ಪರಮೇಶ್ವರ ಡಿಸಿಎಂ ಆದಲ್ಲಿ ಸ್ವಾಗತ:ಮುನಿಯಪ್ಪ
ಚಿಕ್ಕಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಉಪ ಮುಖ್ಯಮುಂತ್ರಿ ಸ್ಥಾನ ನೀಡಿದರೆ ಸ್ವಾಗತಿಸುವುದಾಗಿ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ದಗೊಳ್ಳುತ್ತಿದ್ದು, ಈಗಾಗಲೇ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಸಂಘಟನೆಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದರು. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಉಪ ಮುಖ್ಯಮುಂತ್ರಿ ಸ್ಥಾನವನ್ನು ಕೊಡಬೇಕೆನ್ನುವುದರ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಪರಮೇಶ್ವರ್ ಅವರಿಗೆ ಕೊಡಲು ಮುಂದಾದರೆ ಅದನ್ನು ಸ್ವಾಗತಿಸುತ್ತೇನೆ ಎಂದರು.
ರೇಷ್ಮೆ ಮಾರಾಟ ಕೇಂದ್ರ ಸ್ಥಾಪನೆ: ಶಾಸಕ ಕೊತ್ತೂರು ಮಂಜುನಾಥ್ ಭರವಸೆ
ಮುಳಬಾಗಿಲು: ರೈತರು ಬೆಳೆದ ರೇಷ್ಮೆ ಗೂಡನ್ನು ಮಾರಾಟ ಮಾಡಲು ಪಟ್ಟಣದಲ್ಲಿ ರೇಷ್ಮೆ ಮಾರಾಟ ಕೇಂದ್ರವನ್ನು ಪ್ರಾರಂಭಿಸಲು ಸಂಬಂಧ ಪಟ್ಟ ಇಲಾಖೆಯ ಸಚಿವರ ಬಳಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದ್ದಾರೆ. ಅವರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾಂತರಾಜ ಸರ್ಕಲ್ ಬಳಿ ರು.65 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ರೇಷ್ಮೆ ಬೆಳೆ ಬೆಳೆಯುವುದರಿಂದ ರೈತರಿಗೆ ಉತ್ತಮ ಆದಾಯ ಸಿಗುತ್ತದೆ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಹಲವಾರು ಸವಲತ್ತು ನೀಡುತ್ತಿದೆ. ಮಾತ್ರವಲ್ಲ, ಜೊತೆಗೆ ರೇಷ್ಮೆ ಮನೆ ನಿರ್ಮಾಣ ಮಾಡಲು ಪಿಎಲ್‌ಡಿ ಬ್ಯಾಂಕ್‌ನಿಂದ ಕೇವಲ 25 ಪೈಸೆ ಬಡ್ಡಿ ದರದಲ್ಲಿ 6 ಲಕ್ಷವರೆಗೆ ಸಾಲ ನೀಡುತ್ತಿದೆ ರೈತರು ಇದನ್ನು ಸದುಪಯೋಗಿ ಪಡಿಸಿಕೊಂಡು ಅರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು. ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಪ್ರಭಾಕರ್, ಎಸ್.ಬಿ.ತುಪ್ಪದ, ಟಿ.ವಿ.ಸುಬ್ರಮಣ್ಯಂ, ವೆಂಕಟೇಶಪ್ಪ, ವಸಂತ ಕುಮಾರ್, ಲಲಿತಮ್ಮ, ಸೋಮಶೇಖರ್, ಶ್ರೀರಾಮಪ್ಪ, ಎಂ.ಸಿ.ನೀಲಕಂಠೇಗೌಡ, ಉತ್ತನೂರು ಶ್ರೀನಿವಾಸ್, ಡಿ.ವಿ.ಶ್ರೀನಿವಾಸಮೂರ್ತಿ, ಜಿ.ರಾಮಲಿಂಗಾರೆಡ್ಡಿ, ಕೊಲದೇವಿ ಶ್ರೀನಿವಾಸ್, ಕಲ್ಲುಪಲ್ಲಿ ಪ್ರಕಾಶ್ ಉಪಸ್ಥಿತರಿದ್ದರು.
ರಾಘವೇಂದ್ರ ಕರವೇ ಜಿಲ್ಲಾಧ್ಯಕ್ಷ
ಕೋಲಾರ: ಕರ್ನಾಟಕ ರಕ್ಷಣಾ ವೇದಿಕೆ ಕೋಲಾರ ಜಿಲ್ಲಾ ನೂತನ ಅಧ್ಯಕ್ಷರಾಗಿ ಮೇಡಿಹಾಳ ಎಂ.ಕೆ.ರಾಘವೇಂದ್ರ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇಮಕಾತಿ ಆದೇಶ ಹೊರಡಿಸಿದ್ದು, ಗಡಿ ಜಿಲ್ಲೆ ಬಲ ಪಡಿಸುವ ದೃಷ್ಟಿಯಿಂದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.