ವಸೂಲಿ ಬಿಡಿ, ಪ್ರಾಮಾಣಿಕ ಕೆಲಸ ಮಾಡಿ
ಕ.ಪ್ರ. ವಾರ್ತೆ ಕೋಲಾರ ಜು.3
'ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಲಂಚ ತಾಂಡವವಾಡುತ್ತಿದೆ. ಮಾತ್ರವಲ್ಲ, ಯಾವುದೇ ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ. ನಿಮ್ಮ ಕಾರ್ಯ ವೈಖರಿ ಬಗ್ಗೆ ಎಲ್ಲ ಕಡೆ ಟಾಕ್ ಆಫ್ ದ ಟೌನ್ ಆಗಿದೆ...'
ಹೀಗೆಂದು ಕೋಲಾರ ಉಪ ವಿಭಾಗಾಧಿಕಾರಿ ಆಯೇಷಾ ಪರ್ವಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ ಹಾಗೂ ಮಾಲೂರು ಶಾಸಕ ಮಂಜುನಾಥಗೌಡ.
ಕ್ರಮ ಕೈಗೊಳ್ಳಿ: ನಗರದ ಜಿಪಂ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇ ಶ್ಗುಂಡೂರಾವ್ ಬುಧವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಉಪ ವಿಭಾಗಾಧಿಕಾರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಈ ಇಬ್ಬರು ಶಾಸಕರು, ನಮ್ಮಿಂದಲೇ ಆಗಿರುವ ತಪ್ಪು ಸರಿಪಡಿಸಿಕೊಡಿ ಎಂದು ಅರ್ಜಿ ಸಲ್ಲಿಸಿದರೆ ತಾವು ಕ್ಯಾರೆ ಅನ್ನುವುದಿಲ್ಲ. ಬೇಕಾಗಿಯೇ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ. ಸರ್ಕಾರ ಇವರ ಮೇಲೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕರ ಆರೋಪದಿಂದ ತಬ್ಬಿಬ್ಬಾದ ವಿಭಾಗಾಧಿಕಾರಿ ನನ್ನ ಕಚೇರಿಯಲ್ಲಿ ಯಾವುದೇ ಕಡತಗಳು ಬಾಕಿ ಉಳಿಸಿಕೊಂಡಿಲ್ಲ. ನಿಮ್ಮ ಆರೋಪ ಸರಿಯಿಲ್ಲವೆಂದು ಸ್ಪಷ್ಟನೆ ನೀಡಿದಾಗ, ಕುಪಿತರಾದ ಶಾಸಕರು ಈಗಲೇ ನಿಮ್ಮ ಕಚೇರಿಗೆ ಬರುತ್ತೇವೆ. ಎಷ್ಟು ಕಡತಗಳು ಬಾಕಿ ಇವೆ ಎಂಬುದನ್ನು ತೋರಿಸುವುದಾಗಿ ಸವಾಲು ಹಾಕಿದರು.
ರೇಟ್ ಫಿಕ್ಸ್ ಮಾಡಿದ್ದಾರೆ: ಪರಿಸ್ಥಿತಿ ಅರಿತ ಸಚಿವ ದಿನೇಶ್ ಗುಂಡೂರಾವ್, ಕಡತಗಳು ವಿಲೇವಾರಿ ಮಾಡದಿರುವುದಕ್ಕೆ ಕಾರಣವೇನು ಎಂದಾಗ, ಶಾಸಕರಾದ ಕೆ.ಎಂ.ನಾರಾಯಣಸ್ವಾಮಿ ಮತ್ತು ಮಂಜುನಾಥಗೌಡರಿಬ್ಬರು ಏಕ ದನಿಯಲ್ಲಿ ಲಂಚ ವಿಪರೀತಿ ಹೆಚ್ಚಾಗಿದೆ. ಯಾವುದೇ ಕಡತ ವಿಲೇವಾರಿ ಆಗಬೇಕಾದರೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ದೂರಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿ: ಇದನ್ನು ಅಧಿಕಾರಿ ನಿರಾಕರಿಸಲು ಮುಂದಾದಾಗ, ಮೇಡಂ ತಾವು ಇನ್ನು ಯುವಕರಿದ್ದೀರಾ, ಡಿಸಿ ಆಗುತ್ತೀರಾ, ಪ್ರಾಮಾಣಿಕವಾಗಿ ಕೆಲಸ ಮಾಡಿ, ನಿಮ್ಮ ಬಗ್ಗೆ ಸಾಕಷ್ಟು ಆರೋಪಗಳು ಇವೆ, ನಾವು ನಿಮ್ಮಿಂದ ಏನನ್ನು ಬಯಸುವುದಿಲ್ಲ, ಕ್ಲೀನ್ ಹ್ಯಾಂಡ್ಗಳು ನಾವು, ಒಂದು ಕಪ್ ಕಾಫಿ ಸಹ ಕೇಳುವುದಿಲ್ಲ. ಬಡವರ ಕೆಲಸ ಮಾಡಿ ಎಂದಷ್ಟೆ ಹೇಳುತ್ತಿದ್ದೇವೆ ಎಂದು ನಾರಾಯಣಸ್ವಾಮಿ ಕಿವಿಮಾತು ಹೇಳಿದರು.
ನೀವೇ ಹೀಗೆ ಹೇಳಿದರೆ ಹೇಗೆ?: ಸಮಸ್ಯೆಗಳು ಇದ್ದರೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ ಇತ್ಯರ್ಥ ಮಾಡಬೇಕು. ತಾವು ನನ್ನ ಮುಂದೆ ಅಧಿಕಾರಿಯ ವಿರುದ್ಧ ದೂರು ನೀಡಿದರೆ ನಾನೇನು ಮಾಡಲು ಸಾಧ್ಯವಿಲ್ಲ, ನಾನು ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವನೂ ಅಲ್ಲವೆಂದಾಗ, ಸಚಿವರು ಈ ರೀತಿ ಹೇಳಬಾರದು, ನಿಮಗೆ ಅಧಿಕಾರವಿದೆ. ಸರ್ಕಾರದ ಗಮನಕ್ಕೆ ತನ್ನಿ ಎಂದು ನಾರಾಯಣಸ್ವಾಮಿ ಮನವಿ ಮಾಡಿದರು.
ತಹಸೀಲ್ದಾರ್ಗೆ ಅಧಿಕಾರ ನೀಡಿ: ಮಂಜುನಾಥಗೌಡರು ಮತ್ತೊಂದು ಹೆಜ್ಜೆ ಮುಂದೊಗಿ, ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡುವ ಅಧಿಕಾರ ಆಯಾ ತಾಲೂಕು ತಹಸೀಲ್ದಾರ್ಗೆ ನೀಡಿ, ನಾವು ಉಪ ವಿಭಾಗಾಧಿಕಾರಿಯ ಬಳಿ ಹೋಗುವುದಿಲ್ಲವೆಂದು ಖಾರವಾಗಿ ಪ್ರತಿಕ್ರಿಯಿಸಿದರು. ಅನಿರೀಕ್ಷಿತವಾಗಿ ಶಾಸಕರಿಬ್ಬರು ಸಚಿವರ ಎದುರೇ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದರಿಂದ ಉಪ ವಿಭಾಗಾಧಿಕಾರಿ ಆಯೇಷಾ ಫರ್ವಿನ್ ಪೇಚಿಗೆ ಸಿಲುಕಬೇಕಾಯಿತು.
ಸಚಿವ ದಿನೇಶ್ ಗುಂಡೂರಾವ್ಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ
ಕೋಲಾರ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಭರ್ಜರಿಯಾಗಿ ಸ್ವಾಗತಿಸಿದರು.
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಸಚಿವರನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕರಾದ ಕೆ.ಎಂ.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್, ಬಂಗಾರಪೇಟೆ ಬ್ಸಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ, ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಚಂದ್ರಾರೆಡ್ಡಿ, ಮುಖಂಡರಾದ ಕುಮಾರ್, ಜಯದೇವ್, ಗೋಪಾಲ್, ಕಾರ್ತಿಕ್, ಕೋಲಾರ ಬ್ಸಾಕ್ ಅಧ್ಯಕ್ಷ ಪ್ರಸಾದ್ಬಾಬು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಊರುಬಾಗಿಲು ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ನ್ ಭಾರತಿ, ಸಂಜಯ್ಯಾದವ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಚಿವರು ಪ್ರಗತಿ ಪರಿಶೀಲನಾ ಸಭೆಯ ನಂತರ ಪಿಸಿ ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನೀಡುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿದರು.
3.30 ಲಕ್ಷ ಕುಟುಂಬಕ್ಕೆ 3.58 ಲಕ್ಷ ಕಾರ್ಡ್!
ಕೋಲಾರ: ಜಿಲ್ಲೆಯಲ್ಲಿ ಪಡಿತರ ಚೀಟಿ ಪಡೆಯಲು ಅರ್ಹತೆ ಹೊಂದಿರುವ ಕುಟುಂಬಗಳು 3.30 ಲಕ್ಷ. ಆದರೆ, 3.58 ಲಕ್ಷ ಪಡಿತರ ಚೀಟಿಗಳು ವಿತರಣೆ ಮಾಡಿರುವುದಕ್ಕೆ ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅನುಮಾನ ವ್ಯಕ್ತಪಡಿಸಿದರು.
ನಗರದ ಜಿಪಂ ನಲ್ಲಿ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಇಲಾಖೆಯ ಉಪ ನಿರ್ದೇಶಕರು ಜಿಲ್ಲೆಯಲ್ಲಿ 3.30 ಲಕ್ಷ ಪಡಿತರ ಕುಟುಂಬಗಳು ಇದ್ದು, ಈವರೆಗೆ 2.68,067 ಮಂದಿಗೆ ಬಿಪಿಎಲ್ 30307 ಅಂತ್ಯೋದಯ ಕಾರ್ಡುಗಳು ಹಾಗೂ 31626 ಮಂದಿಗೆ ಎಪಿಎಲ್ ಕಾರ್ಡುಗಳು ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಉಪ ನಿರ್ದೇಶಕರಿಗೆ ತಾಕೀತು: ಇದರಿಂದ ಬೆಚ್ಚಿಬಿದ್ದ ಸಚಿವ ದಿನೇಶ್ ಗುಂಡೂರಾವ್ ಅವರು, ಬೇಡಿಕೆಗಿಂತ ಹೆಚ್ಚು ಪಡಿತರ ಚೀಟಿಗಳು ವಿತರಣೆ ಮಾಡಿರುವುದು ಗಮನಿಸಿದರೆ ಸೋರಿಕೆ ಮತ್ತು ಬೋಗಸ್ ಆಗಿರುವುದು ಮೇಲ್ನೋಟಕ್ಕೆ ಕಾಣ ಬರುತ್ತಿರುವುದರಿಂದ ಸಮಗ್ರವಾಗಿ ಪರಿಶೀಲನೆ ನಡೆಸಿ ಅಕ್ರಮವಾಗಿ ಪಡೆದಿರುವ ಕಾರ್ಡುಗಳನ್ನು ರದ್ದು ಪಡಿಸಬೇಕೆಂದು ಉಪ ನಿರ್ದೇಶಕರಿಗೆ ತಾಕೀತು ಮಾಡಿದರು.
ಶೇಕಡ 90ರಷ್ಟು ಪಡಿತರ ಚೀಟಿ ವಿತರಣೆ: ಜಿಲ್ಲೆಯಲ್ಲಿ ಶೇಕಡ 90ರಷ್ಟು ಪಡಿತರ ಚೀಟಿ ವಿತರಣೆ ಆದಂತಾಗಿದೆ. ಆಗಿದ್ದ ಮೇಲೆ ಇನ್ನು ಮುಂದೆ ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಯಾರೊಬ್ಬರು ಅರ್ಜಿ ಹಾಕುವಂತಿಲ್ಲ, ಆದರೂ 19 ಸಾವಿರ ಮಂದಿ ಹೊಸ ಕಾರ್ಡುಗಳಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ತಾವು ನೀಡಿರುವ ಮಾಹಿತಿಯ ಬಗ್ಗೆ ಅನುಮಾನ ಮೂಡುತ್ತಿದೆ. ಈ ಹಿಂದೆ ವಿತರಣೆ ಆಗಿರುವ ಪಡಿತರ ಚೀಟಿಗಳಲ್ಲಿ ಅನರ್ಹರು ಇದ್ದಾರೆಂಬ ಗುಮಾನಿ ಉಂಟಾಗಿರುವುದರಿಂದ ತಕ್ಷಣ ಬೋಗಸ್ಕಾರ್ಡುಗಳನ್ನು ಪತ್ತೆ ಮಾಡಿ ರದ್ದುಪಡಿಸಿ ಎಂದು ಸೂಚಿಸಿದರು.
ಬೋಗಸ್ ಕಾರ್ಡ್ ರದ್ದು ಮಾಡಿ: ಬೋಗಸ್ ಕಾರ್ಡ್ಗಳನ್ನು ರದ್ದು ಮಾಡದಿದ್ದರೆ ಸರ್ಕಾರದ ಸಬ್ಸಿಡಿ ಹಣ ಅನರ್ಹರಿಗೆ ನೀಡಿದಂತಾಗುತ್ತದೆ, ಕೆಲವರು ಕಾರ್ಡುಗಳನ್ನು ಹೊಂದಿದ್ದರೂ ನ್ಯಾಯ ಬೆಲೆ ಅಂಗಡಿಗಳಿಗೆ ಬರುವುದಿಲ್ಲ. ಇವರಿಗೆ ನೀಡಬೇಕಾದ ಪಡಿತರ ಬೇರೆಯವರಿಗೆ ಹೋಗುತ್ತದೆ, ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಕೆಲವರು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಬೋಗಸ್ ಕಾರ್ಡುಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಬಯೋ ಮೆಟ್ರಿಕ್ ಪದ್ದತಿ ಅಳವಡಿಸಿಕೊಳ್ಳುವುದಕ್ಕೆ ಗಮನ ನೀಡಬೇಕೆಂದರು.
ಇನ್ನು ಮೂರು ತಿಂಗಳಲ್ಲಿ ಬೋಗಸ್ ಕಾರ್ಡುಗಳು ರದ್ದು ಆಗಬೇಕು, ಸರ್ಕಾರದ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಗುರಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ನ್ಯಾಯ ಬೆಲೆ ಅಂಗಡಿಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಕಾರ್ಡುಗಳನ್ನು ಪರಿಶೀಲಿಸಿ, ಲೋಪ ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಚಿವರ ಅಸಮಾಧಾನ: ಈವರೆಗೆ ಜಿಲ್ಲೆಯಲ್ಲಿ ಬೋಗಸ್ ಕಾರ್ಡುಗಳ ಪತ್ತೆ ಕಾರ್ಯ ನಡೆಯದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅರ್ಹರಿಗೆ ಹೊಸ ಕಾರ್ಡುಗಳನ್ನು ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಅದೇ ರೀತಿ ಬೋಗಸ್ ಕಾರ್ಡುಗಳನ್ನು ರದ್ದು ಮಾಡದಿದ್ದರೆ ಸರ್ಕಾರದ ಉದ್ದೇಶ ಸಾರ್ಥಕವಾಗುವುದಿಲ್ಲವೆಂದು ತಿಳಿಸಿದರು.
ಪರವಾನಗಿ ರದ್ದು ಮಾಡಿ: ಕೆಲವರು ನ್ಯಾಯ ಬೆಲೆ ಅಂಗಡಿಗೆ ಪರವಾನಗಿ ಪಡೆದು ಬೇರೊಬ್ಬರಿಗೆ ಅಂಗಡಿಯ ಜವಾಬ್ದಾರಿ ವಹಿಸಿರುವುದು ತಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಅಂತಹ ಅಂಗಡಿಗಳಿಗೆ ನೀಡಿರುವ ಪರವಾನಗಿ ರದ್ದು ಮಾಡಿ ಎಂದು ಆದೇಶಿಸಿದರು.
ತಾತ್ಕಾಲಿಕ ಪಡಿತರ ಚೀಟಿಗಳನ್ನು ಖಾಯಂಗೊಳಿಸುವುದಕ್ಕೆ ಈ ತಿಂಗಳೇ ಕಡೆ. 13 ಸಾವಿರ ತಾತ್ಕಾಲಿಕ ಕಾರ್ಡುದಾರರಿಗೆ ಶಾಶ್ವತವಾದ ಕಾರ್ಡುಗಳನ್ನು ನೀಡಬೇಕಾಗಿದ್ದು, ಇದರಲ್ಲಿ ಎಷ್ಟು ಸರಿಯಿದೆ, ಎಷ್ಟು ಬೋಗಸ್ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಉಪ ನಿರ್ದೇಶಕರಿಗೆ ತಿಳಿಸಿದರು.
ಅಕ್ಕಿ ಖರೀದಿಗೆ ಕ್ರಮ; ದಿನೇಶ್ ಗುಂಡೂರಾವ್
ಕೋಲಾರ: ರಾಜ್ಯದ ಬಿಪಿಎಲ್ ಕಾರ್ಡುದಾರರಿಗೆ ಇದೇ ಜು.10 ರಿಂದ ಜಾರಿಗೆ ಬರಲಿರುವ ಅಕ್ಕಿ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿಸಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿ ಬುಧವಾರ ಆಹಾರ ಇಲಾಖೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಪಿಎಲ್ ಕಾರ್ಡುದಾರರಿಗೆ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಪ್ರತಿ ತಿಂಗಳು 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದು, ಕೇಂದ್ರ ಸರ್ಕಾರ ಪ್ರತಿ ತಿಂಗಳು 20 ರಿಂದ 30 ಸಾವಿರ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಸಮ್ಮತಿಸಿದೆ ಎಂದರು.
ಕೇಂದ್ರ ಸರ್ಕಾರ ನೀಡುವ ಅಕ್ಕಿ ಜತೆಗೆ ರಾಜ್ಯ ಸರ್ಕಾರವೂ ಲೇವಿ ಅಕ್ಕಿ ಸಂಗ್ರಹಣೆ ಹಾಗೂ ಇನ್ನಿತರ ಮೂಲಗಳಿಂದ ಅಕ್ಕಿ ಸಂಗ್ರಹಣೆ ಮಾಡಿ ಸರ್ಕಾರದ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.
ಟೆಂಡರ್ ಕರೆಯಲಾಗುತ್ತದೆ: ಕೊರತೆ ನಿವಾರಣೆ ಮಾಡಲು ರಾಜ್ಯಕ್ಕೆ ಹೆಚ್ಚುವರಿಯಾಗಿ 1 ಲಕ್ಷ ಮೆಟ್ರಿಕ್ಟನ್ ಅಕ್ಕಿ ಬೇಕಾಗಿರುವುದರಿಂದ ಬೇರೆ ಕಡೆಗಳಿಂದ ಅಕ್ಕಿಯನ್ನು ಖರೀದಿ ಮಾಡಲು ಟೆಂಡರ್ ಕರೆಯಲಾಗುತ್ತಿದೆ ಎಂದು ಹೇಳಿದರು.
ಮುಕ್ತ ಮಾರುಕಟ್ಟೆಯಲ್ಲಿ ಖರೀದಿ: ಛತ್ತೀಸ್ಗಡ್ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಅಕ್ಕಿ ತರಿಸಿಕೊಳ್ಳುವುದಕ್ಕೆ ಈಗಾಗಲೇ ತಯಾರಿ ನಡೆದಿದೆ. ಮಾತ್ರವಲ್ಲ, ಒಂದು ವೇಳೆ ಬೇಡಿಕೆಗೆ ತಕ್ಕಷ್ಟು ಅಕ್ಕಿ ಸಿಗದಿದ್ದ ಪಕ್ಷದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ಖರೀದಿ ಮಾಡಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.