ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇನ್ನೂ160 ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ

Srinivasa Murthy VN
Updated On : 6 Jul 2013, 12:31 pm

ಪಾ.ಶ್ರೀ.ಅನಂತರಾಮ್
ಕನ್ನಡಪ್ರಭವಾರ್ತೆ,ಕೋಲಾರ,ಜು.5

ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಕಡಿಮೆ ಆಗಿದ್ದರೂ ಇನ್ನೂ 160 ಹಳ್ಳಿಗಳಲ್ಲಿ ಹಾಹಾಕಾರ ತಪ್ಪಿಲ್ಲ.
ಗ್ರಾಮ ಪಂಚಾಯಿತಿಗಳ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳಿಂದ ಜಿಲ್ಲೆಯ 156 ಗ್ರಾಪಂ ವ್ಯಾಪ್ತಿಯ 160 ಹಳ್ಳಿಗಳಿಗೆ ನೀರು ಒದಗಿಸಲಾಗುತ್ತಿದೆ. ಟ್ಯಾಂಕರ್‌ಗಳ ಮೂಲಕ 89 ಹಳ್ಳಿಗಳಿಗೆ ಮತ್ತು ರೈತರ ಖಾಸಗಿ ಕೊಳವೆ ಬಾವಿಗಳಿಂದ ಪೈಪ್‌ಲೈನ್ ಮೂಲಕ 71 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು ಪರಿಸ್ಥಿತಿ ಸುಧಾರಿಸಲು ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ.ಟ್ಯಾಂಕರ್‌ಗಳ ಮೂಲಕ ಮತ್ತು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸಿರುವುದಕ್ಕೆ ಸರ್ಕಾರ ಆಗಾಗ ಅನುದಾನ ಬಿಡುಗಡೆ ಮಾಡುತ್ತಿದೆಯಾದರೂ 1.56 ಕೋಟಿ ಬಾಕಿ ನೀಡಬೇಕಾಗಿದೆ. ಸರ್ಕಾರ ಜಿಲ್ಲಾ ಆಡಳಿತದ ಪ್ರಸ್ತಾವನೆಯ ಮೇರೆಗೆ 1 ಕೋಟಿ ರು.ಗಳನ್ನು ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿದ್ದು. ಈ ಹಣ ಬಾಕಿ ಪಾವತಿಗೆ ಬಳಕೆ ಮಾಡಿಕೊಳ್ಳಲಾಗುತ್ತದೋ ಇಲ್ಲವೇ ಸಮಸ್ಯಾತ್ಮಕ ಗ್ರಾಮಗಳಿಗೆ ಪರಿಹಾರ ಕಲ್ಪಿಸಲಾಗುವುದೇ ಎಂಬುದು ಜುಲೈ 8 ರಂದು ಜಿಲ್ಲಾ ಪಂಚಾಯಿತಿಯಲ್ಲಿ ಕರೆಯಲಾಗಿರುವ ಶಾಸಕರ ಅಧ್ಯಕ್ಷತೆಯಲ್ಲಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಣಯವಾಗುವ ಸಾಧ್ಯತೆಗಳಿವೆ.ಕಳೆದ ಫೆಬ್ರವರಿ ತಿಂಗಳಲ್ಲಿ 677 ಹಳ್ಳಿಗಳಲ್ಲಿ ಇದ್ದ ನೀರಿನ ಸಮಸ್ಯೆ ಈಗ 160 ಹಳ್ಳಿಗಳಿಗೆ ಇಳಿದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಶಾಶ್ವತ ಪರಿಹಾರ ಸಿಗಬೇಕಾಗಿರುವುದರಿಂದ ಜಿಲ್ಲೆಯ ಶಾಸಕರು ಜು.8 ರಂದು ನಡೆಯುವ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸರ್ಕಾರದ ಅನುದಾನ ಸದುಪಯೋಗವಾಗಲು ಮತ್ತು ಟ್ಯಾಂಕರ್‌ಗಳ ಮೂಲಕ ನೀಡುತ್ತಿರುವ ನೀರು ಜನತೆಗೆ ಸರಿಯಾಗಿ ತಲುಪುತ್ತಿದೆಯೇ ಇಲ್ಲವೇ, ನಿಜಕ್ಕೂ ಎಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿದು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ಅನುದಾನ ನೀರು ಪಾಲಾಗುವುದರಲ್ಲಿ ಸಂಶಯವಿಲ್ಲ.ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಕುಡಿಯುವ ನೀರಿನ ಸಮಸ್ಯೆ ಕೊಂಚ ಮಟ್ಟಿಗೆ ಸುಧಾರಣೆ ಆಗಿದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿಗೆ ತ್ವರಿತ ಗತಿಯಲ್ಲಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಝುಲ್ಫಿಖಾರ್ ಉಲ್ಲಾ ತಿಳಿಸಿದ್ದಾರೆ.

ತಾಲೂಕು         ಗ್ರಾಪಂ ಸಂಖ್ಯೆ        ಸಮಸ್ಯೆ ಗ್ರಾಮಗಳು            ಟ್ಯಾಂಕರ್ ನೀರು       ಖಾಸಗಿ ನೀರು
ಕೋಲಾರ             36                   23                        17                  6
ಮಾಲೂರು            28                   67                         22                45
ಬಂಗಾರಪೇಟೆ         37                   47                         30                 17
ಮುಳಬಾಗಿಲು         30                   19                         16                  3
ಶ್ರೀನಿವಾಸಪುರ        25                    4                           4                  0
ಒಟ್ಟು                 156                 160                         89                 71

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement