ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೋಗಸ್ ರೇಷನ್ ಕಾರ್ಡ್ ಪತ್ತೆಗೆ ಸಹಕರಿಸಿ

Srinivasa Murthy VN
Updated On : 4 Jul 2013, 12:38 pm

ಕೋಲಾರ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ) ನಮಗೂ ಆಹಾರ ಇಲಾಖೆಗೆ ಸಂಬಂಧವಿಲ್ಲವೆಂಬಂತೆ ವರ್ತಿಸಬಾರದು, ತಮ್ಮ ವ್ಯಾಪ್ತಿಯಲ್ಲಿ ಬೋಗಸ್ ರೇಷನ್ ಕಾರ್ಡುಗಳನ್ನು ಪತ್ತೆ ಮಾಡಲು ಸಹಕಾರ ನೀಡಬೇಕೆಂದು ಆಹಾರ ಇಲಾಖೆಯ ಆಯುಕ್ತ ಹರ್ಷ ಗುಪ್ತ ಸೂಚಿಸಿದರು.
ಅವರು ಬುಧವಾರ ನಗರದಲ್ಲಿ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪಿಡಿಒಗಳು ನಮಗೆ ಗ್ರಾಮ ಪಂಚಾಯಿತಿ ಕೆಲಸಗಷ್ಟೆ ಮುಖ್ಯವೆಂದು ತಿಳಿಯದೆ ಆಹಾರ ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕೆ ಗಮನ ನೀಡಬೇಕೆಂದರು.
ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಸಮೀಪದ ಗ್ರಾಪಂಗಳಲ್ಲೂ ಸಂಬಂಧಪಟ್ಟವರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ, ಈ ಸಂಬಂಧ ಈಗಾಗಲೇ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ, ಅರ್ಜಿದಾರರು ಬಂದಾಗ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡಿ, ಗ್ರಾಪಂಗಳಿಗೆ ಬೇಕಾದ ಕಂಪ್ಯೂಟರ್,
ಫೋನ್ ವ್ಯವಸ್ಥೆ, ಇಂಟರ್‌ನೆಟ್ ಸೌಲಭ್ಯಕ್ಕೆ ಆಹಾರ ಇಲಾಖೆಯಿಂದ ಅಗತ್ಯ ನೆರವು ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಖುದ್ಧು ಭೇಟಿ ನೀಡಿ: ಕಾರ್ಡುದಾರರ ಮನೆಗಳಿಗೆ ಖುದ್ಧು ಭೇಟಿ ನೀಡಿ ಪರಿಶೀಲನೆ ಮಾಡುವುದಕ್ಕೆ ಅವಕಾಶವಿದೆ, ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒಗಳು ನ್ಯಾಯ ಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಅನ್ಯಾಯವಾಗದ ರೀತಿಯಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ತಾವೇ ಕೆಲವು ಅಂಗಡಿಗಳನ್ನು ಗುರುತಿಸಿ ಪಿಡಿಒಗಳ ಮೂಲಕ ತಪಾಸಣೆ ಮಾಡಿಸಿದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಜಾಗೃತ ಸಮಿತಿಗಳು ಇನ್ನು ರಚನೆ ಆಗಿಲ್ಲವೆಂದು ಹರ್ಷಗುಪ್ತ ತಿಳಿಸಿದಾಗ ಮಧ್ಯೆ ಪ್ರವೇಶಿಸಿದ ಸಚಿವ ದಿನೇ ಶ್‌ಗುಂಡೂರಾವ್, ಜಾಗೃತ ಸಮಿತಿಗಳ ರಚನೆಯನ್ನು ಉಪ ನಿರ್ದೇಶಕರು ಮಾಡಿದಲ್ಲಿ ಅದಕ್ಕೆ ಕಿಮ್ಮತ್ತು ಇರುವುದಿಲ್ಲ, ಗ್ರಾಪಂ ಅಧ್ಯಕ್ಷರು ಸೇರಿದಂತೆ ರಾಜಕಾರಣಿಗಳನ್ನು ಸಮಿತಿಗೆ ಸೇರಿಸಿಕೊಂಡಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಸಮಿತಿಯಲ್ಲಿ ಗೊಂದಲಗಳು ಉಂಟಾಗುವುದರಿಂದ ಕಾರ್ಡುದಾರರು, ಗ್ರಾಮದ ಮುಖ್ಯಸ್ಥರು, ಗ್ರಾಪಂ ಬಿಲ್‌ಕಲೆಕ್ಟರ್ ಸೇರಿದಂತೆ 10 ಜನರ ಹೆಸರು ಸೂಚಿಸಿದಲ್ಲಿ ಅದನ್ನು ಪರಿಶೀಲಿಸಿ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಕಾಲ ಕಾಲಕ್ಕೆ ಸಭೆ ನಡೆಸಬೇಕು: ಇದಕ್ಕೆ ಒಪ್ಪಿದ ಹರ್ಷಗುಪ್ತ ಅವರು, ಜಾಗೃತ ಸಮಿತಿ ರಚನೆ ಜತೆಗೆ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಬೇಕು ಹಾಗೂ ಸಮಿತಿಯ ಪ್ರತಿಯೊಬ್ಬರಿಗೂ ಮೊಬೈಲ್ ಮೂಲಕ ಮಾಹಿತಿ ನೀಡಬೇಕೆಂದು ಸೂಚಿಸಿದರು.
ವಾಜಪೇಯಿ ಜನ ಸ್ನೇಹೀ ಕೇಂದ್ರದಲ್ಲೂ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಿಎಸ್‌ಎನ್‌ಎಲ್‌ನಿಂದ ಬೇಕಾದ ಸೌಲಭ್ಯ ಪಡೆಯುವುದಕ್ಕೆ ಜಿಲ್ಲಾ ಆಡಳಿತ ಮತ್ತು  ಜಿ.ಪಂ.ನಿಂದ ಸಹಾಯ ಪಡೆಯಬೇಕೆಂದು ತಿಳಿಸಿದರು.
ಅವರು ಹೇಳಿದ್ದನ್ನಷ್ಟೆ ಕೇಳಿದ್ದಾರೆ: ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳು ಬೋಗಸ್ ಕಾರ್ಡುಗಳ ಪರಿಶೀಲನೆ ಮಾಡಿಲ್ಲ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಲ್ಲ, ಅಂಗಡಿ ಮಾಲೀಕರು ಹೇಳಿದ್ದನ್ನೇ ಕೇಳಿಸಿಕೊಂಡು ಮೌನಕ್ಕೆ ಶರಣಾಗಿದ್ದಾರೆ, ಕೆಲವು ಕಡೆ ನೂರಾರು ಕಾರ್ಡುಗಳನ್ನು ಅಂಗಡಿ ಮಾಲೀಕರು ಒತ್ತೆಯಿಟ್ಟುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, 450 ರಿಂದ 500 ಮಂದಿ ಕಾರ್ಡುದಾರರು ಇರುವ ಕಡೆ ನ್ಯಾಯಬೆಲೆ ಅಂಗಡಿ ತೆರೆಯಬೇಕೆಂದು ಸಚಿವರನ್ನು ಕೋರಿದರು. ಮಾಲೂರು ಶಾಸಕ ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement