ಸರ್ಕಾರಿ ಸವಲತ್ತು ಅರಿವು:ಜನ ಜಾಗೃತಿ ಬೀದಿ ನಾಟಕ
ಕೋಲಾರ: ಸರ್ಕಾರದ ವಿವಿಧ ಜನಪರ ಯೋಜನೆಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಬೀದಿ ನಾಟಕ ತಂಡಗಳಿಗೆ ಜವಾಬ್ದಾರಿ ವಹಿಸಿದೆ.
ಈ ಹಿನ್ನಲೆಯಲ್ಲಿ ಅರ್ಹ ಕಲಾವಿದರನ್ನು ಒಳಗೊಂಡ ಬೀದಿ ನಾಟಕ ತಂಡಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ರಾಜ್ಯದಲ್ಲಿ ಆರಂಭಿಸಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ಸು ಸಾಧಿಸುವ ಕಲಾ ತಂಡಗಳಿಗೆ ರಾಮನಗರದ ಜಾನಪದ ಲೋಕದಲ್ಲಿ ಮತ್ತಷ್ಟು ವಿಶೇಷ ತರಬೇತಿ ನೀಡಿ ಸರ್ಕಾರದ ಯೋಜನೆಗಳನ್ನು ಜನತೆಗೆ ಪರಿಚಯಿಸುವ ಕಾರ್ಯಕ್ರಮಕ್ಕೆ ಬೀದಿ ನಾಟಕಗಳನ್ನು ಆಸ್ತ್ರವಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ.
ವಿವಿಧ ಸಮಸ್ಯೆಗಳ ಜಾಗೃತಿ: ಕೇಂದ್ರ ಸರ್ಕಾರದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಸಾಮಾಜಿಕ ಪೀಡುಗುಗಳಾದ ವರದಕ್ಷಿಣೆ, ಬಾಲ ವಿವಾಹ, ಏಡ್ಸ್, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ಅಂರ್ತಜಲ ಬಳಕೆ ಮತ್ತು ಅಭಿವೃದ್ಧಿ, ಬಿಸಿಯೂಟ, ಸಾಮಾಜಿಕ ಭದ್ರತೆ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳ ಕುರಿತು ಜನತೆಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಯಶಸ್ವಿ ಅನುಷ್ಠಾನಕ್ಕಾಗಿ ವಾರ್ತಾ ಇಲಾಖೆಯಿಂದ ಬೀದಿನಾಟಕಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸಲು ಬೀದಿ ನಾಟಕಗಳಿಗೆ ತರಬೇತಿ ನೀಡಲು ಗುರುವಾರ ನಗರದಲ್ಲಿ ವಾರ್ತಾ ಇಲಾಖೆ ಮುಂದೆ ಕಿರು ನಾಟಕ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ತಂಡಗಳಿಂದ ಪ್ರಾತ್ಯಕ್ಷಿಕೆ: ಕೋಲಾರ ಜಿಲ್ಲೆಯಿಂದ ಐದು ತಂಡಗಳನ್ನು ಆಯ್ಕೆ ಮಾಡಲು ತಂಡಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು, ಕೋಲಾರ ತಾಲೂಕಿನ ಮಾರ್ಜೇನಹಳ್ಳಿಯ ಪ್ರಕೃತಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಕೋಲಾರದ ಭುವನೇಶ್ವರಿ ನಾಟ್ಯ ಕಲಾ ಅಕಾಡೆಮಿ,ಕಾಳಹಸ್ತಿಪುರದ ವಿನಾಯಕ ಮಹಿಳಾ ಮಂಡಳಿ, ಲಕ್ಷ್ಮೀಸಾಗರದ ಕುವೆಂಪು ಕನ್ನಡ ಕಲಾ ಸಂಘ, ಮಾಲೂರು ತಾಲೂಕಿನ ದೊಡ್ಡಮಲ್ಲೆ ಗ್ರಾಮದ ತಾಯಿಬೇರು ಜಾನಪದ ಕಲಾ ತಂಡ, ಬಂಗಾರಪೇಟೆ ತಾಲೂಕಿನ ಹೀರೇಕರಪನಹಳ್ಳಿಯ ಸರ್ವೋದಯ ಗ್ರಾಮೀಣ ಅಭಿವೃದ್ಧಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಕೋಲಾರದ ಕರ್ನಾಟಕ ಕಲಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ನೋಡುಗರ ಮೆಚ್ಚುಗೆ: ಎಲ್ಲಾ ತಂಡಗಳು ಸರ್ಕಾರದ ಯೋಜನೆಗಳು ಮತ್ತು ಸಮಸ್ಯೆಗಳನ್ನು ಪ್ರತಿ ಬಿಂಬಿಸುವ ಕಿರು ನಾಟಕಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದವು, ಕಲಾವಿದರ ಅಭಿನಯದ ಜತೆಗೆ ವಾದ್ಯ ಮೇಳಗಳು ಗಮನ ಸೆಳೆದವು. ಆಯ್ಕೆಯಾದ 5 ಕಲಾ ತಂಡಗಳ ಮುಖಂಡರಿಗೆ ಕೇಂದ್ರ ಕಚೇರಿ ವತಿಯಿಂದ ಹೆಚ್ಚಿನ ತರಬೇತಿ ನೀಡಲಾಗುತ್ತದೆ ಎಂದು ವಾರ್ತಾಧಿಕಾರಿ ಸಿ.ಎಂ.ರಂಗಾರೆಡ್ಡಿ ತಿಳಿಸಿದರು. ಸಹಾಯಕ ವಾರ್ತಾಧಿಕಾರಿ ಬಿ.ಎಂ ವೆಂಕಟರಾಮಪ್ಪ ಉಪಸ್ಥಿತರಿದ್ದರು.