ಆ.3, 4ರಂದು ಚಿಕ್ಕಬಳ್ಳಾಪುರದಲ್ಲಿ ಉದ್ಯೋಗ ಮೇಳ: ಸಚಿವ ಮೊಯ್ಲಿ
ಕ.ಪ್ರ. ವಾರ್ತೆ ಬೆಂಗಳೂರು ಜು.5
ಚಿಕ್ಕಬಳ್ಳಾಪುರ ಉದ್ಯೋಗ ಮೇಳ 2013 ಅಲ್ಲಿನ ಎಸ್ಜೆಸಿಐಟಿ ಆವರಣದಲ್ಲಿ ಆ. 3 ಮತ್ತು 4ರಂದು ನಡೆಯಲಿದೆ.ಸತತ ಮೂರನೇ ವರ್ಷ ಈ ಉದ್ಯೋಗ ಮೇಳ ನಡೆಸಲಾಗುತ್ತಿದ್ದು, ಈ ಬಾರಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ನಗರ, ರಾಮನಗರ ಜಿಲ್ಲಾಡಳಿತ, ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಎಸ್ಜೆಸಿಐಟಿ, ಕೆವಿಟಿಎಸ್ಡಿಸಿ, ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಕಾರ್ಕಳ ಕಿಸಾನ್ ಸಭಾ ಆಶ್ರಯದಲ್ಲಿ ಇದು ನಡೆಯಲಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ಅವರು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ. ಕಳೆದ ಎರಡು ವರ್ಷ ನಡೆಸಿದ ಉದ್ಯೋಗ ಮೇಳ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಸತತ ಮೂರನೇ ಬಾರಿ ಮೇಳ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಐಟಿ, ಬಿಟಿ, ಉತ್ಪಾದನೆ, ಆಟೋಮೊಬೈಲ್, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ 200ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಆಕಾಂಕ್ಷಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅದಕ್ಕಾಗಿ ಪ್ರತ್ಯೇಕ ವೆಬ್ ವಿಳಾಸ ಸಿದ್ಧಪಡಿಸಲಾಗಿದ್ದು, ಕಂಪನಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜು. 27 ಮತ್ತು 28ರಂದು 9 ತರಬೇತಿ ಕೇಂದ್ರಗಳಲ್ಲಿ ಕೌನ್ಸೆಲಿಂಗ್ ಏರ್ಪಡಿಸಲಾಗಿದೆ. ಅರ್ಜಿ ಸಲ್ಲಿಸಿದವರ ಜತೆಗೆ ಇತರರೂ ಅಲ್ಲಿಯೇ ಹಾಜರಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ಉದ್ಯೋಗ ಮೇಳಕ್ಕೆ ನೇರವಾಗಿ ಬಂದು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.ಗ್ರಾಮಾಂತರ ಪ್ರದೇಶದ ಉದ್ಯೋಗಾಕಾಂಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೇಳ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ತರಬೇತಿಯನ್ನೂ ನೀಡಿ ಆಕಾಂಕ್ಷಿಗಳ ಆಸಕ್ತಿಯ ಕ್ಷೇತ್ರದಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುವುದು. ಆಳ್ವಾಸ್ ಪ್ರಗತಿ ಮತ್ತು ಕೆವಿಟಿಎಸ್ಡಿಸಿಯ ಕೌನ್ಸಿಲರ್ಗಳು ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲಿದ್ದಾರೆ ಎಂದರು.ಉದ್ಯೋಗ ಮೇಳಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಎಸ್ಜೆಸಿಐಟಿ ಪ್ರಾಂಶುಪಾಲರು ಹಾಗೂ ಇತರ ಪ್ರಮುಖರು ಸಮಿತಿಯಲ್ಲಿದ್ದು, ಉದ್ಯೋಗ ಮೇಳದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿಸಿದರು.ಉದ್ಯೋಗ ಮೇಳಕ್ಕೆ ಬರುವವರಿಗೆ ಇಸ್ಕಾನ್ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ. ವಿಕಲ ಚೇತನರಿಗೆ ಪ್ರತ್ಯೇಕ ನೋಂದಣಿ ಕೌಂಟರ್ ತೆರೆಯಲಾಗುತ್ತದೆ. ಡಿಜಿಟಲ್ ಬೋರ್ಡ್ಗಳಲ್ಲಿ ಕಂಪನಿಗಳು ನಿರೀಕ್ಷಿಸುವ ಉದ್ಯೋಗದ ವಿವರಣೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.ಉದ್ಯೋಗ ಮೇಳದ ಕುರಿತ ಹೆಚ್ಚಿನ ಮಾಹಿತಿಗೆ www.udyogamela.com ಸಂಪರ್ಕಿಸಬಹುದು.