟಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಬಡವರಿಗೆ ಸಹಾಯ ಮಾಡಬೇಕೆಂದರು.
ಶಾಸಕರಾದ ಕೆ.ಎಂ.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಕೋಡಿಹಳ್ಳಿ ಮಂಜುನಾಥಗೌಡ, ಆಹಾರ ಇಲಾಖೆಯ ಆಯುಕ್ತ ಹರ್ಷ ಗುಪ್ತಾ, ಸಲಹೆಗಾರ ಹರೀಶ್‌ಗೌಡ, ಜಿಪಂ ಅಧ್ಯಕ್ಷೆ ಚೌಡೇಶ್ವರಿ, ಉಪಾಧ್ಯಕ್ಷೆ ರತ್ನಮ್ಮ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement